ನೂತನ ಶಾಸಕರಿಗೆ ಅಂತರ್ ರಾಷ್ಟ್ರೀಯ ಮಟ್ಟದ ನಾಯಕತ್ವ ತರಬೇತಿ: ಸ್ಪೀಕರ್ ಯು.ಟಿ.ಖಾದರ್
ಬೆಂಗಳೂರು, ಜು.3: ಹದಿನಾರನೆ ವಿಧಾನಸಭೆಗೆ ಆಯ್ಕೆಯಾಗಿರುವ ನೂತನ ಶಾಸಕರಿಗೆ ಸದನದ ಕಾರ್ಯ ಕಲಾಪಗಳ ಬಗ್ಗೆ ಈಗಾಗಲೆ ತರಬೇತಿ ನೀಡಿದ್ದೇವೆ. ಕಲಾಪಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತಹ ಈ ನೂತನ ಶಾಸಕರ ಪೈಕಿ 15-20 ಮಂದಿಯನ್ನು ಗುರುತಿಸಿ ರಾಷ್ಟ್ರೀಯ ಮತ್ತು ಅಂತರ್ ರಾಷ್ಟ್ರೀಯ ಮಟ್ಟದ ನಾಯಕತ್ವ ತರಬೇತಿಗೆ ಆಯ್ಕೆ ಮಾಡುವ ಚಿಂತನೆಯಿದೆ’ ಎಂದು ಸ್ಪೀಕರ್ ಯು.ಟಿ.ಖಾದರ್ ತಿಳಿಸಿದ್ದಾರೆ.
ಸೋಮವಾರ ವಿಧಾನಸಭೆಯಲ್ಲಿ ರಾಜ್ಯಪಾಲರು ಉಭಯ ಸದನಗಳ ಜಂಟಿ ಅಧಿವೇಶನವನ್ನುದ್ದೇಶಿಸಿ ಭಾಷಣ ಮಾಡಿದ ನಂತರ, ‘ವಿಧಾನಸಭೆ ಸಮಾಪನಗೊಂಡ ಬಳಿಕ ಮಾತನಾಡಿದ ಅವರು, ಈ 16ನೆ ವಿಧಾನಸಭೆ ಇಡೀ ರಾಜ್ಯಕ್ಕಷ್ಟೇ ಅಲ್ಲ, ಇಡೀ ದೇಶಕ್ಕೆ ಸಂದೇಶ ಕೊಡುವಂತಹ ಮಾದರಿಯಾದ ವಿಧಾನಸಭೆಯಾಗಬೇಕು. ಆ ನಿಟ್ಟಿನಲ್ಲಿ ನಾವೆಲ್ಲರೂ ನಮ್ಮ ಜವಾಬ್ದಾರಿ ನಿರ್ವಹಿಸೋಣ’ ಎಂದರು.
ನಮಗೆ ಜನರ, ಸಮಾಜ ಹಾಗೂ ದೇಶದ ಹಿತ ಮುಖ್ಯವಾಗಬೇಕು. ಅದು ನಮ್ಮ ವಿಚಾರ, ನಡವಳಿಕೆಗಳಲ್ಲಿ ವ್ಯಕ್ತವಾಗಬೇಕು. ನೂತನವಾಗಿ ಆಯ್ಕೆಯಾಗಿರುವ ಶಾಸಕರಿಗೆ ಈಗಾಗಲೆ ತರಬೇತಿ ನೀಡಿದ್ದೇವೆ. ಬಹಳಷ್ಟು ಮಂದಿ ಆಸ್ತಕಿಯಿಂದ ಭಾವಹಿಸಿದ್ದರು. ಅವರೆಲ್ಲರೂ ಹಿರಿಯ ಮಾರ್ಗದರ್ಶನ ಪಡೆದುಕೊಂಡು ಭವಿಷ್ಯದಲ್ಲಿ ಉತ್ತುಮ ಶಾಸಕರಾಗುವ ವಿಶ್ವಾಸವಿದೆ ಎಂದು ಖಾದರ್ ಹೇಳಿದರು.
ನೂತನ ಶಾಸಕರು ಕಾರ್ಯ ಕಲಾಪದಲ್ಲಿ ಸರಿಯಾದ ಸಮಯಕ್ಕೆ ಬಂದು ಪಾಲ್ಗೊಳ್ಳಬೇಕು. ನಿಗದಿತ ಸಚಿವರು ಆಯಾ ದಿನ ಕಲಾಪ ನಡೆಯುವಾಗ ವಿಧಾನಸಭೆಯಲ್ಲಿ ಹಾಜರಿರಬೇಕು. ಅಲ್ಲದೆ, ತಮ್ಮ ಇಲಾಖೆಯ ಅಧಿಕಾರಿಗಳು ಸದನದಲ್ಲಿ ಇರುವಂತೆ ನೋಡಿಕೊಳ್ಳಬೇಕು ಎಂದು ಸ್ಪೀಕರ್ ತಿಳಿಸಿದರು.
ಮಸೂದೆಗಳ ಬಗ್ಗೆ ಹೊಸ ಸದಸ್ಯರಿಗೆ ಸ್ಪಷ್ಟವಾದ ಮಾಹಿತಿಗಳು ಇರುವುದಿಲ್ಲ. ಅವರಿಗಾಗಿ, ಮಸೂದೆ ಮಂಡನೆಯಾದ ನಂತರ ನಿಗದಿತ ಸಮಯ ಹಾಗೂ ಕಚೇರಿಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಇರುತ್ತಾರೆ. ಹೊಸ ಸದಸ್ಯರು ಮಸೂದೆಗಳ ಬಗ್ಗೆ ಅಧಿಕಾರಿಗಳಿಂದ ಅಗತ್ಯ ಮಾಹಿತಿಗಳನ್ನು ಪಡೆದುಕೊಳ್ಳಬಹುದು. ಇದರಿಂದಾಗಿ, ಮಸೂದೆಗಳ ಮೇಲೆ ಚರ್ಚೆ ನಡೆಸಲು ಅವರಿಗೆ ಸಹಕಾರ ಸಿಗುತ್ತದೆ ಎಂದು ಅವರು ಹೇಳಿದರು.