ಕಾನೂನುಗಳ ಕನಿಷ್ಠ ಜ್ಞಾನ ಇಲ್ವಾ?; ಹುಲಿ ಉಗುರು ಪ್ರಕರಣಕ್ಕೆ ಟಿಪ್ಪುವನ್ನು ಎಳೆದು ತಂದ ಆರಗ ಜ್ಞಾನೇಂದ್ರಗೆ ಕಾಂಗ್ರೆಸ್ ತರಾಟೆ
ಬೆಂಗಳೂರು: ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಹುಲಿ ಉಗುರು ಪೆಂಡೆಂಟ್ ಧರಿಸಿದ ವ್ಯಕ್ತಿಗಳ ಮನೆಯಲ್ಲಿ ಅರಣ್ಯ ಇಲಾಖೆ ಶೋಧ ಕಾರ್ಯ ನಡೆಸುತ್ತಿದ್ದು, ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಟಿಪ್ಪು ಸುಲ್ತಾನ್ ಅವರ ಹೆಸರನ್ನು ಉಲ್ಲೇಖಿಸಿ ಹೇಳಿಕೆ ನೀಡಿದ್ದರು. ಈ ಬಗ್ಗೆ ಕಾಂಗ್ರೆಸ್ ತೀವ್ರ ತರಾಟೆಗೆ ತೆಗೆದುಕೊಂಡಿದೆ.
ʼʼಹುಲಿ ಕೊಲ್ಲುವ ಟಿಪ್ಪು ಫೋಟೋ ನೋಡಿ ಜನರೂ ಹುಲಿ ಕೊಲ್ಲಲು ಹೋಗುತ್ತಾರೆ ಎನ್ನುವುದು ಮೂರ್ಖತನದ ಪರಮಾವಧಿʼʼ ಎಂದು ಕಾಂಗ್ರೆಸ್ ಕಿಡಿಕಾರಿದೆ.
ಆರಗ ಜ್ಞಾನೇಂದ್ರ ಹೇಳಿದ್ದೇನು?
ಹುಲಿ ಉಗುರು ಪ್ರಕರಣದ ವಿಚಾರವಾಗಿ ಮಾತನಾಡುತ್ತಾ ಆರಗ ಜ್ಞಾನೇಂದ್ರ ಅವರು, ʼʼಟಿಪ್ಪು ಸುಲ್ತಾನ್ ಫೋಟೋ ನಾವು ನೋಡುವುದೇ ಹುಲಿ ಕೊಂದ ದೃಶ್ಯದಲ್ಲಿ. ಅದನ್ನ ನೋಡಿ ಪ್ರೇರಣೆಗೊಂಡು ಜನ ಹುಲಿ ಬೇಟೆಯಾಡಲು ಶುರು ಮಾಡಿದರೆ, ಟಿಪ್ಪು ಫೋಟೋಗಳನ್ನು ಯಾರೆಲ್ಲಾ ಮನೆಯಲ್ಲಿ ಇಟ್ಟುಕೊಂಡಿದ್ದಾರೆ ಅವರನ್ನೆಲ್ಲ ಬಂಧನ ಮಾಡಲು ಸಾಧ್ಯನಾ.? ಅದು ವನ್ಯಜೀವಿ ಕಾಯ್ದೆ ವಿರುದ್ಧ. ನಾನು ಕಾನೂನಿನ ವಿರುದ್ಧ ಅಲ್ಲ. ಅವುಗಳ ವಸ್ತುಗಳನ್ನ ಮಾರಾಟ ಮಾಡುವುದು ನಿಷಿದ್ಧ ಅದನ್ನ ನಾನು ಒಪ್ಪುತ್ತೇನೆ. ಆದರೆ ಅನಾದಿಕಾಲದಿಂದ ಉಳಿಸಿಕೊಂಡು ಬಂದಿರುವಂತಹ ಕೆಲ ವಸ್ತುಗಳನ್ನು ಬಿಡಬೇಕು. ಇಲ್ಲವಾದರೆ ಇವರನ್ನೆಲ್ಲ ಹಾಕಲು ಜೈಲು ಸಾಲುವುದಿಲ್ಲʼʼ ಎಂದು ಹೇಳಿಕೆ ನೀಡಿದ್ದರು.
ʼʼ4 ವರ್ಷ ರಾಜ್ಯದ ಗೃಹಸಚಿವರಾಗಿದ್ದು ಘೋರ ದುರಂತʼʼ
ʼʼಆರಗ ಜ್ಞಾನೇಂದ್ರ ಅವರೇ, ನಿಮ್ಮ ಬ್ರಾಂಡ್ ಯಾವುದು? ಚೆನ್ನಾಗಿಯೇ ಕಿಕ್ ಹೊಡೆದಂತಿದೆ?! ಕಾಯ್ದೆ ಕಾನೂನುಗಳ ಕನಿಷ್ಠ ಜ್ಞಾನ ಇಲ್ಲದೆ ತೀರ ಬಾಲಿಶವಾಗಿ ಮಾತನಾಡುತ್ತಿರುವ ತಾವು 4 ವರ್ಷ ರಾಜ್ಯದ ಗೃಹಸಚಿವರಾಗಿದ್ದು ಘೋರ ದುರಂತ!ʼ ಎಂದು ಕಾಂಗ್ರೆಸ್ ಟೀಕಿಸಿದೆ.
ʼʼವನ್ಯಜೀವಿಗಳ ಉತ್ಪನ್ನಗಳ ಬಳಕೆ ಹಾಗೂ ಸಂಗ್ರಹ ವನ್ಯಜೀವಿಗಳ ಹತ್ಯೆಗೆ ಪ್ರೋತ್ಸಾಹಿಸುವ ಸಾಧ್ಯತೆ ಇರುವುದರಿಂದ ಜಾಗೃತಿ ಮೂಡಿಸುವ ಹಾಗೂ ಕಾನೂನು ಪಾಲಿಸುವ ಸಲುವಾಗಿ ಪ್ರಕರಣ ದಾಖಲಿಸಲಾಗುತ್ತಿದೆ. ಸರಕಾರದ ಕಾನೂನು ಪಾಲನೆಯನ್ನು ಪ್ರೋತ್ಸಾಹಿಸಬೇಕೆ ಹೊರತು ಕೊಂಕು ತೆಗೆಯುವುದಲ್ಲ, ಹುಲಿ ಕೊಲ್ಲುವ ಟಿಪ್ಪು ಫೋಟೋ ನೋಡಿ ಜನರೂ ಹುಲಿ ಕೊಲ್ಲಲು ಹೋಗುತ್ತಾರೆ ಎನ್ನುವುದು ಮೂರ್ಖತನದ ಪರಮಾವಧಿ, ಜ್ಞಾನೇಂದ್ರರವರೇ, ಹೊಯ್ಸಳರ ಲಾಂಛನವೂ ಹುಲಿ ಕೊಲ್ಲುವುದೇ ಆಗಿದೆ.. ಅದನ್ನೂ ತೆಗೆಯಬೇಕು ಎನ್ನುತ್ತೀರಾ?ʼʼ ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.