‘ಡೆಂಗ್ಯೂ’ ಪ್ರಕರಣ ಹೆಚ್ಚಳ | ಪ್ರತಿ ಶುಕ್ರವಾರ ಡೆಂಗ್ಯೂ ಕುರಿತು ವಿಶೇಷ ಅಭಿಯಾನಕ್ಕೆ ಸಿಎಂ ಸೂಚನೆ
Photo : x/@dineshgrao
ಬೆಂಗಳೂರು : ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿದ್ದು, ಡೆಂಗ್ಯೂ ಪತ್ತೆ ಮಾಡಿ, ರೋಗ ದೃಢವಾಗಿದ್ದರೆ ಅಗತ್ಯ ಚಿಕಿತ್ಸೆ ನೀಡಬೇಕು. ಪ್ರತಿ ಶುಕ್ರವಾರ ‘ಡೆಂಗ್ಯೂ ರೋಗ ಹರಡುವ ಮೂಲ ಪತ್ತೆ ಮತ್ತು ನಾಶ’ ವಿಶೇಷ ಅಭಿಯಾನ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮಂಗಳವಾರ ನಗರದಲ್ಲಿ ಆಯೋಜಿಸಿದ್ದ ‘ಡೆಂಗ್ಯೂ ಪ್ರಕರಣಗಳ ಹೆಚ್ಚಳ’ ಕುರಿತ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ನಿನ್ನೆಯವರೆಗೆ ಒಟ್ಟು 5374 ಪ್ರಕರಣ ವರದಿಯಾಗಿದ್ದು, 5 ಮರಣಗಳು ಸಂಭವಿಸಿವೆ. ಕೇಂದ್ರ ಸರಕಾರವು ಡೆಂಗ್ಯೂ ಪ್ರಕರಣಗಳಲ್ಲಿ ಮರಣ ಪ್ರಮಾಣ ಶೇ. 0.5 ನ್ನು ಮೀರುವಂತಿಲ್ಲ ಎಂದು ನಿಗದಿ ಪಡಿಸಿದೆ. ರಾಜ್ಯದಲ್ಲಿ ಮರಣ ಪ್ರಮಾಣ ಶೇ.0.09 ಇದೆ ಎಂದರು.
ಬೆಂಗಳೂರು, ಚಿಕ್ಕಮಗಳೂರು, ಮೈಸೂರು, ಹಾವೇರಿ, ಶಿವಮೊಗ್ಗ, ಚಿತ್ರದುರ್ಗ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಡೆಂಗ್ಯೂ ಪ್ರಕರಣಗಳು ಕಾಣಿಸಿಕೊಂಡಿವೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 1,230 ಪ್ರಕರಣಗಳು ವರದಿಯಾಗಿವೆ. ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ನಿಯಂತ್ರಣಕ್ಕೆ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಚಿಕಿತ್ಸಾ ಸೌಲಭ್ಯಗಳು, ಔಷಧಿಗಳು ಲಭ್ಯವಿರುವುದನ್ನು ಖಾತರಿಪಡಿಸಬೇಕು. ಆಶಾ ಕಾರ್ಯಕರ್ತೆಯರು, ನರ್ಸಿಂಗ್ ವಿದ್ಯಾರ್ಥಿಗಳು, ಎನ್ಎಸ್ಎಸ್ ವಿದ್ಯಾರ್ಥಿಗಳು ಮತ್ತಿತರ ಸ್ವಯಂ ಸೇವಕರ ನೆರವಿನೊಂದಿಗೆ ಮನೆ-ಮನೆ ಸಮೀಕ್ಷೆ ನಡೆಸಿ ಅರಿವು ಮೂಡಿಸಬೇಕು ಎಂದು ಅವರು ತಿಳಿಸಿದರು.
ಪ್ರತಿ ವಾರ ಬಿಬಿಎಂಪಿ, ನಗರಾಭಿವೃದ್ಧಿ ಮತ್ತು ಆರೋಗ್ಯ ಇಲಾಖೆಯವರು ಜಂಟಿಯಾಗಿ ಡೆಂಗ್ಯೂ ನಿಯಂತ್ರಣ ಕುರಿತು ಪರಿಶೀಲನೆ ನಡೆಸಬೇಕು. ಸ್ವಚ್ಛತೆ ಹಾಗೂ ನೀರು ನಿಲ್ಲದಂತೆ ನಗರ ಸ್ಥಳೀಯ ಸಂಸ್ಥೆಗಳು ಕ್ರಮ ಕೈಗೊಳ್ಳಬೇಕು. ಡೆಂಗ್ಯೂ ನಿಯಂತ್ರಣಕ್ಕೆ ಸಾರ್ವಜನಿಕರು ಸಹಕಾರ ನೀಡುವುದು ಅತಿ ಅಗತ್ಯವಾಗಿದ್ದು, ಡೆಂಗ್ಯೂ ಬರುವ ಈಡಿಸ್ ಈಜಿಪ್ಟೈ ಎಂಬ ಸೊಳ್ಳೆಯ ಲಾರ್ವಾ ಮತ್ತು ಮೊಟ್ಟೆಗಳನ್ನು ಮೂಲದಲ್ಲಿಯೇ ನಾಶ ಮಾಡಬೇಕು ಎಂದು ಸಾರ್ವಜನಿಕರಲ್ಲಿ ಅರಿವು ಮೂಡಿಸಿ ಎಂದು ಅವರು ಸೂಚಿಸಿದರು.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಆತಂಕ ಪಡುವುದು ಬೇಡ. ಡೆಂಗ್ಯೂ ಜ್ವರದಿಂದ ಸಾವುಗಳಾಗದಂತೆ ಮುನ್ನೆಚ್ವರಿಕೆ ವಹಿಸುವುದು ಮುಖ್ಯ. ಡೆಂಗ್ಯೂ ಜ್ವರದ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ವಿನ ಜಾಗೃತಿ ಮೂಡಿಸಿ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಭೆಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಇದ್ದರು.