ಪಕ್ಷಿಕೆರೆಯ ಸಂಘಪರಿವಾರದ ಕಾರ್ಯಕರ್ತನಿಂದ ಸಂತ್ರಸ್ತಳಾದ ಯುವತಿ ಹಿಂದೂವಲ್ಲವೇ?: ಕಾಂಗ್ರೆಸ್ ಪ್ರಶ್ನೆ
''ಶೋಭಾ ಕರಂದ್ಲಾಜೆ ಸೇರಿ ಬಿಜೆಪಿ ಪ್ರೈವೇಟ್ ತನಿಖಾಧಿಕಾರಿಗಳು ಏಕೆ ಮೌನವಾಗಿದ್ದಾರೆ?''
ಬೆಂಗಳೂರು: ದಕ್ಷಿಣ ಕನ್ನಡ ಜಿ್ಲ್ಲೆಯ ಮುಲ್ಕಿಯ ಪಕ್ಷಿಕೆರೆಯಲ್ಲಿ ನೆರೆ ಮನೆಯ ಮಹಿಳೆಯೊಬ್ಬರು ಬಚ್ಚಲು ಕೋಣೆಯಲ್ಲಿ ಸ್ನಾನ ಮಾಡುವುದನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದ ಪ್ರಕರಣದಲ್ಲಿ ಸಂಘಪರಿವಾರದ ಕಾರ್ಯಕರ್ತ ಸುಮಂತ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡಿದೆ.
ಶನಿವಾರ ಟ್ವೀಟ್ ಮಾಡಿರುವ ಕಾಂಗ್ರೆಸ್, 'ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಿಟಿ ರವಿ ಸೇರಿ ಬಿಜೆಪಿಯ ನಾಯಕರು ಈ ಘಟನೆ ಬಗ್ಗೆ ಮೌನವಹಿಸಿರುವುದು ಏಕೆ ಎಂದು ಪ್ರಶ್ನೆ ಮಾಡಿದೆ.
‘ಬಿಜೆಪಿ ರಕ್ಷಣಾ ಪಡೆ’ಯವನೊಬ್ಬ ಹಿಂದೂ ಹೆಣ್ಣುಮಕ್ಕಳ ವಿಡಿಯೋ ಮಾಡಿ ಸಿಕ್ಕಿಬಿದ್ದಿದ್ದಾನೆ. ಈತ ವಿಡಿಯೋ ಮಾಡಿ ಬಿಜೆಪಿ ಕಚೇರಿಗೆ ಕಳಿಸುತ್ತಿದ್ದನೇ? ಅಥವಾ ಸಿಟಿ ರವಿ, ಪ್ರತಾಪ್ ಸಿಂಹ ಅವರಿಗೆ ಕಳಿಸುತ್ತಿದ್ದನೇ?' ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.
''ಇವನಿಂದ ಸಂತ್ರಸ್ತಳಾದ ಯುವತಿ ಹಿಂದೂವಲ್ಲವೇ? ಈತನ ಕೃತ್ಯದ ಹಿಂದೆ ಯಾವ ಷಡ್ಯಂತ್ರವಿದೆ? ಶೋಭಾ ಕರಂಸ್ಲಾಜೆ ಸೇರಿದಂತೆ ಬಿಜೆಪಿಯ ಎಲ್ಲಾ ಪ್ರೈವೇಟ್ ತನಿಖಾಧಿಕಾರಿಗಳು ಏಕೆ ಮೌನವಾಗಿದ್ದಾರೆ?'' ಎಂದು ಕಾಂಗ್ರೆಸ್ ಕಿಡಿಕಾರಿದೆ.
ಆರೋಪಿ ಸುಮಂತ್ ಗೆ ನ್ಯಾಯಾಂಗ ಬಂಧನ
ಪ್ರಕರಣ ಸಂಬಂಧ ಮಾಹಿತಿ ನೀಡಿರುವ ಮಂಗಳೂರು ನಗರ ಪೊಲೀಸ್ ಆಯುಕ್ತ, 'ಘಟನೆಗೆ ಸಂಬಂಧಿಸಿ ಪ್ರಜ್ವಲ್ ಎಂಬವರು ಮುಲ್ಕಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಸುಮಂತ್ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ನ್ಯಾಯಾಲಯವು ಸುಮಂತ್ ಗೆ ನ್ಯಾಯಾಂಗ ಬಂಧನ ವಿಧಿಸಿದೆ. ಮೊಬೈಲ್ ಫೋನ್ ನ್ನು ಎಫ್ಎಸ್ಎಲ್ ತನಿಖೆಗೆ ಕಳುಹಿಸಲಾಗಿದ್ದು, ವರದಿಯ ಬಳಿಕ ಹೆಚ್ಚಿನ ಮಾಹಿತಿ ನೀಡಲಾಗುವುದು' ಎಂದು ತಿಳಿಸಿದ್ದಾರೆ.