ಬಂಡೀಪುರ ಅರಣ್ಯ ಪ್ರದೇಶದೊಳಗೆ ರಾತ್ರಿ ವೇಳೆ ಎರಡು ಬಸ್, ಆ್ಯಂಬುಲೆನ್ಸ್ ಸಂಚಾರಕ್ಕೆ ಅವಕಾಶ : ಈಶ್ವರ್ ಖಂಡ್ರೆ
ಬೆಂಗಳೂರು : ಬಂಡೀಪುರ ಅರಣ್ಯ ಪ್ರದೇಶದೊಳಗೆ ರಾತ್ರಿ ವೇಳೆ ಎರಡು ಬಸ್‍ಗಳು ಮತ್ತು ಆ್ಯಂಬುಲೆನ್ಸ್ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ಬುಧವಾರ ವಿಧಾನನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಂಡೀಪುರ ಅರಣ್ಯ ಪ್ರದೇಶದೊಳಗೆ ರಾತ್ರಿ ವೇಳೆ ವಾಹನ ಸಂಚಾರಕ್ಕೆ ಅವಕಾಶ ಇರಲಿಲ್ಲ. ಆದರೆ, ನಮ್ಮ ಪಕ್ಷದ ಹಲವು ನಾಯಕರ ಒತ್ತಾಯದ ಮೇರೆಗೆ ಎರಡು ಬಸ್‍ಗಳು ಮತ್ತು ಆ್ಯಂಬುಲೆನ್ಸ್ ಸಂಚಾರಕ್ಕೆ ಅವಕಾಶ ನೀಡಲಾಗಿದೆ ಎಂದರು.
ವನ್ಯಜೀವಿಗಳ ರಕ್ಷಣೆ, ಕಾವೇರಿ ತೀರದ ವನ್ಯಜೀವಿ ವಿಸ್ಮಯದ ಬಗ್ಗೆ ವನ್ಯಜೀವಿ ತಜ್ಞ ಸರವಣ ಕುಮಾರ್ ಮತ್ತು ಡಾ.ಸಂಜಯ್‍ಗುಬ್ಬಿ ಅವರ ತಂಡ ‘ಕಾವೇರಿ ರಿವರ್ ಆಫ್ ಲೈಫ್’ ಹೆಸರಿನ ಸಾಕ್ಷ್ಯಚಿತ್ರ ಸಿದ್ಧಪಡಿಸಿದ್ದು, ಅದರ ವಿಶೇಷತೆಯನ್ನು ವೀಕ್ಷಿಸಲಾಯಿತು. ಕಾವೇರಿ ನದಿಯನ್ನೇ ನಂಬಿದ ವನ್ಯಜೀವಿಗಳು ಬೇಸಿಗೆಯಲ್ಲಿ ನೀರಿಗಾಗಿ ಪಡುವ ಪಡಿಪಾಟಲುಗಳೇನು? ಎಂಬ ಹಲವು ಪ್ರಶ್ನೆಗಳನ್ನಿಟ್ಟುಕೊಂಡು ಈ ಸಾಕ್ಷ್ಯಚಿತ್ರ ಸಿದ್ಧಪಡಿಸಲಾಗಿದೆ ಎಂದು ಈಶ್ವರ್ ಖಂಡ್ರೆ ಹೇಳಿದರು.
ಕಾವೇರಿ ನದಿ, ಕಾವೇರಿ ಮತ್ತು ಮಲೆಮಹದೇಶ್ವರ ಬೆಟ್ಟ ವನ್ಯಜೀವಿ ತಾಣಗಳಲ್ಲಿ ಕಾಲಕ್ಕೆ ತಕ್ಕಂತೆ ಆಗುವ ಬದಲಾವಣೆ, ಆನೆ, ಜಿಂಕೆ, ಕಾಡು ನಾಯಿ, ಕಪ್ಪೆಗಳು, ಪಕ್ಷಿ ಹೀಗೆ ಹಲವು ಜೀವ ವೈವಿಧ್ಯಗಳು, ಹಸಿರು ಕಳೆದುಕೊಂಡ ಅರಣ್ಯದಲ್ಲಿ ಅವುಗಳ ಜೀವನ ಶೈಲಿ ಹೇಗಿರುತ್ತದೆ ಎಂಬಂತಹ ಸೂಕ್ಷ್ಮ ಅಂಶಗಳನ್ನು ಕಣ್ಣಿಗೆ ಕಟ್ಟಿದಂತೆ ‘ಕಾವೇರಿ ರಿವರ್ ಆಫ್ ಲೈಫ್’ ಸಾಕ್ಷ್ಯಚಿತ್ರದಲ್ಲಿ ತೋರಿಸಲಾಗಿದೆ ಎಂದು ಈಶ್ವರ್ ಖಂಡ್ರೆ ತಿಳಿಸಿದರು.