ಆರು ಪ್ರಯಾಣಿಕರನ್ನು ಬಿಟ್ಟು ಮಂಗಳೂರಿಗೆ ಹಾರಿದ್ದ ಇಂಡಿಗೊ ವಿಮಾನ; ಮುಂದೇನಾಯ್ತು?
ಇಂಡಿಗೊ ವಿಮಾನ. | Photo : PTI
ಮಂಗಳೂರು: ಹೊರಡಬೇಕಿದ್ದ ಸಮಯಕ್ಕೆ 10 ನಿಮಿಷ ಮುಂಚಿತವಾಗಿ ಟೇಕಾಫ್ ಆಗಿ, ಆರು ಮಂದಿ ಪ್ರಯಾಣಿಕರನ್ನು ಬೆಂಗಳೂರು ನಿಲ್ದಾಣದಲ್ಲೇ ಬಿಟ್ಟು ಯಾನ ಆರಂಭಿಸಿದ್ದ ಇಂಡಿಗೊ ವಿಮಾನ, ಯಾನ ತಪ್ಪಿಸಿಕೊಂಡ ಆರು ಪ್ರಯಾಣಿಕರಿಗೆ ಉಚಿತ ಟಿಕೆಟ್ ನೀಡುವುದಾಗಿ ಪ್ರಕಟಿಸಿದೆ.
ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಂಗಳೂರಿಗೆ ಶುಕ್ರವಾರ ತೆರಳಬೇಕಿದ್ದ 6E6162 ವಿಮಾನ ನಿಗದಿತ ಸಮಯ ಮಧ್ಯಾಹ್ನ 2.55 ರ ಬದಲು 10 ನಿಮಿಷ ಮುಂಚಿತವಾಗಿ ಅಂದರೆ 2.45ಕ್ಕೆ ಟೇಕಾಫ್ ಆಗಿತ್ತು. ತಮ್ಮ ಬಳಿ ಬೋರ್ಡಿಂಗ್ ಪಾಸ್ ಇದ್ದರೂ ವಿಮಾನ ತಪ್ಪಿಹೋಗಿದೆ ಎಂದು ಆರು ಪ್ರಯಾಣಿಕರ ಪೈಕಿ ಇಬ್ಬರು ದೂರು ನೀಡಿದ್ದರು. ವಿಮಾನ ನಿಗದಿತ ಅವಧಿಗೆ ಮುನ್ನ ತೆರಳುತ್ತಿರುವ ಬಗ್ಗೆ ವಿಮಾನ ನಿಲ್ದಾಣ ಪ್ರಕಟಣೆ ನೀಡಿತ್ತು ಎಂದು ಇಂಡಿಗೊ ಸಿಬ್ಬಂದಿ ಸಬೂಬು ಹೇಳಿದ್ದರು.
ಆದಾಗ್ಯೂ ಆರು ಮಂದಿ ಪ್ರಯಾಣಿಕರಿಗೆ ರಾತ್ರಿ 8.20ಕ್ಕೆ ಮಂಗಳೂರಿಗೆ ಹೊರಡುವ ಮುಂದಿನ ವಿಮಾನ (6E578) ದಲ್ಲಿ ಪ್ರಯಾಣಿಸಲು ಉಚಿತ ಟಿಕೆಟ್ ನೀಡಲಾಯಿತು. ರಾತ್ರಿ 8.45ಕ್ಕೆ ಹೊರಟ ವಿಮಾನ 9.50ಕ್ಕೆ ಮಂಗಳೂರು ತಲುಪಿದೆ ಎಂದು ಮೂಲಗಳು ಹೇಳಿವೆ. ಈ ವಿಳಂಬದಿಂದಾಗಿ ಆರು ಮಂದಿ ಪ್ರಯಾಣಿಕ ಪೈಕಿ ಇಬ್ಬರು ದೆಹಲಿಗೆ ತೆರಳಬೇಕಿದ್ದ ವಿಮಾನ ತಪ್ಪಿಸಿಕೊಳ್ಳಬೇಕಾಯಿತು.
ಇಂಡಿಗೊ ಗ್ರಾಹಕ ಅನುಭವ ವಿಭಾಗದ ಸಿಬ್ಬಂದಿ ಈ ಆರೋಪವನ್ನು ನಿರಾಕರಿಸಿದ್ದು, ನಿಗದಿತ ಅವಧಿಗೇ ವಿಮಾನ ಟೇಕಾಫ್ ಆಗಿದೆ ಎಂದು ಪ್ರತಿಪಾದಿಸಿದ್ದಾರೆ. " 2.57ಕ್ಕೆ ವಿಮಾನ ನಿಲ್ದಾಣದಿಂದ ನಿರ್ಗಮಿಸಿದೆ. ನೆಲದಿಂದ ಹೊರಟ ಸಮಯವನ್ನು ನಾವು ನಿರ್ಗಮನ ಸಮಯ ಎಂದು ಪರಿಗಣಿಸುತ್ತೇವೆ. ಆದಾಗ್ಯೂ ಅವರು ಅನುಭವಿಸಿದ ಅನಾನುಕೂಲತೆಗಾಗಿ ಕ್ಷಮೆ ಯಾಚಿಸುತ್ತೇವೆ" ಎಂದು ಅವರು ಹೇಳಿದ್ದಾರೆ.