ವಲಯವಾರು ಕೈಗಾರಿಕಾ ಪಾರ್ಕ್‍ಗಳ ಸ್ಥಾಪನೆಗೆ ಕ್ರಮ : ಸಚಿವ ಎಂ.ಬಿ.ಪಾಟೀಲ್
ಇನ್ವೆಸ್ಟ್ ಕರ್ನಾಟಕ ಸಮಾವೇಶಕ್ಕೆ ಸಿದ್ದತೆ : 10 ಲಕ್ಷ ಕೋಟಿ ರೂ.ಬಂಡವಾಳ ಖಚಿತ

ಬೆಂಗಳೂರು : ರಾಜ್ಯದಲ್ಲಿ ಸಮಗ್ರ ಕೈಗಾರಿಕಾ ಬೆಳವಣಿಗೆಯನ್ನು ಸಾಧಿಸಲು ವಲಯವಾರು ಕೈಗಾರಿಕಾ ಪಾರ್ಕ್‍ಗಳನ್ನು ಅಭಿವೃದ್ಧಿಪಡಿಸುತ್ತಿದೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ಆಧುನಿಕ ಫಾರ್ಮಾ ಪಾರ್ಕ್, ವಿಜಯಪುರದಲ್ಲಿ ಸೋಲಾರ್ ಸೆಲ್ ಪಾರ್ಕ್ ಮತ್ತು ಕೃಷಿ ಉತ್ಪನ್ನಗಳನ್ನು ಆಧರಿಸಿದ ಆಗ್ರೋ ಪಾರ್ಕ್ ಸ್ಥಾಪಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ತಿಳಿಸಿದರು.
ಶನಿವಾರ ನಗರದ ಖಾಸಗಿ ಹೊಟೇಲ್‍ನಲ್ಲಿ ‘ಇನ್ವೆಸ್ಟ್ ಕರ್ನಾಟಕ-ಜಾಗತಿಕ ಹೂಡಿಕೆದಾರರ ಸಮಾವೇಶ’ಕ್ಕೆ ಪೂರ್ವಭಾವಿಯಾಗಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಚಿತ್ರದುರ್ಗದಲ್ಲಿ ಡ್ರೋನ್ ಪಾರ್ಕ್, ಜಂಗಮನಕೋಟೆಯಲ್ಲಿ ಸರ್ ಎಂ.ವಿಶ್ವೇಶ್ವರಯ್ಯನವರ ಹೆಸರಿನಲ್ಲಿ ಡೀಪ್-ಟೆಕ್ ಪಾರ್ಕ್, ದಾಬಸ್‍ಪೇಟೆಗೆ ಸಮೀಪದ ಹನುಮಂತಪುರದಲ್ಲಿ ಮೆಗಾ ಲಾಜಿಸ್ಟಿಕ್ಸ್ ಪಾರ್ಕ್, ಚಿಕ್ಕಬಳ್ಳಾಪುರ ಜಿಲ್ಲೆ ಮತ್ತು ಧಾರವಾಡದಲ್ಲಿ ಇ.ವಿ ಕ್ಲಸ್ಟರ್ಸ್ ಸ್ಥಾಪಿಸಲಾಗುವುದು ಎಂದು ಹೇಳಿದರು.
ಸಮಾವೇಶದ ಮೂಲಕ 10 ಲಕ್ಷ ಕೋಟಿ ರೂ.ಗೂ ಹೆಚ್ಚು ಹೂಡಿಕೆ ಬರುವುದು ಖಾತ್ರಿಯಾಗಿದೆ. ಹುಬ್ಬಳ್ಳಿ ವಿಮಾನ ನಿಲ್ದಾಣದ ಬಳಿ 400ಕ್ಕೂ ಹೆಚ್ಚು ನವೋದ್ಯಮಗಳಿಗೆ ಆಸರೆ ನೀಡಲಿರುವ 200 ಎಕರೆ ವಿಸ್ತಾರದ ಸ್ಟಾರ್ಟಪ್ ಪಾರ್ಕ್ ಅಸ್ತಿತ್ವಕ್ಕೆ ಬರಲಿದೆ. ಅಲ್ಲದೆ, ವಿಜಯಪುರದ ತಿಡಗುಂದಿಯಲ್ಲಿ 1,200 ಎಕರೆ ವಿಸ್ತೀರ್ಣದಲ್ಲಿ ಸೋಲಾರ್ ಸೆಲ್ ಮತ್ತು ಅಗ್ರೊ ಟೆಕ್ ಪಾರ್ಕ್ ಅಭಿವೃದ್ಧಿ ಪಡಿಸಲಾಗುವುದು ಎಂದು ಎಂ.ಬಿ.ಪಾಟೀಲ್ ತಿಳಿಸಿದರು.
