ಇನ್ವೆಸ್ಟ್ ಕರ್ನಾಟಕ-2022; 57 ಒಡಂಬಡಿಕೆಗಳ ಪೈಕಿ 7 ಯೋಜನೆಗಳಿಗೆ ಅನುಮೋದನೆ: ಸಚಿವ ಎಂ.ಬಿ.ಪಾಟೀಲ್
ಬೆಳಗಾವಿ, (ಸುವರ್ಣ ವಿಧಾನಸೌಧ) ಡಿ. 8: ‘ಇನ್ವೆಸ್ಟ್ ಕರ್ನಾಟಕ-2022’ ಸಮಾವೇಶದಲ್ಲಿನ 57 ಒಡಂಬಡಿಕೆಗಳ ಪೈಕಿ 7 ಯೋಜನೆಗಳಿಗೆ ಅನುಮೋದನೆ ಮತ್ತು ಹುಬ್ಬಳ್ಳಿ ಎಫ್‍ಎಂಸಿಜಿ ಸಮಾವೇಶದಲ್ಲಿ 16 ಒಪ್ಪಂದಗಳಲ್ಲಿ 3 ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
ಶುಕ್ರವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಹಿರಿಯ ಸದಸ್ಯ ಎಂ.ಚಂದ್ರಪ್ಪ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ‘ಅನುಮೋದನೆ ನೀಡಿರುವ ಯೋಜನೆಗಳಿಗೆ ಭೂಮಿ, ನೀರು, ವಿದ್ಯುತ್ ಪೂರೈಕೆ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತದೆ. ಇನ್ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ 57 ಕಂಪೆನಿಗಳ ಜತೆ ಒಡಂಬಡಿಕೆ ಮಾಡಿಕೊಳ್ಳಲಾಗಿದ್ದು, 5.41 ಲಕ್ಷ ಕೋಟಿ ರೂ. ಹೂಡಿಕೆಗೆ ಒಪ್ಪಂದವಾಗಿದೆ. ಅಂತೆಯೇ ಹುಬ್ಬಳ್ಳಿ ಎಫ್‍ಎಂಸಿಜಿ ಸಮಾವೇಶದಲ್ಲಿ 16 ಕಂಪೆನಿಗಳೊಂದಿಗೆ 1,275 ಕೋಟಿ ರೂ.ಗಳ ಹೂಡಿಕೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
‘ಅನುಮೋದನೆಗೊಂಡಿರುವ ಯೋಜನೆಗಳು ಪೈಕಿ ಕೆಲವು ಬೃಹತ್ ಕೈಗಾರಿಕೆಗಳಾಗಿರುವುದರಿಂದ ಕೈಗಾರಿಕೆಗಳ ಸ್ಥಾಪನೆಗೆ ಕನಿಷ್ಠ 3-4 ವರ್ಷಗಳ ಕಾಲಾವಕಾಶ ಅಗತ್ಯ. ಹೀಗಾಗಿ ಯೋಜನೆಗಳ ಅನುಷ್ಠಾನವು ವಿವಿಧ ಹಂತದಲ್ಲಿದೆ. ಇನ್ನೂ, ಕೈಗಾರಿಕಾ ನೀತಿ ಅನ್ವಯ ನೇರ ನೇಮಕಾತಿ ಹುದ್ದೆಗಳಿಗೆ ಗರಿಷ್ಠ ಪ್ರಮಾಣದಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ ಕಲ್ಪಿಸಬೇಕಾಗಿದೆ. ಗ್ರೂಪ್ ‘ಡಿ’ ವರ್ಗದಲ್ಲಿ ಶೇ.100ರಷ್ಟು ಮತ್ತು ಒಟ್ಟು ಶೇ.70ರಷ್ಟು ಉದ್ಯೋಗಗಳನ್ನು ಕನ್ನಡಿಗರಿಗೆ ಕಲ್ಪಿಸಬೇಕು ಎಂದು ಪಾಟೀಲ್ ಹೇಳಿದರು.
ಏನು ಪ್ರಯೋಜನ: ಆರಂಭಕ್ಕೆ ವಿಷಯ ಪ್ರಸ್ತಾಪಿಸಿದ ಬಿಜೆಪಿ ಸದಸ್ಯ ಎಂ.ಚಂದ್ರಪ್ಪ, ‘ಇನ್ವೆಸ್ಟ್ ಕರ್ನಾಟಕ ಬಂಡವಾಳ ಹೂಡಿಕೆದಾರರ ಸಮಾವೇಶಗಳಿಗಾಗಿ 88 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ. ಆದರೆ, ಹೂಡಿಕೆಯಾಗಿರುವುದು 94 ಕೋಟಿ ರೂ.ಗಳು ಮಾತ್ರ. ಇದು ಸರಿಯೇ?. ತೆರಿಗೆದಾರರ ಹಣದಲ್ಲಿ ಹೂಡಿಕೆದಾರರಿಗೆ ರತ್ನಗಂಬಳಿ ಹಾಸುವುದರಿಂದ ಏನು ಪ್ರಯೋಜನ’ ಎಂದು ಪ್ರಶ್ನಿಸಿದರು.
‘1995ರಲ್ಲಿ ಬೆಂಗಳೂರಿನ ಬಿಡದಿಯ ಬಳಿ ಟಯೋಟಾ ಕಂಪೆನಿಗೆ 400 ಎಕರೆ ಜಮೀನು ಮತ್ತು 16 ವರ್ಷ ತೆರಿಗೆ ಬಾಕಿ ಉಳಿಸಿಕೊಳ್ಳಲು ಅನುಕೂಲ ಕಲ್ಪಿಸಲಾಗಿತ್ತು. ಟಯೋಟಾ ಸಂಸ್ಥೆಯ ಬಳಿ 8,500 ಸಾವಿರ ಕೋಟಿ ರೂ.ಗಳಷ್ಟು ತೆರಿಗೆ ಬಾಕಿ ಉಳಿದಿದೆ ಎಂದು ಚಂದ್ರಪ್ಪ ದೂರಿದರು.
‘ಹೂಡಿಕೆದಾರರ ಸಮಾವೇಶದಲ್ಲಿ ಸಹಿ ಹಾಕಿರುವ ಕಂಪೆನಿಗಳಿಗೆ 16 ಸಾವಿರ ಎಂಎಲ್‍ಡಿ ನೀರು ಪೂರೈಸುವುದಾಗಿ ತಿಳಿಸಲಾಗಿದೆ. ನಮ್ಮಲ್ಲಿ ಕುಡಿಯಲು ನೀರಿಲ್ಲ. ಇಷ್ಟೆಲ್ಲಾ ಮೂಲಸೌಲಭ್ಯ ಮತ್ತು ಸವಲತ್ತುಗಳನ್ನು ನೀಡಿ ಕೈಗಾರಿಕೆಗಳನ್ನು ಆಹ್ವಾನಿಸಲಾಗುತ್ತಿದೆ. ಆದರೆ ಕಂಪೆನಿಗಳು ಸ್ಥಳೀಯರಿಗೆ ಉದ್ಯೋಗ ನೀಡುತ್ತಿಲ್ಲ ಎಂದು ಚಂದ್ರಪ್ಪ ಆಕ್ರೋಶ ವ್ಯಕ್ತಪಡಿಸಿದರು.