ಎಸ್‌ಐಟಿ ನೇತೃತ್ವದಲ್ಲಿ ಪಿಎಸ್ಸೈ ನೇಮಕಾತಿ ಹಗರಣದ ತನಿಖೆ : ಸಚಿವ ಕೃಷ್ಣ ಭೈರೇಗೌಡ
3ನೇ ಹಂತದ ಮೆಟ್ರೋ ಮಾರ್ಗ, ವಿಧಾನಸೌಧ ಮುಂದೆ ಭುವನೇಶ್ವರಿ ಪ್ರತಿಮೆ ಸ್ಥಾಪನೆಗೆ ಸಂಪುಟ ಸಭೆ ಅಸ್ತು
ಬೆಂಗಳೂರು: ಬಿಜೆಪಿ ಸರಕಾರದ ಅವಧಿಯಲ್ಲಿ ನಡೆದಿದ್ದ ಪೊಲೀಸ್ ಸಬ್ ಇನ್ಸ್ ಪೆಕ್ಟರ್ (ಪಿಎಸ್ಸೈ) ನೇಮಕಾತಿ ಹಗರಣ ಸಂಬಂಧ ಹೆಚ್ಚುವರಿ ತನಿಖೆಗಾಗಿ ಎಸ್‌ಐಟಿ(ವಿಶೇಷ ತನಿಖಾ ದಳ) ರಚನೆ, ವಿಧಾನಸೌಧದ ಆವರಣದಲ್ಲಿ ಭುವನೇಶ್ವರಿ ಪ್ರತಿಮೆ ಸ್ಥಾಪನೆಗೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆ ನಂತರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಂದಾಯ ಸಚಿವ ಕೃಷ್ಣ ಭೈರೇಗೌಡ, ರಾಜಧಾನಿ ಬೆಂಗಳೂರಿನ ಸಂಚಾರ ದಟ್ಟಣೆ ಸಮಸ್ಯೆ ಬಗೆಹರಿಸಲು ಭವಿಷ್ಯದ ದೃಷ್ಟಿಯಿಂದ ಮೆಟ್ರೋ ಮೂರನೇ ಹಂತಕ್ಕೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಲಾಗಿದೆ ಎಂದರು.
ಬೆಂಗಳೂರಿನಲ್ಲಿ ಸಂಚಾರದ್ದೇ ದೊಡ್ಡ ಸಮಸ್ಯೆಯಾಗಿದೆ. ಇದನ್ನು ಬಗೆಹರಿಸುವುದಕ್ಕೆ ಮೆಟ್ರೋದಿಂದ ಮಾತ್ರ ಸಾಧ್ಯ. ಹಾಗಾಗಿ, ಭವಿಷ್ಯದ ಅವಶ್ಯಕತೆ ಗಮನದಲ್ಲಿಟ್ಟುಕೊಂಡು ಎರಡು ಮಾರ್ಗಗಳನ್ನು ಕೈಗೆತ್ತಿಕೊಳ್ಳಲು ಮೆಟ್ರೋ 3ನೆ ಹಂತಕ್ಕೆ ಸಂಪುಟ ಒಪ್ಪಿಗೆ ನೀಡಿದೆ ಎಂದು ಅವರು ಹೇಳಿದರು.
ಜೆ.ಪಿ.ನಗರ, ಸಿಲ್ಕ್ ಬೋರ್ಡ್‍ನಿಂದ ಕೆಲಸ ನಡೆಯುತ್ತಿದೆ. ಸಿಲ್ಕ್ ಬೋರ್ಡ್‍ನಿಂದ ಹೆಬ್ಬಾಳ ಪ್ಲೈಓವರ್ ವರೆಗೆ ಬಂದಿದೆ. ಸುಮಾರು 32.15 ಕಿ.ಲೋ. ಮೀಟರ್‍ವರೆಗೆ ನಡೆಯಲಿದೆ. ಮೂರನೇ ಹಂತದ ಮೆಟ್ರೋ 15,611 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಕೈಗೆತ್ತಿಕೊಳ್ಳಲು ಸಂಪುಟ ಒಪ್ಪಿಗೆ ನೀಡಿದೆ ಎಂದು ಅವರು ತಿಳಿಸಿದರು.