ಸಮಾವೇಶದಲ್ಲಿ ಭವಿಷ್ಯದ ತಯಾರಿಕಾ ವಲಯ, ಸಾರಿಗೆ ಮತ್ತು ಪರಿಸರಸ್ನೇಹಿ ಇಂಧನ ಉತ್ಪಾದನೆ ವಲಯಗಳಿಗೆ ವಿಶೇಷ ಗಮನ ಕೊಡಲಾಗುತ್ತಿದೆ. ಇದರ ಅಂಗವಾಗಿ 60ಕ್ಕೂ ಹೆಚ್ಚು ಸ್ಟಾರ್ಟಪ್ ಕಂಪನಿಗಳು ಅತ್ಯಾಧುನಿಕ ತಂತ್ರಜ್ಞಾನವನ್ನು ಮತ್ತು ಅವುಗಳನ್ನು ಆಧರಿಸಿ ರೂಪಿಸಿರುವ ಪರಿಹಾರೋಪಾಯಗಳನ್ನು ಪ್ರದರ್ಶಿಸಲಿವೆ. ಇವುಗಳಲ್ಲಿ ಕಾರ್ಬನ್ ನ್ಯಾನೋಟ್ಯೂಬ್, ಅಟಾನಮಸ್ ಸಿಸ್ಟಮ್ಸ್, ಮಾನವರಹಿತ ಏರಿಯಲ್ ವೆಹಿಕಲ್ಸ್ ಮತ್ತು ಸುಧಾರಿತ ರೋಬೋಟಿಕ್ಸ್ ಮುಂತಾದವು ಸೇರಿವೆ ಎಂದು ಅವರು ಹೇಳಿದರು.
ಸಮಾವೇಶದಲ್ಲಿ 19 ರಾಷ್ಟ್ರಗಳು ಪಾಲ್ಗೊಳ್ಳುತ್ತಿದ್ದು. ಈ ಪೈಕಿ 10 ರಾಷ್ಟ್ರಗಳೊಂದಿಗೆ ಸುಸ್ಥಿರ ಆರ್ಥಿಕ ಬೆಳವಣಿಗೆಗೆ, ಹೂಡಿಕೆಗೆ ಇರುವ ಅವಕಾಶಗಳು, ಜಾಗತಿಕ ಪೂರೈಕೆ ಸರಪಳಿಯಲ್ಲಿ ಕರ್ನಾಟಕದ ಸ್ಥಾನಮಾನ, ರಾಜ್ಯದಲ್ಲಿ ಮರುಬಳಕೆ ಇಂಧನ ಕ್ಷೇತ್ರದ ಭವಿಷ್ಯ, ಆರೋಗ್ಯ ಸೇವೆ ಮುಂತಾದ ನಿರ್ಣಾಯಕ ಕ್ಷೇತ್ರಗಳನ್ನು ಕುರಿತು ಚರ್ಚಿಸಲಾಗುವುದು ಎಂದು ಎಂ.ಬಿ.ಪಾಟೀಲ್ ಮಾಹಿತಿ ನೀಡಿದರು.
ಸಾಧಕ ಕಂಪನಿಗಳಿಗೆ ಪುರಸ್ಕಾರ: ರಾಜ್ಯದ ಆರ್ಥಿಕ ಮತ್ತು ಕೈಗಾರಿಕಾ ಬೆಳವಣಿಗೆಗೆ ನಿರ್ಣಾಯಕ ಕೊಡುಗೆ ನೀಡುತ್ತಿರುವ 14 ಉದ್ಯಮಗಳನ್ನು ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಇದೇ ಮೊದಲ ಬಾರಿಗೆ ಗುರುತಿಸಿ, ಪುರಸ್ಕರಿಸಲಾಗುತ್ತಿದೆ. ಇವುಗಳಲ್ಲಿ ವೈಮಾಂತರಿಕ್ಷ ಮತ್ತು ರಕ್ಷಣೆ, ಆಟೋ/ಇ.ವಿ., ಜೈವಿಕ ತಂತ್ರಜ್ಞಾನ ಮತ್ತು ಜೀವವಿಜ್ಞಾನ ವಲಯಗಳ ಸಾಧಕ ಉದ್ಯಮಗಳು ಇರಲಿವೆ. ಈ ಕಾರ್ಯಕ್ರಮ ಫೆ.12ರ ಸಂಜೆ ನಡೆಯಲಿದೆ ಎಂದು ಅವರು ತಿಳಿಸಿದರು.
