ಸಿಸಿಬಿ ಪೊಲೀಸರಿಂದ ವಿಚಾರಣೆ; ನಾನು ಯಾವ ಸರಕಾರದಲ್ಲಿದ್ದೇನೆ ಎಂಬ ಗೊಂದಲ ಕಾಡುತ್ತಿದೆ: ಬಿ.ಕೆ.ಹರಿಪ್ರಸಾದ್
ರಾಜ್ಯದಲ್ಲಿ ಗೋದ್ರಾ ಮಾದರಿಯ ಹಿಂಸಾಚಾರ ನಡೆಯುವ ಸಾಧ್ಯತೆಯಿದೆ ಎಂದಿದ್ದ ಕಾಂಗ್ರೆಸ್ ಮುಖಂಡ
ಬೆಂಗಳೂರು: ‘ಅಯೋಧ್ಯೆ ಕಾರ್ಯಕ್ರಮ ವೇಳೆ ರಾಜ್ಯದಲ್ಲಿ ಗೋದ್ರಾ ಮಾದರಿಯ ಹಿಂಸಾಚಾರ ನಡೆಯುವ ಸಾಧ್ಯತೆಯಿದೆ’ ಎನ್ನುವ ಹೇಳಿಕೆ ಸಂಬಂಧ ಸಿಸಿಬಿ ಪೊಲೀಸರು ವಿಚಾರಣೆಗೆ ಮುಂದಾಗಿದ್ದಾರೆ. ಆದರೆ, ನನ್ನನ್ನು ಮಂಪರು ಪರೀಕ್ಷೆಗೆ ಒಳಪಡಿಸಿ’ ಎಂದು ಪರಿಷತ್ತಿನ ಕಾಂಗ್ರೆಸ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನನಗೆ ಯಾವುದೇ ವಿವಿಐಪಿ ಉಪಚಾರ ಬೇಡ. ಠಾಣೆಗೆ ಕರೆದುಕೊಂಡು ಹೋಗಿ, ವಿಚಾರಣೆ ಮಾಡಿ, ಬಹಿರಂಗವಾಗಿ ಮಂಪರು ಪರೀಕ್ಷೆಗೆ ಒಳಪಡಿಸಿ. ಅಲ್ಲದೆ, ನಾನು ಹೇಳಿಕೆ ನೀಡಿದ್ದು, ಸಾರ್ವಜನಿಕ ಹಿತದೃಷ್ಟಿಯಿಂದ ಮಾತ್ರವಷ್ಟೇ, ಅದಕ್ಕೆ ನಾನು ಈಗಲೂ ಬದ್ಧನಾಗಿದ್ದೇನೆ’ ಎಂದು ಸ್ಪಷ್ಟಪಡಿಸಿದರು.
‘ನನ್ನ ಹೇಳಿಕೆಯ ಆಧರಿಸಿ ವಿಚಾರಣೆ ಮಾಡಲು ಪೊಲೀಸರು ಬಂದಿದ್ದರು. ನನ್ನ ಹೇಳಿಕೆ ಸರಿಯಲ್ಲ ಎಂದಾದರೆ ಠಾಣೆಗೆ ಕರೆದುಕೊಂಡು ಹೋಗಿ, ಇಲ್ಲಿ ನಾನು ಹೇಳಿಕೆ ನೀಡುವುದಿಲ್ಲ. ಜೊತೆಗೆ ಬಿಜೆಪಿಯ ರಾಜ್ಯಾಧ್ಯಕ್ಷನನ್ನೂ ಕರೆ ತನ್ನಿ, ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಿ ಎಂದು ಪೊಲೀಸರಿಗೆ ತಿಳಿಸಿದ್ದೇನೆ ಎಂದು ಅವರು ವಿವರಣೆ ನೀಡಿದರು.
‘ಗೋದ್ರಾ, ಅಯೋಧ್ಯೆಯಂತಹ ಘಟನೆಗಳು ಗೃಹ ಸಚಿವರಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ಸಂಪೂರ್ಣ ಸರಕಾರದ ಹೊಣೆಗಾರಿಕೆಯಿರುತ್ತದೆ. ಬಿಜೆಪಿಯ ಆಡಳಿತದಲ್ಲಿ ಅವಧಿಯಲ್ಲಿ ನಾನು ಆ ರಾಜ್ಯದಲ್ಲಿ ನಾಲ್ಕೂವರೆ ವರ್ಷ ಕಾಂಗ್ರೆಸ್ ಪಕ್ಷದ ಉಸ್ತುವಾರಿ ವಹಿಸಿದ್ದೆ. ಅವರು ಯಾವ ರೀತಿ ಕೆಲಸ ಮಾಡುತ್ತಾರೆಂದು ನನಗೆ ಗೊತ್ತಿದೆ.
"ಆ ನಿಟ್ಟಿನಲ್ಲಿ ಹೇಳಿದ್ದ ಮಾತುಗಳಿಗೆ ನನ್ನನ್ನು ವಿಚಾರಣೆ ಮಾಡುತ್ತಾರೆ ಎಂದರೆ ಅಚ್ಚರಿಯಾಗುತ್ತದೆ. ನಾನು ಯಾವ ಸರಕಾರಲ್ಲಿದ್ದೇನೆ ಎಂಬ ಗೊಂದಲ ಕಾಡುತ್ತದೆ. ಪಕ್ಷದ ಹಿರಿಯ ನಾಯಕನಾಗಿರುವ ನನಗೆ ಇಂಥ ಸ್ಥಿತಿಯಾದರೆ ಸಾಮಾನ್ಯ ಕಾರ್ಯಕರ್ತರ ಪರಿಸ್ಥಿತಿ ಏನು? "ಎಂದು ಹರಿಪ್ರಸಾದ್ ಇದೇ ವೇಳೆ ಖಾರವಾಗಿ ಪ್ರಶ್ನೆ ಮಾಡಿದರು.