56 ಇಂಚಿನ ಸರಕಾರವನ್ನು ಪ್ರಶ್ನೆ ಮಾಡುವುದು ತಪ್ಪೇ?: ಕೇಂದ್ರದ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ
ಕಲಬುರಗಿ: ಸಂಸದ ಪ್ರತಾಪ್ ಸಿಂಹ ಅವರಿಂದ ದೇಶ ತಲೆತಗ್ಗಿಸುವಂತಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಹೇಳಿದರು.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ʼಸಂಸದ ಭವನದಲ್ಲಿ ಹೊಗೆ ಬಾಂಬ್ ದಾಳಿಯ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಏಕೆ ಮಾತಾಡುತ್ತಿಲ್ಲ. ದಾಳಿಕೋರರಿಗೆ ಪಾಸ್ ವಿತರಣೆ ವಿಚಾರ ಬಿಜೆಪಿ ಮುಚ್ಚಿಹಾಕುವ ಪ್ರಯತ್ನ ಮಾಡುತ್ತಿದೆ ಎಂದು ಅವರು ಆರೋಪಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಕೆ ಶಿವುಕುಮಾರ ಅವರ ಬಗ್ಗೆ ಮಾಧ್ಯಮಗಳ ಮುಂದೆ ಬಂದು ಏಕವಚನದಲ್ಲಿ ಮಾತನಾಡುವ ಪ್ರತಾಪ್ ಸಿಂಹ ಈಗೇಕೆ ಮಾಧ್ಯಮಗಳ ಮುಂದೆ ಬಂದು ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.
50 ವರ್ಷಗಳ ನಂತರ ದೇಶದಲ್ಲಿ 56 ಇಂಚಿನ ಸರಕಾರ ಬಂದಿದೆ ಎಂದು ಹೇಳುವ ಬಿಜೆಪಿ ನಾಯಕರಿಗೆ ಸದನದಲ್ಲಿ ಹೊಗೆ ಬಾಂಬ್ ದಾಳಿ ಯಾಕಾಯಿತು ಎಂಬುದರ ಬಗ್ಗೆ ಸ್ಪಷ್ಟನೆ ನೀಡಲು ಆಗುತ್ತಿಲ್ಲ. ವಿರೋಧ ಪಕ್ಷದವರು ಪ್ರಶ್ನೆ ಕೇಳಿದರೆ ಅಪಾದನೆ ಮಾಡಲಾಗುತ್ತಿದೆ ಎಂದು ಬಿಂಬಿಸಲಾಗುತ್ತಿದೆ. ಹಾಗಾದರೇ ಈ ಸರಕಾರಕ್ಕೆ ಪ್ರಶ್ನೆ ಕೇಳುವುದು ತಪ್ಪಾ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.