ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಗೆ ಭಡ್ತಿ
ಬೆಂಗಳೂರು, ಜ.19: ಹಿರಿಯ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಅವರಿಗೆ ಐಜಿಪಿ ದರ್ಜೆಯಿಂದ ಎಡಿಜಿಪಿ ಶ್ರೇಣಿಗೆ ಭಡ್ತಿ ನೀಡಿ ರಾಜ್ಯ ಸರಕಾರ ಶುಕ್ರವಾರ ಆದೇಶ ಹೊರಡಿಸಿದೆ.
ಸದ್ಯ ವಾರ್ತಾ ಇಲಾಖೆ ಆಯುಕ್ತರಾಗಿರುವ ಹೇಮಂತ್ ನಿಂಬಾಳ್ಕರ್ ಅವರಿಗೆ ಭಡ್ತಿ ನೀಡಿ ಆಯುಕ್ತರ ಹುದ್ದೆಯಲ್ಲಿ ಮುಂದುವರಿಸಿ ಸರಕಾರ ಆದೇಶಿಸಿದೆ.
2022ರಲ್ಲಿ ಉನ್ನತ ಶಿಕ್ಷಣದ ಸಲುವಾಗಿ ಎರಡು ವರ್ಷಗಳ ಸುದೀರ್ಘ ರಜೆ ಪಡೆದು ತೆರಳಿದ್ದರು. ಬಳಿಕ 2023ರ ಜೂನ್‌ನಲ್ಲಿ ನಿಂಬಾಳ್ಕರ್ ಅವರ ರಜೆಯನ್ನು ರದ್ದುಪಡಿಸಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಹುದ್ದೆ ಹೊಣೆಗಾರಿಕೆ ನೀಡಲಾಗಿತ್ತು.
1998ನೇ ಬ್ಯಾಚ್‌ನ ಕರ್ನಾಟಕ ಕೇಡರ್‌ನ ಐಪಿಎಸ್ ಅಧಿಕಾರಿಯಾದ ಹೇಮಂತ್ ನಿಂಬಾಳ್ಕರ್ ಅವರು ಅವರು 2023ರ ಜೂನ್‌ನಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರಾಗಿ ನೇಮಕಗೊಂಡಿದ್ದರು. ಈ ಹಿಂದೆ ಬೆಳಗಾವಿ ಎಸ್‌ಪಿ, ಬೆಂಗಳೂರಿನ ಜಂಟಿ ಆಯುಕ್ತ (ಸಿಸಿಬಿ), ಹೆಚ್ಚುವರಿ ಆಯುಕ್ತ (ಪೂರ್ವ), ಹೆಚ್ಚುವರಿ ಆಯುಕ್ತ (ಆಡಳಿತ) ಹಾಗೂ ಸಿಐಡಿ ಐಜಿಪಿ ಸೇರಿದಂತೆ ವಿವಿಧ ಹುದ್ದೆಗಳನ್ನು ಹೇಮಂತ್ ನಿಂಬಾಳ್ಕರ್ ಅವರು ನಿರ್ವಹಿಸಿದ್ದರು.