ನಾಡಪ್ರಭು ಕೆಂಪೇಗೌಡ ಬಡಾವಣೆಗೆ 2024ರ ಅಂತ್ಯದ ವೇಳೆ ಮೂಲಸೌಲಭ್ಯ: ಸಚಿವ ರಾಮಲಿಂಗಾರೆಡ್ಡಿ
ಬೆಳಗಾವಿ: ನಾಡಪ್ರಭು ಕೆಂಪೇಗೌಡ ಬಡಾವಣೆ ಅಗತ್ಯ ಮೂಲಸೌಕರ್ಯ ಕಲ್ಪಿಸುವುದು ಸೇರಿದಂತೆ ಸಮಗ್ರ ಅಭಿವೃದ್ಧಿ ಯೋಜನೆಗಳು-2024ರ ಅಂತ್ಯದ ವೇಳೆಗೆ ಪೂರ್ಣಗೊಳ್ಳಲಿವೆ ಎಂದು ಸರಕಾರದ ಪರವಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಭರವಸೆ ನೀಡಿದ್ದಾರೆ.
ಮಂಗಳವಾರ ವಿಧಾನಸಭೆಯ ಪ್ರಶ್ನೋತ್ತರದ ಅವಧಿಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪರವಾಗಿ ಉತ್ತರ ನೀಡಿದ ಸಚಿವ ರಾಮಲಿಂಗಾರೆಡ್ಡಿ, ‘2010ರಲ್ಲಿ ಕೆಂಪೇಗೌಡ ಬಡಾವಣೆ ನಿರ್ಮಾಣಕ್ಕೆ 4,816 ಎಕರೆಗೆ ಅಧಿಸೂಚನೆ ಹೊರಡಿಸಲಾಗಿತ್ತು. 28 ಎಕರೆಯನ್ನು ಡಿ-ನೋಟಿಫೈ ಮಾಡಲಾಗಿದೆ. 3,991 ಎಕರೆಯನ್ನು ಹಸ್ತಾಂತರಿಸಲಾಗಿದೆ. ಇದರ ಪೈಕಿ 1,246 ಎಕರೆಯಲ್ಲಿ ಬಡಾವಣೆ ಅಭಿವೃದ್ಧಿ ಕಾಮಗಾರಿಗಳು ಬಾಕಿ ಇದೆ ಎಂದು ವಿವರಿಸಿದರು.
ಭೂ ಮಾಲಕರು ನ್ಯಾಯಾಲಯಗಳಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಈ ರೀತಿಯ 225 ಪ್ರಕರಣಗಳು ಬಾಕಿ ಇವೆ. ಕಂದಾಯ ನಿವೇಶನಗಳಿಗೆ ಸಂಬಂಧಪಟ್ಟಂತಹ ತಕರಾರು ಅರ್ಜಿಗಳು ನೆನೆಗುದಿಯಲ್ಲಿವೆ. ಹೀಗಾಗಿ ಕಾಮಗಾರಿ ವಿಳಂಬವಾಗಿದೆ. 2024ರ ವೇಳೆಗೆ ಪೂರ್ಣಗೊಳಿಸಿ ಮನೆ ನಿರ್ಮಾಣಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.