ʼತಮ್ಮ ಉದ್ಯಮಗಳಿಗೆ ಒಂದು ಬಾರಿಯ ಗರಿಷ್ಠ ಬಂಡವಾಳ ಹೂಡಿಕೆ ಮಾಡಿರುವ ಕಂಪನಿಗಳು ಮತ್ತು ಜಾಗತಿಕ ಮಟ್ಟದ ಸಂಶೋಧನೆ ಹಾಗೂ ಅಭಿವೃದ್ಧಿಗೆ (ಆರ್ ಅಂಡ್ ಡಿ) ಆದ್ಯತೆ ನೀಡಿರುವ ಉದ್ದಿಮೆಗಳನ್ನೂ ವಿಶೇಷವಾಗಿ ಪರಿಗಣಿಸಿ, ಪುರಸ್ಕಾರ ನೀಡಲಾಗುವುದು ಎಂದು ಎಂ.ಬಿ.ಪಾಟೀಲ್ ಹೇಳಿದರು.
ಹಾಗೆಯೇ, ರಾಜ್ಯದ ಕೈಗಾರಿಕಾ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸುತ್ತಿರುವ 35ಕ್ಕೂ ಹೆಚ್ಚು ಸಣ್ಣ ಮತ್ತು ಮಧ್ಯಮ ಸ್ತರದ ಕೈಗಾರಿಕೆಗಳು, ಜಿಲ್ಲಾ ಮಟ್ಟದಲ್ಲಿ ಅತ್ಯುತ್ತಮ ಸಾಧನೆ ಮಾಡುತ್ತಿರುವ ಮಹಿಳಾ ಉದ್ಯಮಿಗಳು, ವಲಯವಾರು ಕೈಗಾರಿಕಾ ಉತ್ಕೃಷ್ಟತೆ ಸಾಧಿಸಿರುವ ಉದ್ಯಮಗಳಿಗೆ ಫೆ.13ರ ಸಂಜೆ ಪ್ರಶಸ್ತಿ ಪುರಸ್ಕಾರ ಕೊಡಲಾಗುವುದು ಎಂದು ಅವರು ತಿಳಿಸಿದರು.
`ವೆಂಚುರೈಸ್’ ಉಪಕ್ರಮದಡಿ ಒಟ್ಟು 3 ಲಕ್ಷ ಡಾಲರ್ ಮೌಲ್ಯದ 9 ಬಹುಮಾನಗಳನ್ನು ಪ್ರದಾನ ಮಾಡಲಾಗುವುದು. ಇದರಲ್ಲಿ ಮೊದಲ ಮೂರು ಸ್ಥಾನಗಳಿಗೆ ಕ್ರಮವಾಗಿ 50 ಸಾವಿರ ಡಾಲರ್, 30 ಸಾವಿರ ಡಾಲರ್ ಮತ್ತು 20 ಸಾವಿರ ಡಾಲರ್ ನಗದು ಪುರಸ್ಕಾರವಿದೆ ಎಂದು ಎಂ.ಬಿ.ಪಾಟೀಲ್ ಮಾಹಿತಿ ನೀಡಿದರು.
ಹೂಡಿಕೆದಾರರ ಸಮಾವೇಶ ಉದ್ಘಾಟಿಸಲಿರುವ ರಾಜನಾಥ್ ಸಿಂಗ್: ಜಾಗತಿಕ ಹೂಡಿಕೆದಾರರ ಸಮಾವೇಶವನ್ನು ಫೆ.11ರ ಸಂಜೆ 4 ಗಂಟೆಗೆ ಬೆಂಗಳೂರು ಅರಮನೆಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉದ್ಘಾಟಿಸಲಿದ್ದಾರೆ. ರಾಜ್ಯಪಾಲ ಥಾವರ್‍ಚಂದ್ ಗೆಹ್ಲೋಟ್ ಉಪಸ್ಥಿತಿಯಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರೂ ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಎಂ.ಬಿ.ಪಾಟೀಲ್ ತಿಳಿಸಿದರು.
