ರಾಜ್ಯದ ಜಲಾಶಯಗಳ ನೀರಿನ ಮಟ್ಟ ಹೆಚ್ಚಳ

ಸಾಂದರ್ಭಿಕ ಚಿತ್ರ
ಬೆಂಗಳೂರು : ರಾಜ್ಯಾದ್ಯಂತ ಒಂದು ವಾರದಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಜಲಾಶಯಗಳಿಗೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಹೆಚ್ಚಾಗಿದೆ. ಜೂನ್ ಮೊದಲ ವಾರದಲ್ಲಿ ರಾಜ್ಯದ ಎಲ್ಲ ಜಲಾಶಯಗಳಲ್ಲಿ 173 ಟಿಎಂಸಿ ನೀರು ಸಂಗ್ರಹವಾಗಿತ್ತು. 3460 ಸಾವಿರ ಕ್ಯೂಸೆಕ್ಸ್ ನೀರು ಒಳ ಹರಿವು ಹಾಗೂ 12,662 ಕ್ಯೂಸೆಕ್ಸ್ ನೀರು ಹೊರ ಹರಿವು ಇತ್ತು.
ಆದರೆ ಈಗ 190 ಟಿಎಂಸಿ ನೀರು ಸಂಗ್ರವಾಗಿದ್ದು, 15,680 ಕ್ಯೂಸೆಕ್ಸ್ ಒಳ ಹಾಗೂ 7,414 ಕ್ಯೂಸೆಕ್ಸ್ ಹೊರ ಹರಿವು ಇದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಜಲಾಶಯಗಳಲ್ಲಿ 178 ಟಿಎಂಸಿ ನೀರು ಸಂಗ್ರವಾಗಿತ್ತು. ಕೃಷ್ಣಾ ನದಿ ಪಾತ್ರದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಭದ್ರಾ, ತುಂಗಭದ್ರಾ, ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳಿಗೆ ಒಳ ಹರಿವು ಅಧಿಕವಾಗಿದೆ. ಈಗಾಗಲೇ 87 ಟಿಎಂಸಿ ನೀರು ಹರಿದು ಬಂದಿದೆ.
ವಿದ್ಯುತ್ ಯೋಜನೆಯಲ್ಲಿ ಪ್ರಮುಖ ಪಾತ್ರವಹಿಸುತ್ತಿರುವ ಸೂಪಾ, ಲಿಂಗನಮಕ್ಕಿ ಹಾಗೂ ವರಾಹಿ ಜಲಾಶಯಗಳಿಗೆ 48 ಟಿಎಂಸಿ ಹಾಗೂ ಕಾವೇರಿ ಕೊಳ್ಳದಲ್ಲಿಯೂ ಉತ್ತಮ ಮಳೆಯಾಗುತ್ತಿದ್ದು, ಕೆಆರ್ ಎಸ್, ಕಬಿನಿ, ಹಾರಂಗಿ ಹಾಗೂ ಹೇಮಾವತಿ ಜಲಾಶಯಗಳಿಗೆ 38 ಟಿಎಂಸಿ ನೀರು ಹರಿದು ಬಂದಿದೆ. ಒಟ್ಟಾರೆ ಮುಂಗಾರು ಆರಂಭವಾದ ಬಳಿಕ ರಾಜ್ಯದ ಜಲಾಶಯಗಳಲ್ಲಿ 16 ಟಿಎಂಸಿ ನೀರು ಸೇರಿದೆ.
ಹಿಂದಿನ ವರ್ಷ ತೀವ್ರ ಮಳೆಯ ಕೊರತೆಯಿಂದ ಬತ್ತಿ ಹೋಗಿದ್ದ ಜಲಾಶಯಗಳು, ಈ ವರ್ಷ ಸುರಿಯುತ್ತಿರುವ ಮಳೆಗೆ ಮೈದುಂಬಿವೆ. ಮಹಾರಾಷ್ಟ್ರ, ಬೆಳಗಾವಿ ಜಿಲ್ಲೆಯಲ್ಲಿ ನಿರಂತರ ಸುರಿಯುತ್ತಿರುವ ಮಳೆಯಿಂದ ಉತ್ತರ ಕರ್ನಾಟಕದ ನದಿಗಳು ಮೈದುಂಬಿವೆ. ಆಲಮಟ್ಟಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಳವಾಗಿದೆ.
ಲಿಂಗನಮಕ್ಕಿಯಲ್ಲಿ 13.90 ಟಿ.ಎಂ.ಸಿ, ಸೂಪಾ ಜಲಾಶಯದಲ್ಲಿ 30.24, ವರಾಹಿಯಲ್ಲಿ 3.10, ಹಾರಂಗಿಯಲ್ಲಿ 3.27, ಹೇಮಾವತಿಯಲ್ಲಿ 10.73, ಕೆಆರ್ ಎಸ್ ನಲ್ಲಿ 14.51, ಕಬಿನಿಯಲ್ಲಿ 8.97, ಭದ್ರಾ ಜಲಾಶಯದಲ್ಲಿ 15.17, ತುಂಗಭದ್ರಾದಲ್ಲಿ 5.69, ಘಟಪ್ರಭಾದಲ್ಲಿ 7.91, ಮಲಪ್ರಭಾದಲ್ಲಿ 6.45, ಆಲಮಟ್ಟಿಯಲ್ಲಿ 29.13, ನಾರಾಯಣಪುರ ಡ್ಯಾಮ್ ನಲ್ಲಿ 21.16, ವಾಣಿವಿಲಾಸ ಸಾಗರದಲ್ಲಿ 18.24 ಟಿ.ಎಂ.ಸಿ ನೀರು ಸಂಗ್ರಹವಾಗಿದೆ.