ಸೆ.15ಕ್ಕೆ ‘ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನ’ ಆಚರಿಸಲು ನಿರ್ಧಾರ: ಸಚಿವ ಡಾ.ಎಚ್.ಸಿ. ಮಹದೇವಪ್ಪ
ಬೆಂಗಳೂರು: ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದ ಮುಂದಿನ ಪೀಳಿಗೆಯು ಪ್ರಜಾಪ್ರಭುತ್ವದ ಮೌಲ್ಯಾನುಸಾರ ಶಕ್ತವಾಗಬೇಕಾದರೆ ಪ್ರಜಾಪ್ರಭುತ್ವದ ಮೌಲ್ಯಗಳ ಕುರಿತ ಅರಿವಿನ ಜಾಗೃತಿ ಅತ್ಯಂತ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸರಕಾರವು ಸೆ.15ಕ್ಕೆ ಮಾನವ ಸರಪಳಿಯನ್ನು ರಚಿಸುವ ಮೂಲಕ ವಿಭಿನ್ನವಾಗಿ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಆಚರಿಸಲಿದೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು.
ಸೋಮವಾರ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ನಡೆದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸೆ.15 ರಂದು ಜರುಗುತ್ತಿರುವ ಈ ಬೃಹತ್ ಕಾರ್ಯಕ್ರಮದಲ್ಲಿ ಬೀದರ್ ನಿಂದ ಚಾಮರಾಜನಗರದ ವರೆಗೆ ಬೃಹತ್ ಮಾನವ ಸರಪಳಿಯನ್ನು ನಿರ್ಮಿಸಿ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ದಾರಿಯುದ್ದಕ್ಕೂ ಪಸರಿಸುವ ಕೆಲಸವನ್ನು ಸರಕಾರ ಮಾಡಲಿದ್ದು, ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಮಾನವ ಸರಪಳಿಯ ಜವಾಬ್ದಾರಿಯನ್ನು ವಹಿಸಲಿದ್ದಾರೆ ಎಂದು ಅವರು ಹೇಳಿದರು.
ಅಂದು ಪ್ರಜಾಪ್ರಭುತ್ವದ ಭಾಗವಾಗಿರುವ ಎಲ್ಲ ಜನರೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬಿಂಬಿಸುವುದಕ್ಕೆ ಪೂರಕವಾಗಿ ಚಟುವಟಿಕೆಗಳನ್ನು ಮಾಡಬಹುದು ಮತ್ತು ಮಾನವ ಸರಪಳಿಯಲ್ಲಿ ಪಾಲ್ಗೊಳ್ಳಬಹುದು. ಸೆ.15ರಂದು ಬೆಳಗ್ಗೆ 8.30ಕ್ಕೆ ಆರಂಭಗೊಳ್ಳುವ ಈ ಕಾರ್ಯಕ್ರಮದಲ್ಲಿ ಸುಮಾರು 40 ಲಕ್ಷ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಮಹದೇವಪ್ಪ ತಿಳಿಸಿದರು.
ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐಟಿ ಬಿಟಿ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.