ಬಿಜೆಪಿಯ ನಡವಳಿಕೆಯಿಂದ ದೇಶದ ಸಂಸತ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆತ್ತಲಾಗಿದೆ: ಎಚ್.ವಿಶ್ವನಾಥ್
ಮೈಸೂರು: ಕೇಂದ್ರದ ಬಿಜೆಪಿ ಸರ್ಕಾರದ ನಡವಳಿಕೆಯಿಂದ ದೇಶದ ಸಂಸತ್ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆತ್ತಲಾಗಿದೆ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಂಸತ್ ಭವನದೊಳಗೆ ನುಸುಳಿದ ನುಸುಳುಕೋರರಿಗೆ ಪಾಸ್ ಕೊಟ್ಟವರು ಯಾರು? ಅವರು ಮೂರು ಸುತ್ತಿನ ಬೇಹುಗಾರಿಕೆ ಬೇಧಿಸಿ ಒಳಹೋಗಿ ದಾಳಿ ನಡೆಸಿದ್ದಾರೆ ಎಂದರೆ ಎಂತಹ ಭದ್ರತೆ ಇದೆ. ಇದು ಸಂಸತ್ ಗೆ ಬರೆದ ದ್ರೋಹ, ಇದರ ಚರ್ಚೆಗೆ ಪ್ರತಿಪಕ್ಷಗಳು ಮುಂದಾರೆ ಅಮಾನತ್ತುಗೊಳಿಸಲಾಗುತ್ತದೆ. ಇದು ಯಾವ ನ್ಯಾಯ? ಎಂದು ಪ್ರಶ್ನಿಸಿದರು.
ದೇಶದ ಸಂಸತ್, ರಾಜ್ಯಸಭೆ, ವಿಧಾನಸಭೆ, ವಿಧಾನಪರಿಷತ್ ಚರ್ಚೆ ಮಾಡಲೆಂದೇ ಇರುವುದು ಅಲ್ಲಿ ಚರ್ಚೆಗೆ ಅವಕಾಶ ಮಾಡಿಕೊಡಲಿಲ್ಲ ಎಂದರೆ ಎಲ್ಲಿಗೆ ಹೋಗಬೇಕು. ಸಂಸತ್ ಭವನದೊಳಗೆ ನುಸುಳಲು ಪಾಸ್ ನೀಡಿವರು ಯಾರು. ಯಾಕೆ ಇಂತಹ ಘಟನೆ ಸಂಭವಿಸಿತು ಎಂದು ಚರ್ಚೆ ಮಾಡಲು ಮುಂದಾದ 142 ಸಂಸದರನ್ನು ಅಮಾನತುಗೊಳಿಸುವುದು ಯಾವ ನ್ಯಾಯ? ಕೂಡಲೇ ಕೇಂದ್ರ ಸರ್ಕಾರ ಅಮಾನತು ಆದೇಶವನ್ನು ಹಿಂಪಡೆದು ಸಮಾಧಾನಕರ ಚರ್ಚೆಗೆ ಅವಕಾಶ ಕಲ್ಪಿಸಬೇಕು. ದೇಶದ ಜನ ದಡ್ಡರಲ್ಲ ಶೇ.75 ರಷ್ಟು ಸಾಕ್ಷರತೆಯನ್ನು ಹೊಂದಿದ್ದಾರೆ ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ಹೇಳಿದರು.
ಒಬ್ಬ ಪ್ರಧಾನಮಂತ್ರಿ ಇಂತಹ ದೊಡ್ಡ ಘಟನೆ ಕುರಿತು ಬೀದಿಯಲ್ಲಿ ನಿಂತು ಉತ್ತರ ಕೊಡುವುದಲ್ಲ, ಪ್ರಜಾಪ್ರಭುತ್ವದ ಶಕ್ತಿ ಕೇಂದ್ರದಲ್ಲಿ ನಿಂತು ಉತ್ತರಕೊಡಬೇಕು. ಆದರೆ ನಮ್ಮ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಸಂಸದರ ಪ್ರಶ್ನೆಗಳನ್ನು ಎದುರಿಸುವ ಧೈರ್ಯವೂ ಇಲ್ಲ, ಮಾಧ್ಯಮದವರ ಮುಂದೆ ಬರುವ ತಾಕತ್ತು ಇಲ್ಲ ಎಂದು ಕಿಡಿಕಾರಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಸಂಸದೀಯ ವ್ಯವಾಹರಗಳ ಸಚಿವ ಪ್ರಹ್ಲಾದ್ ಜೋಶಿ ಅವರು ಸಂಸದರ ಅಮಾನತು ಆದೇಶವನ್ನು ಹಿಂಪಡೆದು ಚರ್ಚೆಗೆ ಅವಕಾಶ ಮಾಡಿಕೊಟ್ಟು ಸತ್ಯವನ್ನು ಜನರಿಗೆ ತಿಳಿಸುವ ಕೆಲವನ್ನು ಮಾಡಬೇಕು ಎಂದು ಒತ್ತಾಯಿಸಿದರು.
ಖರ್ಗೆ ಪ್ರಧಾನಿ ಅಭ್ಯರ್ಥಿ ಘೋಷಣೆ ಒಳ್ಳೆಯ ಬೆಳವಣಿಗೆ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಇಂಡಿಯಾ ಮೈತ್ರಿ ಕೂಟ ಪ್ರಧಾನ ಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಿರುವುದು ಸಂತೋಷಕರ ವಿಚಾರ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ತಿಳಿಸಿದರು.
ದೇಶದ ಉತ್ತಮ ಸಂಸದೀಯ ನಾಯಕ ರಾಜ್ಯ ಮತ್ತು ದೇಶದಲ್ಲಿ ಹಲವಾರು ಸಚಿವ ಸ್ಥಾನಗಳನ್ನು ಅಲಂಕರಿಸಿ ಉತ್ತಮವಾದ ಆಡಳಿತ ನೀಡಿರುವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಿರುವುದು ದೇಶದ ಜನತಂತ್ರ ವ್ಯವಸ್ಥೆ ಸಂತೋಷ ಪಡಲಿದೆ. ಶೋಶಿತ ಸಮುದಾಯದಿಂದ ಬಂದಂತಹ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನ ಮಂತ್ರಿಯಾಗಲಿ ಎಂದು ಹಾರೈಸಿದರು.