ಪೊಲೀಸರ ವೈದ್ಯಕೀಯ ವೆಚ್ಚ 1,500 ರೂ.ಗೆ ಹೆಚ್ಚಳ: ಸಿಎಂ ಸಿದ್ದರಾಮಯ್ಯ
Photo: X/@CMofKarnataka
ಬೆಂಗಳೂರು: ರಾಜ್ಯದ ಎಲ್ಲ ಪೊಲೀಸರ ವೈದ್ಯಕೀಯ ವೆಚ್ಚವನ್ನು 1 ಸಾವಿರ ರೂ.ದಿಂದ 1,500 ರೂಪಾಯಿಗೆ ಹೆಚ್ಚಳ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ.
ಮಂಗಳವಾರ ನಗರದ ನೃಪತುಂಗ ರಸ್ತೆಯ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮಾವೇಶದಲ್ಲಿ ಮಾತನಾಡಿದ ಅವರು, ಸಿಇಎನ್ ಠಾಣಾಧಿಕಾರಿಗಳ ಹುದ್ದೆಯನ್ನು ಎಸಿಪಿ ಮತ್ತು ಡಿಸಿಪಿ ಮಟ್ಟಕ್ಕೆ ಉನ್ನತೀಕರಣ ಮಾಡಲಾಗುವುದು. ಜತೆಗೆ, ಬೆಂಗಳೂರು ನಗರದಲ್ಲಿ 8 ಹೆಚ್ಚುವರಿ ಡಿಸಿಪಿ ಹುದ್ದೆಗಳ ಸೃಷ್ಠಿಸಲಾಗುವುದು ಎಂದು ಹೇಳಿದರು.
ಅಪರಾಧ, ಕಾನೂನು ಬಾಹಿರ ಚಟುವಟಿಕೆಗಳ ಪ್ರಮಾಣ ಹೆಚ್ಚಾದರೆ ಆಯಾ ವ್ಯಾಪ್ತಿಯಲ್ಲಿರುವ ಡಿಸಿಪಿ ಅಧಿಕಾರಿಗಳನ್ನೆ ಹೊಣೆ ಮಾಡಿ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ, ಕಾನೂನು ಸುವ್ಯವಸ್ಥೆ ಚೆನ್ನಾಗಿದ್ದರೆ ರಾಜ್ಯದ ಅಭಿವೃದ್ಧಿ ಸಾಧ್ಯ. ಜನರ ತಲಾ ಆದಾಯ ಮತ್ತು ಜಿಡಿಪಿ ಹೆಚ್ಚಾಗುತ್ತದೆ. ಹೂಡಿಕೆದಾರರು ಬರುತ್ತಾರೆ. ಆದ್ದರಿಂದ ಕಾನೂನು ಸುವ್ಯವಸ್ಥೆಯನ್ನು ಸರಿಯಾಗಿ ಕಾಪಾಡಬೇಕು. ಅದೇ ರೀತಿ, ಕಳವು ಪ್ರಕರಣಗಳನ್ನು ನಿಯಂತ್ರಣ ಮಾಡಲು ಮುಂದಾಗಬೇಕು.ಇಲ್ಲದಿದ್ದರೆ ಗಸ್ತು ವ್ಯವಸ್ಥೆ, ಹೊಯ್ಸಳ ಸಿಬ್ಬಂದಿ ಮತ್ತು ಠಾಣಾಧಿಕಾರಿಗಳು ವೈಫಲ್ಯರಾಗಿದ್ದಾರೆ ಎಂದೇ ಅರ್ಥ. ಇದೇ ಸ್ಥಿತಿ ಮುಂದುವರೆದರೆ ಡಿಸಿಪಿಗಳನ್ನು ಕರ್ತವ್ಯಲೋಪಕ್ಕೆ ಹೊಣೆ ಮಾಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಗೃಹ ಕಾರ್ಯದರ್ಶಿ ಉಮಾಶಂಕರ್, ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್, ಮುಖ್ಯಮಂತ್ರಿಗಳ ಕಾರ್ಯದರ್ಶಿ ತ್ರಿಲೋಕ್ ಚಂದ್ರ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಗೋವಿಂದರಾಜು ಮತ್ತು ನಸೀರ್ ಅಹ್ಮದ್ ಸೇರಿದಂತೆ ಪ್ರಮುಖರಿದ್ದರು.