ಹಿಂದೂ-ಮುಸ್ಲಿಮರ ನಡುವೆ ಬೆಂಕಿ ಹಚ್ಚುವ ಕೆಲಸ ನಡೆಯುತ್ತಿದೆ: ವಿಪಕ್ಷ ನಾಯಕ ಆರ್.ಅಶೋಕ್
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದೂ-ಮುಸ್ಲಿಮರ ನಡುವೆ ಬೆಂಕಿ ಹಚ್ಚುವ ಕೆಲಸ ನಡೆಸುತ್ತಿದ್ದಾರೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ.
ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏಳು ಕೋಟಿ ಕನ್ನಡಿಗರ ತಲೆಯ ಮೇಲೆ ಕಲ್ಲು ಹಾಕಿರುವ ಸರಕಾರ, ಅಭಿವೃದ್ಧಿ ಕಾಮಗಾರಿಗೆ ಒಂದು ಅಡಿಗಲ್ಲನ್ನೂ ಹಾಕಿಲ್ಲ. ಆದರೆ, ಹಿಂದೂ ಮತ್ತು ಮುಸ್ಲಿಮರ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತಿ, ಧರ್ಮಗಳ ನಡುವೆ ಬೆಂಕಿ ಹಚ್ಚುವ ವೀರನಾಗಿದ್ದಾರೆ ಎಂದು ಟೀಕಿಸಿದರು.
ಬರ ಪರಿಹಾರಕ್ಕೆ ಇದೇ ವಾರದಲ್ಲಿ 2 ಸಾವಿರ ರೂ. ಬಿಡುಗಡೆ ಮಾಡಲಾಗುವುದು ಎಂದು ಸರಕಾರ ಹೇಳಿದೆ. ಆದರೆ, ಈವರೆಗೂ ಹಣ ಸಿಕ್ಕಿಲ್ಲ. ಶಾಲೆಯ ಶೌಚಾಲಯ ಸ್ವಚ್ಛಗೊಳಿಸಲು ಸರಕಾರದ ಬಳಿ ಹಣವಿಲ್ಲ ಎಂದ ಅವರು, ಇತ್ತೀಚೆಗೆ ಮೂರು ರಾಜ್ಯಗಳಲ್ಲಿ ಬಿಜೆಪಿ ಗೆಲುವು ಸಾಧಿಸಿ ಸೆಮಿಫೈನಲ್ ಗೆದ್ದಿದೆ. ಆದರೆ, ಕಾಂಗ್ರೆಸ್ ಫೈನಲ್‍ಗೆ ಬರುವ ಅವಕಾಶ ಕಳೆದುಕೊಂಡಿದೆ ಎಂದು ಅವರು ವ್ಯಂಗ್ಯವಾಡಿದರು.
ಅಲ್ಲದೆ, ರಾಹುಲ್ ಗಾಂಧಿ ಬದಲು ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಧಾನಿ ಅಭ್ಯರ್ಥಿ ಮಾಡಿ ಎಂದು ಒಕ್ಕೂಟದ ಸದಸ್ಯರು ಹೇಳಿದ್ದಾರೆ. ಇವೆಲ್ಲ ಬೆಳವಣಿಗೆಯಿಂದ ಕಾಂಗ್ರೆಸ್ಸಿಗರು ಹತಾಶರಾಗಿದ್ದು, ಬೇರೆ ವಿಷಯಗಳ ಬಗ್ಗೆ ಮಾತನಾಡಲು ಆರಂಭಿಸಿದ್ದಾರೆ ಎಂದು ಅಶೋಕ್ ಹೇಳಿದರು.