ಶೇ.60ರಷ್ಟು ಕಮಿಷನ್ ಆರೋಪವನ್ನೂ ಸೇರಿಸಿ ಎಸ್ಐಟಿ ತನಿಖೆ ನಡೆಸಲಿ: ಬಸವರಾಜ ಬೊಮ್ಮಾಯಿ

ಬಸವರಾಜ ಬೊಮ್ಮಾಯಿ
ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ದ ಕೇಳಿ ಬಂದಿರುವ ಶೇ.60ರಷ್ಟು ಕಮಿಷನ್ ಆರೋಪವನ್ನೂ ಸೇರಿಸಿ ಎಸ್ಐಟಿ ತನಿಖೆಗೆ ವಹಿಸಬೇಕು ಎಂದು ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಶೇ.40ರಷ್ಟು ಕಮಿಷನ್ ಆರೋಪದ ಬಗ್ಗೆ ಸುಳ್ಳು ಅಪಪ್ರಚಾರ ಮಾಡಿದ ಪ್ರಕರಣಕ್ಕೆ ಈಗಾಗಲೇ ಆಯೋಗ ರಚನೆ ಮಾಡಿದ್ದರು. ಆ ಕಮಿಷನ್ ವರದಿಯಲ್ಲಿ ಏನಿದೆ ಎನ್ನುವುದು ಸಾರ್ವಜನಿಕರಿಗೆ ಗೊತ್ತಾಗಬೇಕು. ಈ ಸರಕಾರ ಕದ್ದು ಮುಚ್ಚಿ ಯಾಕೆ ಮಾಡುತ್ತಾರೆ. ಎರಡು ವರ್ಷದಲ್ಲಿ ಈ ಸರಕಾರದ ವಿರುದ್ದ ಶೇ.60ರಷ್ಟು ಕಮಿಷನ್ ಆರೋಪ ಕೇಳಿ ಬಂದಿದೆ. ಅದನ್ನೂ ಸೇರಿಸಿ ಎಸ್ಐಟಿ ತನಿಖೆಗೆ ಕೊಡಲಿ ಎಂದು ಕೋರಿದರು.
ಸರಕಾರದಲ್ಲಿ ಶೇ.60ರಷ್ಟು ಭ್ರಷ್ಟಾಚಾರ ನಡೆಯುತ್ತಿದೆ ಎಂದು ಲೋಕೋಪಯೋಗಿ, ಅಬಕಾರಿ, ವಿದ್ಯುತ್ ಗುತ್ತಿಗೆದಾರರ ಸಂಘ ಬಹಿರಂಗ ಆರೋಪ ಮಾಡಿದೆ. ತಮ್ಮ ಸರಕಾರದಲ್ಲಿ ನಡೆದಿರುವ ಆರೋಪದ ಸಮೇತ ತನಿಖೆ ಮಾಡಬೇಕು. ನಮ್ಮ ಮೇಲೆ ಸುಳ್ಳು ಪ್ರಚಾರ ರಾಜಕಿಯ ದ್ವೇಷದಿಂದ ಮಾಡಿರುವುದಕ್ಕೆ ಎಲ್ಲಿ ದಾಖಲೆ ಸಿಗುತ್ತದೆ. ಈಗ ಸಿಎಂ ಹಾಗೂ ಡಿಸಿಎಂ ಕಮಿಷನ್ ಕೇಳಿದ್ದರೆ ಲೋಕಾಯುಕ್ತಕ್ಕೆ ದೂರು ಕೊಡಿ ಎಂದು ಹೇಳುತ್ತಾರೆ. ನಾವು ಇದ್ದಾಗಲೂ ಲೊಕಾಯುಕ್ತಕ್ಕೆ ದೂರು ಕೊಡಿ ಅಂತ ಹೇಳಿದ್ದೆ ಕೊಡಲಿಲ್ಲ ಎಂದು ಹೇಳಿದರು.
ಈ ಸರಕಾರ ಹಾಗೂ ಸಿಎಂ ಸಿದ್ದರಾಮಯ್ಯ ಜಾತಿ ಗಣತಿ ರಾಜಕಾರಣ ಮಾಡುತ್ತಿದೆ. ಗಣತಿ ಮಾಡುವ ಮುಂಚೆ ಜಾತಿ ಗಣತಿ ಎಂದು ಆದೇಶ ಮಾಡಬೇಕಿತ್ತು. ಸಾಮಾಜಿಕ ಆರ್ಥಿಕ ಸಮೀಕ್ಷೆ ಅಂತ ಹೇಳಿ ಜಾತಿ ಬರೆಸಿಕೊಂಡು ಬಂದಿದ್ದಾರೆ. ಹಿಂದುಳಿದ ವರ್ಗದ ಆಯೋಗದ ಅಧ್ಯಕ್ಷರು ಕೊಟ್ಟ ವರದಿಗೆ ಕಾರ್ಯದರ್ಶಿ, ಸದಸ್ಯರು ಸಹಿ ಹಾಕಿಲ್ಲ. ಇನ್ಬೊಬ್ಬ ಅಧ್ಯಕ್ಷರು ಅದಕ್ಕೆ ತೇಪೆ ಹಚ್ಚಿರುವ ವರದಿ ನೀಡಿದ್ದಾರೆ. ಈ ಸರಕಾರಕ್ಕೆ ಹಿಂದುಳಿದ ವರ್ಗದವರ ಬಗ್ಗೆ ಕಾಳಜಿ ಇದ್ದರೆ ವರದಿಯನ್ನು ಬಹಿರಂಗ ಮಾಡಬೇಕು ಎಂದು ಒತ್ತಾಯಿಸಿದರು.