ದಕ್ಷಿಣ ಕೊರಿಯಾದ ಕಂಪನಿಗಳ ಜೊತೆ ಸೋಲ್‌ನಲ್ಲಿ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಸಮಾಲೋಚನೆ
ವಾಹನ ಬಿಡಿಭಾಗ ತಯಾರಿಕೆ ; ಬಂಡವಾಳ ಹೂಡಿಕೆಗೆ ಹೆಚ್ಚಿದ ಒಲವು
ಬೆಂಗಳೂರು : ದಕ್ಷಿಣ ಕೊರಿಯಾಕ್ಕೆ ಭೇಟಿ ನೀಡಿರುವ ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ನೇತೃತ್ವದಲ್ಲಿನ ರಾಜ್ಯದ ಉನ್ನತ ಮಟ್ಟದ ನಿಯೋಗವು ಸೋಮವಾರ ಸೋಲ್‌ನಲ್ಲಿ ಹೊಯ್ಸಂಗ್ ಅಡ್ವಾನ್ಸ್ಡ್ ಮಟೇರಿಯಲ್ಸ್, ಎಚ್‌ಎಲ್ ಮಾಂಡೊ ಕಾರ್ಪೊರೇಷನ್, ನಿಫ್ಕೊ, ಡಿಎನ್ ಸೊಲುಷನ್ಸ್ ಮತ್ತು ಹುಂಡೈ ಮೋಟರ್ಸ್‌ನ ಮುಖ್ಯಸ್ಥರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿತು.
ಜಪಾನಿನ ಐದು ದಿನಗಳ ಯಶಸ್ವಿ ಭೇಟಿ ಪೂರ್ಣಗೊಳಿಸಿ, ದಕ್ಷಿಣ ಕೊರಿಯಾಕ್ಕೆ ತೆರಳಿರುವ ನಿಯೋಗವು ಈ ತಿಂಗಳ 5ರವರೆಗೆ ಅಲ್ಲಿನ ಬಹುರಾಷ್ಟ್ರೀಯ ಕಂಪನಿಗಳ ಜೊತೆ ಸಮಾಲೋಚನೆ ನಡೆಸಿ ಬಂಡವಾಳ ಹೂಡಿಕೆ ಆಕರ್ಷಿಸಲಿದೆ.
ರಾಜ್ಯದಲ್ಲಿ ವಾಹನ ಬಿಡಿಭಾಗ, ಜವಳಿ ಉತ್ಪನ್ನ, ನವೀಕರಿಸಬಹುದಾದ ಇಂಧನ, ಮಷಿನ್‌ಟೂಲ್ಸ್ ತಯಾರಿಕಾ ವಲಯಗಳಲ್ಲಿ ಬಂಡವಾಳ ಹೂಡಿಕೆ ಹೆಚ್ಚಿಸಲು, ವಹಿವಾಟು ವಿಸ್ತರಿಸಲು ದಕ್ಷಿಣ ಕೊರಿಯಾದ ಈ ಬಹುರಾಷ್ಟ್ರೀಯ ಕಂಪನಿಗಳು ತೀವ್ರ ಆಸಕ್ತಿ ವ್ಯಕ್ತಪಡಿಸಿವೆ.
ರಾಜ್ಯದಲ್ಲಿ ವಿದ್ಯುತ್‌ಚಾಲಿತ ವಾಹನಗಳ (ಇವಿ) ಮಾರುಕಟ್ಟೆಯು ವ್ಯಾಪಕವಾಗಿ ವಿಸ್ತರಣೆ ಆಗುತ್ತಿರುವುದು ಮತ್ತು ಭಾರತದಲ್ಲಿನ ತಯಾರಿಕಾ ಘಟಕಗಳಲ್ಲಿ ʼಇವಿʼಗಳನ್ನು ತಯಾರಿಸುವ ಬಗ್ಗೆ ಹುಂಡೈ ಮುಖ್ಯಸ್ಥರ ಜೊತೆಗಿನ ಸಭೆಯಲ್ಲಿ ಪ್ರಮುಖವಾಗಿ ಚರ್ಚಿಸಲಾಯಿತು.
ರಾಜ್ಯದಲ್ಲಿ ಕೈಗಾರಿಕಾ ಅಶಾಂತಿ (ಕಾರ್ಮಿಕರ ವಿವಾದಗಳು) ಕಡಿಮೆ ಪ್ರಮಾಣದಲ್ಲಿ ಇರುವುದು ಮತ್ತು ಪೂರೈಕೆ ಸರಪಣಿಯಲ್ಲಿ ಸ್ಥಿರತೆ ಇರುವುದನ್ನು ಸಚಿವರು ಹುಂಡೈ ಕಂಪನಿಯ ಪ್ರಮುಖರ ಗಮನಕ್ಕೆ ತಂದರು.
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ವಾಹನಗಳ ಪ್ಲಾಸ್ಟಿಕ್ ಬಿಡಿಭಾಗ ತಯಾರಿಸುವ ಘಟಕ ಸ್ಥಾಪಿಸಲಿರುವ ನಿಫ್ಕೊ ಕೊರಿಯಾ ಕಂಪನಿಗೆ ಅಗತ್ಯವಾದ ಭೂಮಿ ಸ್ವಾಧೀನ ಮತ್ತು ಇತರ ಅನುಮೋದನೆಗಳಿಗೆ ರಾಜ್ಯ ಸರ್ಕಾರ ತ್ವರಿತವಾಗಿ ಸ್ಪಂದಿಸಲಿದೆ. ಕಾರ್ಖಾನೆಗೆ ಸಂಸ್ಕರಿಸಿದ ನೀರನ್ನು ಪೂರೈಸಲಾಗುವುದು ಎಂದು ಸಚಿವ ಪಾಟೀಲ್ ಅವರು ಭರವಸೆ ನೀಡಿದರು.
