‘ಜಾತಿಗಣತಿ ವರದಿ’ ನಾಳೆ ಸಿಎಂಗೆ ಸಲ್ಲಿಕೆ ಸಾಧ್ಯತೆ
ಬೆಂಗಳೂರು : ರಾಜ್ಯದಲ್ಲಿ ತೀವ್ರ ರಾಜಕೀಯ ಚರ್ಚೆಗೆ ಗ್ರಾಸವಾಗಿರುವ ಸಾಮಾಜಿಕ, ಆರ್ಥಿಕ ಶೈಕ್ಷಣಿಕ ಸಮೀಕ್ಷಾ (ಜಾತಿ ಗಣತಿ) ವರದಿ ಸಲ್ಲಿಕೆಗೆ ಕೊನೆಗೂ ಕಾಲ ಕೂಡಿಬಂದಿದ್ದು, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ನಾಳೆ(ಫೆ.29) ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ವರದಿ ಸಲ್ಲಿಕೆ ಸಾಧ್ಯತೆಗಳಿವೆ.
ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗಡೆ, ಫೆ.28ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಖುದ್ದು ಭೇಟಿ ಮಾಡಿದ್ದು, ಆಯೋಗದ ವರದಿ ಸಲ್ಲಿಕೆಗೆ ಕಾಲಾವಕಾಶ ಕೋರಿದ್ದಾರೆಂದು ಗೊತ್ತಾಗಿದೆ. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷ ಕಾಂತರಾಜು ಸಮಿತಿ ಸಿದ್ಧಪಡಿಸಿರುವ ವರದಿ ಬಗ್ಗೆ ಅಪಸ್ವರ ಕೇಳಿ ಬಂದಿತ್ತು
ಆ ಬಳಿಕ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗಡೆ ಸರಕಾರಕ್ಕೆ ಜಾತಿಗಣತಿ ವರದಿ ನೀಡಲು ಮುಂದಾಗಿದ್ದರು. ಅದೇ ವೇಳೆ ಅಧ್ಯಕ್ಷರ ಅವಧಿ ಮುಕ್ತಾಯದ ಹಿನ್ನೆಲೆಯಲ್ಲಿ ಅವಧಿಯನ್ನು ವಿಸ್ತರಣೆ ಮಾಡಲಾಗಿತ್ತು. ಈ ಮಧ್ಯೆ ಕಾಂತರಾಜು ವರದಿ ಸ್ವೀಕಾರ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು.
ವರದಿ ಸ್ವೀಕಾರಕ್ಕೆ ಕೆಲ ಸಮುದಾಯಗಳಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಜಾತಿಗಣತಿ ವರದಿಯಲ್ಲಿ ಯಾವುದೇ ರೀತಿಯ ಲೋಪವಿದ್ದರೆ ತಜ್ಞರ ಸಲಹೆ ಪಡೆಯುತ್ತೇವೆ. ವರದಿ ಸ್ವೀಕರಿಸಿದ ಬಳಿಕ ಅದನ್ನು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಸೂಕ್ತ ತೀರ್ಮಾನ ಮಾಡಲಾಗುವುದು ಎಂದು ಸಿದ್ದರಾಮಯ್ಯ ಭರವಸೆ ನೀಡಿದ್ದರು.