ವಿಧಾನಸೌಧದ ಮೆಟ್ಟಿಲುಗಳ ಮುಂಭಾಗ ಭುವನೇಶ್ವರಿಯ ಪ್ರತಿಮೆ ಪ್ರತಿಷ್ಠಾಪಿಸುವಂತೆ ಒತ್ತಾಯ
ಬೆಂಗಳೂರು: ಸರಕಾರದ ಕೆಲಸ ದೇವರ ಕೆಲಸ ಎಂದು ಬರೆಯಲಾದ ವಿಧಾನಸೌಧದ ಮೆಟ್ಟಿಲುಗಳ ಮುಂಭಾಗ ಇರುವ ಜಾಗದಲ್ಲಿ ನಾಡದೇವತೆ ಭುವನೇಶ್ವರಿಯ ಪ್ರತಿಮೆಯನ್ನು ಪ್ರತಿಷ್ಠಾಪಿಸಬೇಕು ಎಂದು ನೈಜ ಹೋರಾಟಗಾರರ ವೇದಿಕೆ ರಾಜ್ಯ ಸರಕಾರವನ್ನು ಒತ್ತಾಯಿಸಿದೆ.
ಮಂಗಳವಾರ ವೇದಿಕೆಯ ಸಂಚಾಲಕ ಎಚ್.ಎಂ.ವೆಂಕಟೇಶ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಪತ್ರ ಬರೆದಿದ್ದು, ಕನ್ನಡದಲ್ಲಿ ಆಡಳಿತ ನಡೆಸಲು ಸರಕಾರಗಳು ವಿಫಲಗೊಂಡಿರುವುದು ದುರಾದೃಷ್ಟಕರ ಸಂಗತಿಯಾಗಿದೆ. ಆದರೆ ಸಂತೋಷದ ವಿಷಯವೇನೆಂದರೆ, ಕರ್ನಾಟಕ ಸರಕಾರವು ತಾಯಿ ಭುವನೇಶ್ವರಿಯ 25 ಅಡಿ ಎತ್ತರದ ಪ್ರತಿಮೆಯನ್ನು ವಿಧಾನಸೌಧದ ಆವರಣದಲ್ಲಿ ಪ್ರತಿಷ್ಠಾಪನೆ ಮಾಡುತ್ತಿರುವುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿಯಾಗಿದೆ ಎಂದಿದ್ದಾರೆ.
ಸರಕಾರವು ನಾಡ ದೇವತೆ ಭುವನೇಶ್ವರಿಯ ಪ್ರತಿಮೆಯನ್ನು ವಿಧಾನಸೌಧದ ಹಿಂಭಾಗದಲ್ಲಿ ಕೆಂಗಲ್ ಹನುಮಂತಯ್ಯ ಪ್ರತಿಮೆಯ ಬಲಭಾಗದಲ್ಲಿ ಪಶ್ಚಿಮ ದಿಕ್ಕಿನಲ್ಲಿ ಪ್ರತಿಷ್ಠಾಪನೆ ಮಾಡುತ್ತಿದೆ. ಇದಕ್ಕೆ ನೈಜ ಹೋರಾಟಗಾರರ ವೇದಿಕೆ ಆಕ್ಷೇಪ ವ್ಯಕ್ತಪಡಿಸುತ್ತಿದೆ. ವಿಧಾನಸೌಧದಿಂದಲೇ ರಾಜ್ಯ ಸರಕಾರ ನಾಗರಿಕರಿಗೆ ಆಡಳಿತ ನೀಡುತ್ತಿದೆ. ಆದುದರಿಂದ ನಾಡ ದೇವತೆಯ ಪ್ರತಿಮೆಯು ವಿಧಾನಸೌಧದ ಮುಂದೆ ಪ್ರತಿಷ್ಠಾಪನೆ ಮಾಡಬೇಕಾಗಿದೆ ಎಂದು ಅವರು ಒತ್ತಾಯಿಸಿದ್ದಾರೆ.
ತಾಯಿ ಭುವನೇಶ್ವರಿಯ ಪ್ರತಿಮೆಯನ್ನುವಿಧಾನಸೌಧದ ಹಿಂಭಾಗದಲ್ಲಿ ಪ್ರತಿಷ್ಠಾಪನೆ ಮಾಡುವುದರಿಂದ ಕನ್ನಡಿಗರ ಹೆಮ್ಮೆಯ ಪ್ರತೀಕವಾದ ನಾಡ ದೇವತೆಯ ಪ್ರತಿಮೆಯು ವಿಧಾನಸೌಧಕ್ಕೆ ಬರುವವರಿಗೆ ಕಾಣದೆ ಇರುವ ರೀತಿಯಲ್ಲಿ ಕಾಟಾಚಾರಕ್ಕೆ ಪ್ರತಿಷ್ಠಾಪನೆ ಮಾಡಲು ಹೊರಟಿರುವುದು ನ್ಯಾಯ ಸಮ್ಮತವಲ್ಲ. ಇದು ಕನ್ನಡಿಗರಿಗೆ ಮಾಡುವ ದ್ರೋಹವಾಗುತ್ತದೆ. ಏನೋ ಒಂದು ಪ್ರತಿಮೆಯನ್ನು ನಿರ್ಮಾಣ ಮಾಡಿದ್ದೇವೆ ಎಂದು ಹೇಳಿಕೊಳ್ಳಲು ಅಷ್ಟೇ ಈ ಪ್ರತಿಮೆಯ ಜಾಗವನ್ನು ಗುರುತಿಸಲಾಗಿದೆ ಎಂದು ಎಚ್.ಎಂ. ವೆಂಕಟೇಶ್ ಹೇಳಿದ್ದಾರೆ.
ರಾಜ್ಯದಲ್ಲಿ ಅತ್ಯುತ್ತಮ ಕಲಾವಿದರಿದ್ದರೂ, ಅದರಲ್ಲೂ ಬಾಲರಾಮನ ವಿಗ್ರಹವನ್ನು ಕೆತ್ತಿ ಸೈ ಎನಿಸಿಕೊಂಡ ಮೈಸೂರಿನ ಕಲಾವಿದ ಅರುಣ್ ಕುಮಾರ್ ಮತ್ತು ಇನ್ನಿತರ ಹಿರಿಯ ಕಲಾವಿದರಿದ್ದರೂ, ಕನ್ನಡ ಬಗ್ಗೆ ತಿಳುವಳಿಕೆ ಇಲ್ಲದ ದಿಲ್ಲಿ ಮೂಲದ ಕಲಾವಿದರಿಗೆ ಈ ಪ್ರತಿಮೆ ನಿರ್ಮಾಣದ ಗುತ್ತಿಗೆಯನ್ನು ಕೊಟ್ಟಿರುವುದು ಕನ್ನಡಿಗ ಕಲಾವಿದರಿಗೆ ಮಾಡಿರುವ ಅವಮಾನವಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.