ವಾಲ್ಮೀಕಿ ನಿಗಮದಲ್ಲಿ ಅಕ್ರಮ | ದಲಿತರ ದುಡ್ಡು ತಿಂದ ತಿಮಿಂಗಿಲಗಳಿಗೆ ಶಿಕ್ಷೆ ಆಗುವವರೆಗೂ ಸುಮ್ಮನಿರುವುದಿಲ್ಲ : ಆರ್.ಅಶೋಕ್
"ಎಸ್ಐಟಿ ಹೆಸರಿನಲ್ಲಿ ಪ್ರಕರಣವನ್ನು ಮುಚ್ಚಿಹಾಕುವ ಹುನ್ನಾರ ಫಲಿಸುವುದಿಲ್ಲ"
ಬೆಂಗಳೂರು : ವಾಲ್ಮೀಕಿ ಅಭಿವೃದ್ಧಿ ನಿಗಮದ ಭ್ರಷ್ಟಾಚಾರ ದಿನಕ್ಕೊಂದು ಗಂಭೀರ ಸ್ವರೂಪ ಪಡೆದುಕೊಳ್ಳುತ್ತಲೇ ಇದ್ದು, ಈಡಿ ದಾಳಿ, ಮಾಜಿ ಸಚಿವ ಬಿ.ನಾಗೇಂದ್ರ ಹಾಗು ನಿಗಮದ ಮಾಜಿ ಅಧ್ಯಕ್ಷ ಬಸನಗೌಡ ದದ್ದಲ್ ಎಸ್ಐಟಿ ವಿಚಾರಣೆಗೆ ಗೈರಾಗಿರುವುದು ಮತ್ತಷ್ಟು ಅನುಮಾನಗಳಿಗೆ ಇದೆ ಮಾಡಿಕೊಟ್ಟಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿರುವ ಅವರು, "ಸಿಎಂ ಸಿದ್ದರಾಮಯ್ಯ ನವರೇ, ಆರೋಪಿಗಳು ಎಸ್ಐಟಿ ವಿಚಾರಣೆಗೆ ಗೈರಾಗುತ್ತಿರುವುದು ಯಾಕೆ?. ವಿಚಾರಣೆಗೆ ಹಾಜರಾದರೆ ನಿಮ್ಮ ಹೆಸರು ಬಾಯಿ ಬಿಡುತ್ತಾರೆ ಎನ್ನುವ ಭಯವೇ?" ಎಂದು ಅಶೋಕ್ ಪ್ರಶ್ನಿಸಿದ್ದಾರೆ.
ʼಎಸ್ಐಟಿ ಹೆಸರಿನಲ್ಲಿ ಈ ಪ್ರಕರಣವನ್ನು ಮುಚ್ಚಿಹಾಕುವ ನಿಮ್ಮ ಹುನ್ನಾರ ಫಲಿಸುವುದಿಲ್ಲ. ಸತ್ಯ ಹೊರಬರುವರೆಗೂ, ದಲಿತರ ದುಡ್ಡು ತಿಂದ ತಿಮಿಂಗಿಲಗಳಿಗೆ ಶಿಕ್ಷೆ ಆಗುವವರೆಗೂ ನಾವು ಸುಮ್ಮನಿರುವುದಿಲ್ಲʼ ಎಂದು ಎಚ್ಚರಿಸಿದ್ದಾರೆ.
ಮುಡಾ ಭೂಹಗರಣ ; ಸಂಚು ಹೂಡಿ ಕಡತಗಳನ್ನು ನಾಶ ಮಾಡಲು ಹೊರಟಿದ್ದಾರೆ :
"4,000 ಕೋಟಿ ರೂ. ಮೌಲ್ಯದ ಮುಡಾ ಭೂಹಗರಣ ತಮ್ಮ ಕುತ್ತಿಗೆಗೆ ಬರುತ್ತಿದ್ದಂತೆ ಗಲಿಬಿಲಿಗೊಂಡಿರುವ ಸಿಎಂ ಸಿದ್ದರಾಮಯ್ಯನವರು ಹೇಗಾದರೂ ಮಾಡಿ ಸಾಕ್ಷಿ ನಾಶ ಮಾಡಬೇಕು ಎಂಬ ಸಂಚು ಹೂಡಿ ಕಡತಗಳನ್ನ ನಾಶ ಮಾಡಲು ಹೊರಟಿದ್ದಾರೆ" ಎಂದು ಆರ್.ಅಶೋಕ್ ಆರೋಪಿಸಿದ್ದಾರೆ.
ʼಸಿದ್ದರಾಮಯ್ಯನವರೇ, ತಮ್ಮ ಡೋಂಗಿ ಸಮಾಜವಾದಿ ಮುಖವಾಡ ಕಳಚಿ ಬಿದ್ದಿದೆ. ತಮ್ಮ ಭ್ರಷ್ಟಾಚಾರದ ಕರ್ಮಕಾಂಡ ಬಟಾ ಬಯಲಾಗಿದೆ. ಅಧಿಕಾರ ದುರ್ಬಳಕೆ ಮಾಡಿಕೊಂಡು ಕಡತಗಳನ್ನ ನಾಶ ಮಾಡಬಹುದು, ಆದರೆ ಸತ್ಯವನ್ನು ಎಂದಿಗೂ ನಾಶ ಮಾಡಲು ಆಗುವುದಿಲ್ಲʼ ಎಂದು ತಿಳಿಸಿದ್ದಾರೆ.