ಒಳಮೀಸಲಾತಿ ಹೋರಾಟಗಾರರು ತಾಳ್ಮೆಯಿಂದ ಇರಬೇಕು : ಎಚ್.ಆಂಜನೇಯ
ಎಚ್.ಆಂಜನೇಯ
ಬೆಂಗಳೂರು : ಜನಸಂಖ್ಯೆ ಹಾಗೂ ಹಿಂದುಳಿದಿರುವ ಸ್ಥಾನಮಾನಗಳ ಅಂಕಿ-ಅಂಶಗಳನ್ನು ಇಟ್ಟುಕೊಂಡು ಒಳಮೀಸಲಾತಿ ಹಂಚಿಕೆ ಮಾಡಬಹುದು ಎಂದು ಸುಪ್ರೀಂಕೋರ್ಟ್ ಹೇಳಿದೆ. ಅದರಂತೆ ರಾಜ್ಯ ಸರಕಾರ ನಿವೃತ್ತ ನ್ಯಾ.ನಾಗಮೋಹನ್ ದಾಸ್ ನೇತೃತ್ವದಲ್ಲಿ ಆಯೋಗ ರಚಿಸಿ ವರದಿ ನೀಡಿ ಎಂದು ಹೇಳಲಾಗಿದೆ. ಈ ವರದಿ ಬರುವ ತನಕ ಸಮುದಾಯದ ಹೋರಾಟಗಾರರು ತಾಳ್ಮೆಯಿಂದ ಇರಬೇಕು ಎಂದು ಮಾಜಿ ಸಚಿವ ಎಚ್.ಆಂಜನೇಯ ಮನವಿ ಮಾಡಿದ್ದಾರೆ.
ಶುಕ್ರವಾರ ನಗರದ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವೆಡೆ ಒಳಮೀಸಲಾತಿ ಬಗ್ಗೆ ಹೋರಾಟ ಮಾಡಲಾಗುತ್ತಿದೆ. ಇದರಿಂದ ಸರಕಾರಕ್ಕೆ ಮುಜುಗರವಾಗುತ್ತಿದೆ. ದಲಿತ ಸಂಘರ್ಷ ಸಮಿತಿಯನ್ನು ಹುಟ್ಟು ಹಾಕಿದ ಪ್ರೊ.ಬಿ.ಕೃಷ್ಣಪ್ಪ ಅವರು ಸರಕಾರಗಳನ್ನು ಹೋರಾಟದಿಂದ ಮಣಿಸಿ ಬೇಡಿಕೆಗಳನ್ನು ಈಡೇರಿಸಿಕೊಳ್ಳುತ್ತಿದ್ದರು. ಈಗ ಸರಕಾರ ನಮ್ಮ ಪರವಾಗಿದೆ. ಹೀಗಿರುವಾಗ ಹೋರಾಟ ಅನಗತ್ಯ. 30 ವರ್ಷ ಕಾದಿರುವ ನಾವು ಎರಡು ತಿಂಗಳು ಕಾಯೋಣ ಎಂದು ತಿಳಿಸಿದರು.
ಪರಿಶಿಷ್ಟ ಜಾತಿಯಲ್ಲಿ ಪ್ರಮುಖ ನಾಲ್ಕು ಜಾತಿಗಳಿದ್ದು ಭೋವಿ, ಲಂಬಾಣಿ, ಕೊರಚ, ಮಾದಿಗ ಸಮುದಾಯಗಳಿವೆ ಇದರಲ್ಲಿ ಉಪಜಾತಿಗಳು ಸೇರಿ 101 ಜಾತಿಗಳಿವೆ. ಇವುಗಳಲ್ಲಿ ಅನೇಕ ಜಾತಿಗಳಿಗೆ ಮೀಸಲಾತಿ ಸರಿಯಾಗಿ ದೊರೆಯುತ್ತಿಲ್ಲ ಎಂದು, 30 ವರ್ಷಗಳಿಂದ ಮಾದಿಗ ಸಮುದಾಯ ಒಳ ಮೀಸಲಾತಿಗಾಗಿ ಹೋರಾಟ ಮಾಡುತ್ತಿದೆ. ಎಸ್.ಎಂ.ಕೃಷ್ಣ ಅವರು ಈ ಅನ್ಯಾಯವನ್ನು ಸರಿಪಡಿಸಲು ಸದಾಶಿವ ಆಯೋಗವನ್ನು ರಚನೆ ಮಾಡಿದರು. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ತಕ್ಷಣ ಪರಿಶಿಷ್ಟ ಜಾತಿಯ ಎಲ್ಲ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸದಾಶಿವ ಆಯೋಗದ ವರದಿಯನ್ನು ಪಾಲಿಸಿ ಒಳಮೀಸಲಾತಿ ಜಾರಿಗೆ ತರಲಾಗುವುದು ಎಂದು ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ಕೊಡಲಾಗಿತ್ತು ಎಂದು ಹೇಳಿದರು.
