ಹಿಂಡಾಲ್ಕೊ ಸಹಿತ ಹಲವು ಉದ್ಯಮಗಳ ಪ್ರಮುಖರ ಜತೆ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಚರ್ಚೆ
ಮುಂಬೈ: ರಾಜ್ಯಕ್ಕೆ ಹೆಚ್ಚು ಬಂಡವಾಳ ಆಕರ್ಷಿಸಬೇಕೆಂಬ ಗುರಿಯೊಂದಿಗೆ ಎರಡು ದಿನಗಳ ಮುಂಬೈ ಪ್ರವಾಸ ಕೈಗೊಂಡಿರುವ ಭಾರೀ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಅವರು ಬುಧವಾರ ಹಲವು ಗಣ್ಯ ಉದ್ಯಮಿಗಳನ್ನು ಭೇಟಿ ಮಾಡಿ, ರಾಜ್ಯದಲ್ಲಿ ಬಂಡವಾಳ ಹೂಡಿಕೆ ಸಂಬಂಧ ಮಾತುಕತೆ ನಡೆಸಿದರು.
ಈ ಸಂದರ್ಭದಲ್ಲಿ ಅವರು ಹಿಂಡಾಲ್ಕೋ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಸತೀಶ್ ಪೈ, ಸ್ಪೆಷಾಲಿಟಿ ಅಲುಮಿನಾಸ್ ಅಂಡ್ ಕೆಮಿಕಲ್ಸ್ ಕಂಪೆನಿಯ ಸಿಇಒ ಸೌರಭ್ ಕೇಡ್ಕರ್, ರೆನ್ಯುಯೆಬಲ್ಸ್ ಕಂಪೆನಿಯ ಜಯಂತ್ ದುವಾ, ಉದ್ಯಮಿಗಳಾದ ಇ.ಆರ್.ರಾಜ್ ಮತ್ತು ಜಯಂತ್ ವಿ. ಧೋಬಲೆ ಅವರೊಂದಿಗೆ ವಿಚಾರ ವಿನಿಮಯ ನಡೆಸಿ, ಕರ್ನಾಟಕದಲ್ಲಿ ಹೆಚ್ಚು ಹೂಡಿಕೆ ಮಾಡುವಂತೆ ಕೇಳಿಕೊಂಡರು. ಸಚಿವರ ಈ ಮನವಿಗೆ ಉದ್ಯಮಿಗಳು ಸಕಾರಾತ್ಮಕವಾಗಿ ಸ್ಪಂದಿಸಿದರು.
ಕರ್ನಾಟಕದಲ್ಲಿ ಕೈಗಾರಿಕಾ ಸ್ನೇಹಿ ವಾತಾವರಣ ಮತ್ತು ನೀತಿಗಳಿದ್ದು, ಉದ್ಯಮಿಗಳಿಗೆ ಎಲ್ಲ ಬಗೆಯ ಸೌಕರ್ಯ ಮತ್ತು ನೆರವುಗಳನ್ನು ಪಾರದರ್ಶಕ ರೀತಿಯಲ್ಲಿ ಒದಗಿಸಲಾಗುವುದು ಎಂದು ಅವರು ಉದ್ಯಮಿಗಳಿಗೆ ಭರವಸೆ ನೀಡಿದರು.
ತಮ್ಮ ಮುಂಬೈ ಭೇಟಿಯ ಎರಡನೆಯ ದಿನದಂದು ಅವರು, ಸಿಂಗಪುರ್ ಮೂಲದ ಹೂಡಿಕೆ ಕಂಪೆನಿ ಟೆಮಾಸೆಕ್ ಹೋಲ್ಡಿಂಗ್ಸ್ ಅಡ್ವೈಸರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮೋಹಿತ್ ಭಂಡಾರಿ ಅವರೊಂದಿಗೂ ಮಾತುಕತೆ ನಡೆಸಿದರು. ಇವರೊಂದಿಗೆ, ಉದ್ದೇಶಿತ ಕೆಎಚ್‍ಐಆರ್ ಸಿಟಿಯ ಕುರಿತು ವಿಚಾರಗಳನ್ನು ಹಂಚಿಕೊಂಡರು.
ಜತೆಗೆ ಸಚಿವರು ಅತ್ಯಾಧುನಿಕ ಜಿಯೋ ವಲ್ಡ್ ಸೆಂಟರ್ ಗೆ ಭೇಟಿ ನೀಡಿ, ಅಲ್ಲಿಯ ಸೌಲಭ್ಯಗಳನ್ನು ವೀಕ್ಷಿಸಿದರು. ಸಚಿವರೊಂದಿಗೆ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಮತ್ತು ಆಯುಕ್ತೆ ಗುಂಜನ್ ಕೃಷ್ಣ ಉಪಸ್ಥಿತರಿದ್ದರು.