ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅಕ್ರಮ | ಜೂ.28ಕ್ಕೆ ರಾಜ್ಯಾದ್ಯಂತ ಹೋರಾಟಕ್ಕೆ ಬಿಜೆಪಿ ಕರೆ
ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಬಿ.ಶ್ರೀರಾಮುಲು ಒತ್ತಾಯ
PC: PTI
ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ರೂ. ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜೀನಾಮೆ ಕೊಡಬೇಕೆಂದು ಮಾಜಿ ಸಚಿವ ಬಿ.ಶ್ರೀರಾಮುಲು ಆಗ್ರಹಿಸಿದರು.
ಶನಿವಾರ ಮಲ್ಲೇಶ್ವರದ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಬರುವ ದಿನಗಳಲ್ಲಿ ಬಿಜೆಪಿ ವತಿಯಿಂದ ರಾಜ್ಯಾದ್ಯಂತ ಹೋರಾಟ ನಡೆಸುವಂತೆ ರಾಜ್ಯಾಧ್ಯಕ್ಷ ವಿಜಯೇಂದ್ರರ ನೇತೃತ್ವದ ಸಭೆಯು ತೀರ್ಮಾನ ಕೈಗೊಂಡಿದೆ. ಜೂ.28ರಂದು ಎಲ್ಲಾ ಜಿಲ್ಲೆಗಳು, ತಾಲೂಕು ಮಟ್ಟದಲ್ಲಿ ಹೋರಾಟ ರೂಪಿಸಲಾಗುವುದು ಎಂದರು.
14ಕ್ಕೂ ಹೆಚ್ಚು ಬಾರಿ ಹಣಕಾಸು ಸಚಿವರಾದ ಸಿದ್ದರಾಮಯ್ಯನವರ ಗಮನಕ್ಕೆ ಬಾರದೆ ಇಷ್ಟು ದೊಡ್ಡ ಮೊತ್ತ ಬೇರೆಡೆ ವರ್ಗಾವಣೆ ಆದುದು ಹೇಗೆ?. ಆದ್ದರಿಂದ, ಈ ಹಗರಣದಲ್ಲಿ ಸಿದ್ದರಾಮಯ್ಯನವರ ಮೇಲೆ ಅನುಮಾನ ಬರುತ್ತಿದೆ. ಸಿದ್ದರಾಮಯ್ಯನವರ ಸರಕಾರ ಅಧಿಕಾರಕ್ಕೆ ಬಂದ ಬಳಿಕ ವಾಲ್ಮೀಕಿ ನಿಗಮದಲ್ಲಿ ಚಂದ್ರಶೇಖರ್ ಎಂಬ ಅಮಾಯಕ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಚಿವರ ಮೌಖಿಕ ಆದೇಶದನ್ವಯ 187ಕೋಟಿ ರೂ.ಹಣ ದುರ್ಬಳಕೆ ಮಾಡಿಕೊಂಡಿದ್ದನ್ನು ಡೆತ್ನೋಟಿನಲ್ಲಿ ಅವರು ಬರೆದಿಟ್ಟಿದ್ದರು ಎಂದು ತಿಳಿಸಿದರು.
11ಸಾವಿರ ಕೋಟಿ ರೂ. ದುರ್ಬಳಕೆ: ಪರಿಶಿಷ್ಟ ಸಮುದಾಯದ ಏಳಿಗೆ, ಮಕ್ಕಳ ಭವಿಷ್ಯದ ಸಲುವಾಗಿ, ಎಸ್ಸಿ-ಎಸ್ಟಿ ವರ್ಗಗಳಿಗೆ ಮೂಲಸೌಕರ್ಯ, ಭೂ ಒಡೆತನ, ನೇರ ಸಾಲ, ಉನ್ನತ ಶಿಕ್ಷಣ ಸೇರಿ ಶೇ.24ರಷ್ಟು ಹಣವನ್ನು ಮೀಸಲಿಡಬೇಕಿದೆ. ಆದರೆ, ಕಳೆದ ವರ್ಷ ಈ ಸಮುದಾಯದ ಏಳಿಗೆಗಾಗಿ ಮೀಸಲಿಟ್ಟ 11ಸಾವಿರ ಕೋಟಿ ರೂ. ಬೇರೆ ಕಡೆ ವರ್ಗಾಯಿಸಿದ ಅನ್ಯಾಯ ಮಾಡಿದೆ ಎಂದು ಆಕ್ಷೇಪಿಸಿದರು.
ಪರಿಶಿಷ್ಟ ವರ್ಗಕ್ಕೆ ಮೂಲಭೂತ ಸೌಕರ್ಯ ಕೊಡುವ ಸಲುವಾಗಿ ಇರುವ ಹಣವನ್ನು ಸರಿಯಾಗಿ ಬಳಸದೆ, ಬೇರೆಡೆ ವರ್ಗಾಯಿಸಿ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದೆ. ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಸಮುದಾಯದ ಪ್ರಮುಖರು, ಶಾಸಕರು, ಮಾಜಿ ಶಾಸಕರ ಸಭೆ ನಡೆಸಲಾಗಿದೆ. ಪರಿಶಿಷ್ಟ ವರ್ಗಗಳ ವಾಲ್ಮೀಕಿ ಸಮುದಾಯದ ಎಲ್ಲ ಜಿಲ್ಲೆಗಳ ಮುಖಂಡರು ಭಾಗವಹಿಸಿದ್ದರು ಎಂದು ವಿವರಿಸಿದರು. ಅಲ್ಲಿ ಕೆಲವು ನಿರ್ಧಾರಗಳನ್ನು ಮಾಡಲಾಗಿದೆ ಎಂದು ಹೇಳಿದರು.