ಪ್ರತಿಮೆ: ವಿಧಾನಸೌಧದ ಆವರಣದಲ್ಲಿ 23 ಕೋಟಿ ರೂ. ವೆಚ್ಚದಲ್ಲಿ ಭುವನೇಶ್ವರಿ ಪ್ರತಿಮೆ ಸ್ಥಾಪನೆಗೆ ತೀರ್ಮಾನ ಮಾಡಲಾಗಿದೆ. ಕೆಂಗಲ್ ಹನುಮಂತಯ್ಯ ಪ್ರತಿಮೆ ರಸ್ತೆಯ ಎಡಭಾಗದಲ್ಲಿ ಪ್ರತಿಮೆ ಸ್ಥಾಪನೆಯಾಗಲಿದೆ. ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಂಪೇಗೌಡ ಪ್ರತಿಮೆಗೆ 40ರಿಂದ 60 ಕೋಟಿ ರೂ. ಖರ್ಚಾಗಿತ್ತು. ಇಲ್ಲೂ ಪಾರ್ಕ್, ಲೋಹ, ಕಲ್ಲು ಮತ್ತಿತರ ಸಲಕರಣೆಗಳಿಗೆ ಹಣ ಬೇಕಾಗುತ್ತದೆ ಎಂದು ಅವರು ಉಲ್ಲೇಖಿಸಿದರು.
ಪಿಎಸ್ಸೈ ನೇಮಕಾತಿ ಹಗರಣ ಸಂಬಂಧ ತನಿಖೆ ನಡೆಸಲು ರಚಿಸಲಾಗಿದ್ದ ನಿವೃತ್ತ ನ್ಯಾ.ಬಿ.ವೀರಪ್ಪ ನೇತೃತ್ವದ ಸಮಿತಿ ಸರಕಾರಕ್ಕೆ ವರದಿ ಸಲ್ಲಿಸಿದೆ. ಸರಕಾರಿ ಅಧಿಕಾರಿಗಳು, ಖಾಸಗಿ ಹಾಗೂ ಮಧ್ಯವರ್ತಿಗಳು ಸೇರಿ 113 ಮಂದಿ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ವರದಿಯಲ್ಲ ತಿಳಿಸಲಾಗಿದೆ. ಜತೆಗೆ, ಕೆಲವರು ಸಮನ್ಸ್ ನೀಡಿದರೂ ಮಾಹಿತಿ ಕೊಟ್ಟಿಲ್ಲ ಎಂದು ಅವರು ಹೇಳಿದರು.
ಅದೇ ರೀತಿ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ವಲಯದಲ್ಲಿ ಹೇಳಿಕೆಗಳನ್ನು ನೀಡಿದ್ದಾರೆ. ಆದರೆ, ಆಯೋಗದ ಮುಂದೆ ಹೇಳಿಕೆ ಕೊಟ್ಟಿಲ್ಲ. ಕೆಲವು ವಿಚಾರಗಳ ಬಗ್ಗೆ ತನಿಖೆ ನಡೆಸಲು ವೀರಪ್ಪ ಸಲಹೆ ನೀಡಿದ್ದಾರೆ. ಹಾಗಾಗಿ, ಹೆಚ್ಚುವರಿ ತನಿಖೆಗಾಗಿ ವಿಶೇಷ ತನಿಖಾ ದಳ ರಚಿಸಲು ಸಂಪುಟ ಒಪ್ಪಿಗೆ ನೀಡಿದೆ ಎಂದು ಕೃಷ್ಣ ಬೈರೇಗೌಡ ಹೇಳಿದರು.
ಇತರೆ ನಿರ್ಣಯಗಳು: ಕಡಬ ವೆಟರ್ನರಿ ಕಾಲೇಜ್ ಅಭಿವೃದ್ಧಿಗೆ 163 ಕೋಟಿ ರೂ. ವೆಚ್ಚ ಭರಿಸಲು ಒಪ್ಪಿಗೆ ನೀಡಲಾಗಿದ್ದು, ಮೈಸೂರಿನಲ್ಲಿ ಮಹಾರಾಣಿ ಕಾಲೇಜ್ ಹೊಸ ಹಾಸ್ಟೆಲ್ ಸ್ಥಾಪನೆಗೆ 170 ಕೋಟಿ ರೂ. ಪ್ರಸ್ತಾವನೆಗೆ ಸಂಪುಟ ಒಪ್ಪಿಗೆ ಸೂಚಿಸಿದೆ.
