ಹುಟ್ಟುವ ಮೊದಲೇ ಸತ್ತಿದೆ ‘ಇಂಡಿಯಾ ಮೈತ್ರಿಕೂಟ’: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಬೆಂಗಳೂರು: ‘ಇಂಡಿಯಾ ಮೈತ್ರಿಕೂಟ’ ಹುಟ್ಟುವ ಮೊದಲೇ ಸತ್ತಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಹ್ಲಾದ್ ಜೋಶಿ ಇಂದಿಲ್ಲಿ ಟೀಕಿಸಿದ್ದಾರೆ.
ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಇಂಡಿಯಾ ಒಕ್ಕೂಟ ಜನ್ಮತಾಳುವ ಮೊದಲೇ ಸತ್ತಂತೆ ಇದೆ. ನೇತೃತ್ವ, ನೀತಿ, ನಿಯತ್ತು ಮೂರೂ ಇಲ್ಲದಂತಹದ್ದು ಇಂಡಿಯಾ ಒಕ್ಕೂಟ. ಇದನ್ನು ಅರಿತೇ ಬಿಹಾರ ಸಿಎಂ ನಿತೀಶ್ ಕುಮಾರ್, ಪಶ್ಚಿಮ ಬಂಗಾಳ ಸಿಏಂ ಮಮತಾ ಬ್ಯಾನರ್ಜಿ ಹೊರ ಬಂದಿದ್ದಾರೆ ಎಂದು ಹೇಳಿದರು.
‘ಕಾಂಗ್ರೆಸ್ ಮತ್ತು ಆರ್ ಜೆಡಿ ಎರಡೂ ಕಡು ಭ್ರಷ್ಟರ ಪಕ್ಷಗಳು. ಕೇವಲ ಸ್ವ ಕುಟುಂಬ ಮತ್ತು ಪರಿವಾರಕ್ಕಾಗಿ ಹೋರಾಡುವ ಪಕ್ಷಗಳು. ಜನರ ಕಷ್ಟ, ದುಃಖ, ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ತಮಗೆ ಸಂಬಂಧವೇ ಇಲ್ಲದಂತೆ ವರ್ತಿಸುವ ನಾಯಕರ ಪಕ್ಷಗಳು’ ಎಂದು ಪ್ರಹ್ಲಾದ್ ಜೋಶಿ ಲೇವಡಿ ಮಾಡಿದರು.
‘ಇಂಡಿಯಾ ಒಕ್ಕೂಟದಲ್ಲಿ ಮನೆ ಮಾಡಿದ್ದ ವಿರೋಧಿ ನಡೆಯಿಂದ ಬೇಸತ್ತು, ದುಃಖಿತರಾಗಿ ನಿತೀಶ್ ಕುಮಾರ್ ಹೊರ ಬಂದಿದ್ದಾರೆ. ಆರ್ ಜೆಡಿ ಮತ್ತು ಕಾಂಗ್ರೆಸ್ ಮೈತ್ರಿ, ಮಹಾ ಘಟಬಂಧನ್ ಕೇವಲ ಫೋಟೋ ಶೂಟ್‍ಗಾಗಿ ಎಂಬುದನ್ನು ಮೊದಲೇ ಹೇಳಿದ್ದೆವು. ಇಂಡಿಯಾ ಒಕ್ಕೂಟ ಸೇರಿದವರಿಗೆ ಈಗ ಅದರ ನೈಜ ಅನುಭವವಾಗುತ್ತಿದೆ’ ಎಂದು ಜೋಶಿ ಹೇಳಿದರು.