ಆರನೇ ಗ್ಯಾರಂಟಿಯಾದ ಒಳಮೀಸಲಾತಿಯನ್ನು ಕಾರ್ಯರೂಪಕ್ಕೆ ತರಲು ರಾಜ್ಯ ಸರಕಾರ ತಯಾರಾಗಿದೆ. ಇದಕ್ಕೆ ಇಂಬು ನೀಡುವಂತೆ ಸುಪ್ರೀಂಕೋರ್ಟ್ ಸಹ ಒಳಮೀಸಲಾತಿಯನ್ನು ಹಂಚಿಕೆ ಮಾಡುವ ಅಧಿಕಾರ ರಾಜ್ಯ ಸರಕಾರಗಳಿಗಿದೆ ಎನ್ನುವ ತೀರ್ಪನ್ನು ಎತ್ತಿಹಿಡಿದು, ನಮ್ಮ ಸಮುದಾಯಗಳ ಧ್ವನಿಗೆ ಶಕ್ತಿ ನೀಡಿದೆ. ರಾಜ್ಯ ಕಾಂಗ್ರೆಸ್ ಸರಕಾರ ಇದಕ್ಕೆ ಪೂರಕವಾಗಿ ಕೆಲಸ ಮಾಡುತ್ತಿದೆ ಎಂದು ಅಭಿಪ್ರಾಯಪಟ್ಟರು.
ಸಾಮಾಜಿಕ ನ್ಯಾಯದ ಹರಿಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಒಳಮೀಸಲಾತಿಯನ್ನು ಅನುಷ್ಠಾನಗೊಳಿಸುತ್ತೇವೆ ಎಂದು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಿದರು. ನಾವುಗಳು ನಾಗಮೋಹನ್ ದಾಸ್ ಅವರಿಗೆ ಸೂಕ್ತ ದಾಖಲೆಗಳನ್ನು ನೀಡುವ ಕೆಲಸ ಮಾಡಬೇಕು. ಪ್ರತಿ ತಾಲೂಕು, ಜಿಲ್ಲಾವಾರು ಮುಖಂಡರು ಬಂದು ನಾಗಮೋಹನ್ ದಾಸ್ ಅವರಿಗೆ ತಮ್ಮ ಸಮುದಾಯದ ಸ್ಥಿತಿಗತಿಗಳ ಬಗ್ಗೆ ತಿಳಿಸಬೇಕು ಎಂದು ಕರೆ ನೀಡಿದರು.
ಮಾಜಿ ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ ಮಾತನಾಡಿ, ಒಳಮೀಸಲಾತಿ ಜಾರಿ ಮಾಡಲು ಎಂಪಿರಿಕಲ್ ಡೇಟಾ ಲಭ್ಯವಿಲ್ಲ ಎಂದು ಒಂದಷ್ಟು ಜನ ಹಾದಿ ತಪ್ಪಿಸುತ್ತಿದ್ದಾರೆ. ಆದರೆ ಸರಕಾರದ ಬಳಿ ಈ ದತ್ತಾಂಶವಿದೆ. 2011ರ ಜನಗಣತಿಯ ಅಂಶಗಳನ್ನು ಪರಿಗಣನೆ ಮಾಡಬೇಕು ಎಂದು ಹೇಳಲಾಗಿದೆ. ಜೊತೆಗೆ ಸದಾಶಿವ ಆಯೋಗ ಕಲೆಹಾಕಿರುವ ಮಾಹಿತಿಗಳನ್ನೂ ಸಹ ಬಳಸಿಕೊಳ್ಳಬಹುದು ಎಂದು ತಿಳಿಸಿದರು.
ನಾಗಮೋಹನ್ ದಾಸ್ ಅವರ ಆಯೋಗವೇ ಬೇಡ ಎಂದು ಅನೇಕರು ವಾದ ಮಾಡುತ್ತಿದ್ದಾರೆ. ಪರಿಶಿಷ್ಟರಲ್ಲಿ ಜಾತಿವಾರು ಜನಗಣತಿ ಪೂರ್ಣ ಪ್ರಮಾಣದಲ್ಲಿಲ್ಲ. ಆದಿ ಕರ್ನಾಟಕ ಎಂದು ಮಾದಿಗರು ಹಾಗೂ ಛಲವಾದಿಗಳು ಇಬ್ಬರೂ ಬರೆಸಿದ್ದಾರೆ. ಆದಿ ದ್ರಾವಿಡ ಎಂದು ಎರಡು ಸಮುದಾಯವರು ಬರೆಸಿದ್ದಾರೆ. ಆದ ಕಾರಣ ಜಿಲ್ಲವಾರು ವಿವೇಚನೆಯನ್ನು ಬಳಸಿ ಯಾವ ಜಿಲ್ಲೆಯವರು ಯಾವ ಸಮುದಾಯಕ್ಕೆ ಸೇರುತ್ತಾರೆ ಎನ್ನುವುದನ್ನು ನಾಗಮೋಹನ್ ದಾಸ್ ಸಮಿತಿ ತೀರ್ಮಾನ ಮಾಡಬೇಕು ಎಂದು ಸರಕಾರ ತನ್ನ ನಿಯಮದಲ್ಲಿ ಅವರಿಗೆ ತಿಳಿಸಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಕೆಪಿಸಿಸಿ ಕಾರ್ಯಾಧ್ಯಕ್ಷ ಚಂದ್ರಪ್ಪ, ಆದಿ ಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ್, ಕೆಪಿಸಿಸಿ ಸಂಯೋಜಕ ಸತೀಶ್ ಮತ್ತಿತರರು ಉಪಸ್ಥಿತರಿದ್ದರು.