ಉತ್ತರ ಕರ್ನಾಟಕದ ಸಮಸ್ಯೆಗಳು, ಬರಗಾಲದ ಚರ್ಚೆ ಮಾಡಲು ಅವಕಾಶ ಕೊಡದಿದ್ದರೆ ಸದನಕ್ಕೆ ಬರುವುದಿಲ್ಲ: ಬಸವರಾಜ ರಾಯರೆಡ್ಡಿ
ಬೆಳಗಾವಿ: ಉತ್ತರ ಕರ್ನಾಟಕದ ಸಮಸ್ಯೆಗಳು ಹಾಗೂ ಬರಗಾಲದ ಕುರಿತು ಚರ್ಚೆ ಮಾಡಲು ಎರಡು ದಿನಗಳಿಂದ ಸಿದ್ಧತೆಗಳನ್ನು ಮಾಡಿಕೊಂಡು ಬರುತ್ತಿದ್ದೇನೆ. ಆದರೆ, ಚರ್ಚೆ ಸಾಧ್ಯವಾಗುತ್ತಿಲ್ಲ. ಅವಕಾಶ ಕೊಡುವುದಿಲ್ಲ ಎಂದರೆ ನಾನು ಸದನಕ್ಕೆ ಬರುವುದಿಲ್ಲ ಎಂದು ಕಾಂಗ್ರೆಸ್ ಹಿರಿಯ ಸದಸ್ಯ ಬಸವರಾಜ ರಾಯರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದರು.
ಬುಧವಾರ ವಿಧಾನಸಭೆಯ ಶೂನ್ಯ ವೇಳೆಯಲ್ಲಿ ನಡೆಯುತ್ತಿದ್ದ ಚರ್ಚೆಗಳು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದ್ದನ್ನು ಗಮನಿಸಿದ ಅವರು, ಕೊಬ್ಬರಿ ಬೆಳೆಗಾರರ ಸಮಸ್ಯೆಗಳು ತುಂಬಾ ಇವೆ. ಶೂನ್ಯ ವೇಳೆಯಲ್ಲಿ ಈ ವಿಷಯಗಳನ್ನು ಚರ್ಚೆ ಮಾಡುವ ಬದಲು ನಿಯಮ 69 ಅಥವಾ ಅರ್ಧ ಗಂಟೆ ಚರ್ಚೆಗೆ ಪರಿವರ್ತಿಸಿಕೊಟ್ಟರೆ ಹೆಚ್ಚು ಸೂಕ್ತ ಎಂದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಸ್ಪೀಕರ್ ಯು.ಟಿ.ಖಾದರ್, ಸದಸ್ಯರು ಚರ್ಚೆ ನಡೆಸಲು ಬಯಸುವ ವಿಷಯಗಳ ಗಾಂಭೀರ್ಯತೆಯನ್ನು ಅರಿತುಕೊಳ್ಳಬೇಕು. ಶೂನ್ಯ ವೇಳೆಯಲ್ಲೆ ಚರ್ಚೆ ಮಾಡಬೇಕು ಎಂದು ಬಯಸುವವರು, ನಿಯಮಾವಳಿಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.
Next Story