ಈ ಸಂದರ್ಭದಲ್ಲಿ 2025-30ರ ಅವಧಿಯ ನೂತನ ಕೈಗಾರಿಕಾ ನೀತಿ ಮತ್ತು ಕೈಗಾರಿಕಾ ಯೋಜನೆಗಳಿಗೆ ತ್ವರಿತ ಅನುಮೋದನೆ ನೀಡಲು ಏಕಗವಾಕ್ಷಿ ಪೋರ್ಟಲ್ ಬಿಡುಗಡೆ ಮಾಡಲಾಗುವುದು. ಫೆ.11 ರಿಂದ 14ರ ನಡುವೆ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಎಚ್.ಡಿ.ಕುಮಾರಸ್ವಾಮಿ, ವಿ.ಸೋಮಣ್ಣ, ಶೋಭಾ ಕರಂದ್ಲಾಜೆ, ಪೀಯೂಷ್ ಗೋಯಲ್, ನಿರ್ಮಲಾ ಸೀತಾರಾಮನ್, ಅಶ್ವಿನಿ ವೈಷ್ಣವ್ ಸಮಾವೇಶಕ್ಕೆ ಬರಲಿದ್ದಾರೆ. ರಾಜ್ಯಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಸಮಾರೋಪಕ್ಕೆ ಆಗಮಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಕ್ವಿನ್ ಸಿಟಿ ಒಡಂಬಡಿಕೆಗಳು: ಸಮಾವೇಶದಲ್ಲಿ ಮಹತ್ವಾಕಾಂಕ್ಷಿ ಕ್ವಿನ್ ಸಿಟಿ ಯೋಜನೆ ಸಂಬಂಧ ದೇಶ-ವಿದೇಶದ ಕೆಲವು ವಿಶ್ವವಿದ್ಯಾಲಯಗಳ ಜತೆ ಒಡಂಬಡಿಕೆ ಮಾಡಿಕೊಳ್ಳಲಾಗುವುದು. ಆರ್ಥಿಕ ಬೆಳವಣಿಗೆ ಕುರಿತು ಮಾಂಟೆಕ್ ಸಿಂಗ್ ಅಹ್ಲುವಾಲಿಯಾ, ಲಾಜಿಸ್ಟಿಕ್ಸ್ ವಲಯದಲ್ಲಿ ನಡೆಯುತ್ತಿರುವ ಆವಿಷ್ಕಾರಗಳನ್ನು ಕುರಿತು ವೋಲ್ವೊ ಸಮೂಹದ ಮುಖ್ಯಸ್ಥ ಮಾರ್ಟಿನ್ ಲುಂಡ್ ಸ್ಟೆಡ್, ಸಂದೀಪ್ ದೇಶಮುಖ್ ಮತ್ತು ಚಾಣಕ್ಯ ಹೃದಯ, ಯುವ ಸಂಶೋಧಕರನ್ನು ಕುರಿತು ಝೆರೋದಾ ಸಂಸ್ಥಾಪಕ ನಿಖಿಲ್ ಕಾಮತ್, ಉದ್ಯಮಿಗಳಾದ ಪಾರ್ಥ ಜಿಂದಾಲ್ ಹಾಗೂ ಸುಝಾನಾ ಮುತ್ತೂಟ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದು ಅವರು ವಿವರಿಸಿದರು.
ಹಿಂದಿನ ಸಲದ ಸಮಾವೇಶಕ್ಕೆ ಹೋಲಿಸಿದರೆ ಎರಡು ಪಟ್ಟು ಹೆಚ್ಚು ಗೋಷ್ಠಿಗಳನ್ನು ಏರ್ಪಡಿಸಲಾಗಿದೆ. ಇವುಗಳಲ್ಲಿ ಗೂಗಲ್ ಎಕ್ಸ್ ಸಂಸ್ಥಾಪಕ ಸೆಬಾಸ್ಟಿಯನ್ ತ್ರನ್, ಲ್ಯಾಮ್ ರೀಸರ್ಚ್ ಮುಖ್ಯಸ್ಥ ಪ್ಯಾಟ್ರಿಕ್ ಲಾರ್ಡ್, ಜನರಲ್ ಅಟಾಮಿಕ್ಸ್ ಗ್ಲೋಬಲ್ ಕಾರ್ಪೋರೇಷನ್ ಸಿಇಒ ವಿವೇಕ್ ಲಾಲ್, ಟಿವಿಎಸ್ ಮೋಟಾರ್ಸ್ ವ್ಯವಸ್ಥಾಪಕ ನಿರ್ದೇಶಕ ಸುದರ್ಶನ್ ವೇಣು ಗೋಷ್ಠಿಗಳಲ್ಲಿ ಮಾತನಾಡಲಿದ್ದಾರೆ ಎಂದು ಅವರು ಹೇಳಿದರು.
ಇದಲ್ಲದೇ, ಬೋಯಿಂಗ್ ಕಂಪನಿಯ ಉನ್ನತಾಧಿಕಾರಿ ರಾಬ್ ಬಾಯ್ಡ್, ನಥಿಂಗ್ ಕಂಪನಿಯ ಸಹ ಸಂಸ್ಥಾಪಕ ಅಕಿಸ್ ಇವ್ಯಾಂಜಿಲೈಡಿಸ್, ಗ್ರೀಸ್ ದೇಶದ ಮಾಜಿ ಪ್ರಧಾನಿ ಜಾರ್ಜ್ ಪೆಪೆಂಡ್ರಿಯೊ ಮುಂತಾದವರು ಮಾತನಾಡಲಿದ್ದಾರೆ ಎಂದು ಎಂ.ಬಿ.ಪಾಟೀಲ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ, ಕೆಐಎಡಿಬಿ ಸಿಇಒ ಡಾ.ಮಹೇಶ್ ಮುಂತಾದವರು ಉಪಸ್ಥಿತರಿದ್ದರು.