ಕಾಂಗ್ರೆಸ್ ಪಕ್ಷಕ್ಕೆ ಅಂಬೇಡ್ಕರ್ ಹೆಸರು ಹೇಳುವ ನೈತಿಕತೆ ಇದೆಯೇ: ಬಿ.ವೈ.ವಿಜಯೇಂದ್ರ ಪ್ರಶ್ನೆ
"ನೆಹರೂ ಕುಟುಂಬದ ಕಟ್ಟಕಡೆಯ ವ್ಯಕ್ತಿಗೂ ಅಧಿಕಾರ ಕೊಡುವುದೇ ಕಾಂಗ್ರೆಸ್ ಪಕ್ಷದ ಗುರಿ"
ಬೆಂಗಳೂರು: "ನೆಹರೂ ಕುಟುಂಬದ ಕಟ್ಟಕಡೆಯ ವ್ಯಕ್ತಿಗೂ ಅಧಿಕಾರ ಕೊಡುವುದೇ ಕಾಂಗ್ರೆಸ್ ಪಕ್ಷದ ಗುರಿ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದ್ದಾರೆ.
ರವಿವಾರ ಮಲ್ಲೇಶ್ವರದ ಬಿಜೆಪಿ ಕಾರ್ಯಾಲಯ ಎಸ್‍ಸಿ ಮೋರ್ಚಾ ವತಿಯಿಂದ ಏರ್ಪಡಿಸಿದ ‘ಸಂವಿಧಾನ ಸಮರ್ಪಣಾ ದಿನ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಅಂಬೇಡ್ಕರ್ ಹೆಸರನ್ನು ನುಡಿಮುತ್ತಾಗಿ ಬಳಸುವ ಕಾಂಗ್ರೆಸ್ ಪಕ್ಷವು ಗೌರವಯುತವಾಗಿ ಅವರ ಅಂತ್ಯ ಸಂಸ್ಕಾರವನ್ನೂ ಮಾಡಿಲ್ಲ. ಆ ಪಕ್ಷಕ್ಕೆ ಅಂಬೇಡ್ಕರ್ ಹೆಸರು ಹೇಳುವ ನೈತಿಕತೆ ಇದೆಯೇ?’ ಎಂದು ಪ್ರಶ್ನಿಸಿದರು.
ನೆಹರೂ ಸ್ಮಾರಕಕ್ಕೆ 30 ಎಕರೆ, ಇಂದಿರಾ ಗಾಂಧಿ ಅವರ ಸ್ಮಾರಕಕ್ಕೆ 20 ಎಕರೆ ನೀಡಿದ್ದರು. ಆದರೆ, ಸಂವಿಧಾನ ನೀಡಿದವರ ರಾಷ್ಟ್ರೀಯ ಸ್ಮಾರಕವನ್ನೇಕೆ ಮಾಡಿಲ್ಲ? ಅವರ ನೆನಪಾಗಲಿಲ್ಲವೇ?. ಮೋದಿ ಅವರು ಅಂಬೇಡ್ಕರ್ ಅವರ ಸ್ಮಾರಕ ಘೋಷಿಸಿ ಉದ್ಘಾಟನೆ ಮಾಡಿದ್ದಾರೆ ಎಂದ ಅವರು, ಕಾಂಗ್ರೆಸ್ಸಿಗರಿಂದ ಅಂಬೇಡ್ಕರ್ ಅವರ ಬಗ್ಗೆ ತಿಳಿದುಕೊಳ್ಳುವ ಅಗತ್ಯ ಬಿಜೆಪಿಯವರಿಗೆ ಇಲ್ಲ’ ಎಂದು ಹೇಳಿದರು.
ದೇಶದ ಸಂವಿಧಾನ ಈ ರಾಷ್ಟ್ರದ ಸಾಮಾಜಿಕ-ಸಾಂಸ್ಕತಿಕ ವೈವಿಧ್ಯತೆ ಮತ್ತು ಸಂಕೀರ್ಣತೆಯನ್ನು ಪ್ರತಿಬಿಂಬಿಸುವ ವಿಶ್ವದ ಅತಿ ಉದ್ದವಾದ ಲಿಖಿತ ಸಂವಿಧಾನ ಎಂದು ಹೆಸರಾಗಿದೆ. ಭಾರತದ ಸಂವಿಧಾನವು ಪ್ರಜಾಪ್ರಭುತ್ವ, ನ್ಯಾಯ, ಸ್ವಾತಂತ್ರ್ಯ ಮತ್ತು ಸಮಾನತೆಯ ತತ್ವಗಳನ್ನು ಪ್ರತಿಪಾದಿಸುತ್ತದೆ, ಇದುವೇ ನಮ್ಮ ದೇಶದ ಆಡಳಿತ ವ್ಯವಸ್ಥೆಯ ತಳಹದಿ ಎಂದು ತಿಳಿಸಿದರು.
ಸಿದ್ದರಾಮಯ್ಯನವರು ಮತಬ್ಯಾಂಕ್ ರಾಜಕೀಯವನ್ನು ತಮ್ಮದಾಗಿಸಿಕೊಂಡಿದ್ದಾರೆ. ಬಾಬಾಸಾಹೇಬರ ಆಶಯವನ್ನು ಮೋದಿಜೀ ಅವರು ಅನುಷ್ಠಾನ ಮಾಡುತ್ತಿದ್ದಾರೆ. ಸಂವಿಧಾನವನ್ನು ಉಳಿಸುವ ಮಹತ್ವದ ಜವಾಬ್ದಾರಿ ದೇಶದ ಪ್ರತಿಯೊಬ್ಬ ಪ್ರಜೆಯ ಮೇಲೂ ಇದೆ ಎಂದು ಅವರು ತಿಳಿಸಿದರು.