ರಾಜ್ಯದಲ್ಲಿ ಫೈಬರ್ ಆಪ್ಟಿಕ್ ಅಳವಡಿಕೆ ಯೋಜನೆಗಳು ಮತ್ತು ವಿದ್ಯುತ್‌ಚಾಲಿತ ವಾಹನಗಳ (ಇವಿ) ಬಳಕೆ ಹೆಚ್ಚಿಸುವ ಕ್ಷೇತ್ರಗಳಲ್ಲಿ ವಹಿವಾಟು ನಡೆಸಲು ಹೊಯ್ಸಂಗ್ ಅಡ್ವಾನ್ಸ್ಡ್ ಮಟೇರಿಯಲ್ಸ್ ಇಂಗಿತ ವ್ಯಕ್ತಪಡಿಸಿದೆ.
ಕಂಪನಿಯ ಉಪಾಧ್ಯಕ್ಷ ಹಾಂಗ್ ಸಂಗ್ ಅಹ್ನ್ ಅವರು ರಾಜ್ಯದ ನಿಯೋಗದ ಜೊತೆಗಿನ ಮಾತುಕತೆಯಲ್ಲಿ ಭಾಗಿಯಾಗಿದ್ದರು. ಟೈರ್ ಕೋರ್ಡ್ಸ್ ತಯಾರಿಕೆಗೆ ಭಾರತವನ್ನು ಪ್ರಮುಖ ನೆಲೆಯನ್ನಾಗಿ ಅಭಿವೃದ್ಧಿಪಡಿಸಲು ಕಂಪನಿಯ ಉದ್ದೇಶಿಸಿದೆ. ಭಾರತದಲ್ಲಿ ಪರಿಸರ ಸ್ನೇಹಿ ಸರಕುಗಳು ಹಾಗೂ ಸುಧಾರಿತ ಜವಳಿ ಉತ್ಪನ್ನಗಳನ್ನು ತಯಾರಿಸುವ ವಹಿವಾಟು ವಿಸ್ತರಿಸುವ ಅವಕಾಶಗಳನ್ನು ಕಂಪನಿಯು ಪರಿಶೀಲಿಸುತ್ತಿದೆ.
ರಾಜ್ಯದಲ್ಲಿನ ನವೀಕರಿಸಬಹುದಾದ ಇಂಧನ ವಲಯದಲ್ಲಿನ ಭವಿಷ್ಯದ ವಿಸ್ತರಣೆ ಬಗ್ಗೆ ಸೌರಕೋಶಗಳ ಸೆಮಿಕಂಡಕ್ಟರ್ ತಯಾರಿಸುವ ಒಸಿಐ ಹೋಲ್ಡಿಂಗ್ಸ್ ಕಂಪನಿ ಜೊತೆ ಸಚಿವರು ಮಾತುಕತೆ ನಡೆಸಿದರು.
ವಾಹನ ಬಿಡಿಭಾಗ ತಯಾರಿಸುವ ಎಚ್‌ಎಲ್ ಮಂಡೊ ಕಾರ್ಪೊರೇಷನ್ನಿನ ಸಿಎಫ್‌ಒ ಲೀ ಚುಲ್ ಮತ್ತು ನಿರ್ದೇಶಕ ಕಿಮ್ ಇವುನ್ ಸಂಗ್ ಅವರನ್ನು ರಾಜ್ಯದ ನಿಯೋಗವು ಭೇಟಿಯಾಗಿತ್ತು.
ಬೆಂಗಳೂರಿನಲ್ಲಿ ತಯಾರಿಕಾ ಘಟಕ ಹೊಂದಿರುವ ಕಂಪನಿಯು ರಾಜ್ಯದಲ್ಲಿ ಇನ್ನಷ್ಟು ಬಂಡವಾಳ ಹೂಡಿಕೆ ಮಾಡಲು ಉತ್ಸುಕತೆ ತೋರಿದೆ. ವಿದ್ಯುತ್‌ಚಾಲಿತ ಸೇರಿದಂತೆ ರಾಜ್ಯದಲ್ಲಿನ ಒಟ್ಟಾರೆ ವಾಹನ ಉದ್ಯಮ ಕ್ಷೇತ್ರದಲ್ಲಿನ ಅನುಕೂಲತೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ರಾಜ್ಯದ ನಿಯೋಗವು ಆಹ್ವಾನ ನೀಡಿದೆ.
ಮಷೀನ್‌ಟೂಲ್ಸ್ ತಯಾರಿಕಾ ಕಂಪನಿ ಡಿಎನ್ ಸೊಲುಷನ್ಸ್, ಬೆಂಗಳೂರು ಬಳಿ 25 ಎಕರೆ ಪ್ರದೇಶದಲ್ಲಿ ತನ್ನ ತಯಾರಿಕಾ ಘಟಕ ಆರಂಭಿಸಲಿದೆ.