ರೈತರ ಉತ್ಪಾದನೆ, ಲಾಭಾಂಶ ಹೆಚ್ಚು ಆಗಬೇಕು. ಬೆಳೆ ಸಂರಕ್ಷಣೆಗೆ 67 ಕೋಟಿ ರೂ. ವೆಚ್ಚದಲ್ಲಿ ಬಯೋಟೆಕ್ ಅಭಿವೃದ್ಧಿಗೆ ಅಗ್ರಿ ಇನ್ನೊವೇಷನ್ ಸೆಂಟರ್ ಮಾಡಲು ತೀರ್ಮಾನಿಸಲಾಗಿದೆ. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಸಮೀಪ ಜಾಗವಿದ್ದು, ಅಲ್ಲಿ ಮಾಡುವ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಅವರು ವಿವರಿಸಿದರು.
ಕೆಂಪೇಗೌಡ ಬಡಾವಣೆಯ ನಿವೇಶನಗಳನ್ನು ಲೀಸ್ ಆಧಾರವಾಗಿ ಕೊಟ್ಟಿದ್ದಾರೆ. ಕೆಲವರು ಕಂತುಗಳನ್ನು ಕಟ್ಟುವುದಕ್ಕೆ ಆಗಿಲ್ಲ. ಬಿಡಿಎಗೆ ಅರ್ಜಿ ಸಲ್ಲಿಸಿ ಮನವಿ ಮಾಡಿದ್ದಾರೆ. ಹಂಚಿಕೆ ಆದವರಿಗೆ ಮತ್ತೊಮ್ಮೆ ಅವಕಾಶ ಮಾಡಿಕೊಡಲು ಮನವಿ ಮಾಡಿದ್ದು, ಬಾಕಿ ಹಣ ಪಾವತಿಸಿದವರಿಗೆ ಕೊಡಲಾಗುವುದು ಎಂದು ಕೃಷ್ಣ ಬೈರೇಗೌಡ ಹೇಳಿದರು.
ಲೀಸ್ ಅಂಡ್ ಸೇಲ್ ಮಾಡಿಕೊಡಲು ಸಂಪುಟ ಒಪ್ಪಿಗೆ ನೀಡಿದ್ದು, ಇದಕ್ಕೆ ಮೂರು ತಿಂಗಳ ಕಾಲಾವಕಾಶ ಕೊಡಲಾಗುತ್ತದೆ. ಶೇ.12 ರಷ್ಟು ಬಡ್ಡಿ ಪಾವತಿಸಬೇಕಾಗುತ್ತದೆ. ಕಲ್ಯಾಣ ಕರ್ನಾಟಕ ವ್ಯಾಪ್ತಿಯಲ್ಲಿನ 7 ಜಿಲ್ಲೆಗಳಲ್ಲಿ ಹೊಸದಾಗಿ 33 ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡಗಳ ನಿರ್ಮಾಣ ಕಾಮಗಾರಿಗಳನ್ನು ಒಟ್ಟು 132 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಅದೇ ರೀತಿ, ಕೆ.ಆರ್.ಪುರದ ಎನ್‍ಜಿಇಎಫ್‍ನಲ್ಲಿರುವ ಜಾಗದಲ್ಲಿ ನಾನಾ ಪ್ರಸ್ತಾವನೆಗಳು ಬಂದಿದ್ದು, ಇಲ್ಲಿ 65 ಎಕರೆ ಭೂಮಿ ಇದ್ದು, ಆ ಭಾಗದಲ್ಲಿ ದೊಡ್ಡ ಪಾರ್ಕ್ ಇಲ್ಲ. ಟ್ರೀ ಪಾರ್ಕ್, ವಾಕಿಂಗ್, ಸೈಕಲ್ ಟ್ರಾಕ್, ಆಟದ ಮೈದಾನ ಇರಲಿದೆ. ಕೈಗಾರಿಕಾ ಇಲಾಖೆ ವತಿಯಿಂದ ಕೆಲಸ ಆಗಲಿದ್ದು, ಟ್ರೀ ಪಾರ್ಕ್ ಗೆ ಒಟ್ಟು 11 ಕೋಟಿ ರೂ. ವೆಚ್ಚ ಆಗಬಹುದೆಂದು ಅಂದಾಜಿಸಲಾಗಿದೆ ಎಂದು ಕೃಷ್ಣಭೈರೆಗೌಡ ತಿಳಿಸಿದರು.