ಬಿಜೆಪಿ ಆಮಿಷದ ಕುರಿತು ವರಿಷ್ಠರ ಗಮನಕ್ಕೆ ತಂದಿದ್ದೇನೆ: ಕಾಂಗ್ರೆಸ್ ಶಾಸಕ ಬಾಬಾಸಾಹೇಬ್ ಪಾಟೀಲ್
"ಬಿಜೆಪಿಯ ರಾಜ್ಯಮಟ್ಟದ ನಾಯಕರು ನನ್ನನ್ನು ಸಂಪರ್ಕಿಸಿದ್ದು ನಿಜ"
ಕಾಂಗ್ರೆಸ್ ಶಾಸಕ ಬಾಬಾಸಾಹೇಬ್ ಪಾಟೀಲ್
ಬೆಳಗಾವಿ: ಬಿಜೆಪಿಯ ರಾಜ್ಯಮಟ್ಟದ ನಾಯಕರು ನನ್ನನ್ನು ಸಂಪರ್ಕಿಸಿದ್ದು ನಿಜ. ನನಗೆ ಬಿಜೆಪಿ ನೀಡಿದ್ದ ಆಮಿಷವನ್ನು ತಿರಸ್ಕರಿಸಿ, ಆ ವಿಚಾರವನ್ನು ನಮ್ಮ ಪಕ್ಷದ ವರಿಷ್ಠರ ಗಮನಕ್ಕೆ ತಂದಿದ್ದೇನೆ ಎಂದು ಕಿತ್ತೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಬಾಬಾಸಾಹೇಬ್ ಪಾಟೀಲ್ ತಿಳಿಸಿದರು.
ಬಿಜೆಪಿಯಿಂದ ಕಾಂಗ್ರೆಸ್ ಶಾಸಕರಿಗೆ ನೂರು ಕೋಟಿ ರೂ. ಆಫರ್ ನೀಡಲಾಗಿದೆ ಎಂದು ಮಂಡ್ಯ ಶಾಸಕ ರವಿ ಗಣಿಗ ಮಾಡಿರುವ ಆರೋಪದ ಕುರಿತು ನೇಗಿನಹಾಳದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.
ರಾಜ್ಯ ಸರಕಾರ ಸ್ಥಿರವಾಗಿ ಉಳಿಯುವುದಿಲ್ಲ, ನಮ್ಮ ಜೊತೆ ಬನ್ನಿ ಎಂದು ಬಿಜೆಪಿ ನಾಯಕರು ಆಹ್ವಾನ ನೀಡಿದ್ದರು. ಸ್ಥಿರ ಸರಕಾರ ಇರವುದಿಲ್ಲ ಎಂದಾಗಿದ್ದರೆ ರಾಜ್ಯದ ಜನ ನಮ್ಮ ಪಕ್ಷಕ್ಕೆ ಯಾಕೆ ಸ್ಪಷ್ಟ ಬಹುಮತವನ್ನು ನೀಡುತ್ತಿದ್ದರು ಎಂದು ಪ್ರಶ್ನಿಸಿದ್ದೆ. ಆನಂತರ ಯಾವೊಬ್ಬ ಬಿಜೆಪಿ ನಾಯಕರು ನನ್ನನ್ನು ಸಂಪರ್ಕಿಸುವ ಪ್ರಯತ್ನ ಮಾಡಿಲ್ಲ ಎಂದು ಅವರು ಹೇಳಿದರು.
ನನಗೆ ಯಾವುದೇ ದುಡ್ಡಿನ ಆಮಿಷ ಬಂದಿಲ್ಲ. ಆಮಿಷಕ್ಕೆ ಒಳಗಾಗಿ ಬಿಜೆಪಿಗೆ ಹೋಗುವ ವ್ಯಕ್ತಿಯೂ ನಾನಲ್ಲ. ಕಾಂಗ್ರೆಸ್ ಸರಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ, ನಾನು ಬದ್ಧನಿದ್ದೇನೆ. ರಾಜ್ಯದ ಜನ 135 ಕಾಂಗ್ರೆಸ್ ಶಾಸಕರನ್ನು ಗೆಲ್ಲಿಸಿ ನಮಗೆ ಸ್ಪಷ್ಟ ಬಹುಮತ ನೀಡಿದ್ದಾರೆ ಎಂದು ಅವರು ಹೇಳಿದರು.
ನಮ್ಮ ಪಕ್ಷ ಅಧಿಕಾರಕ್ಕೆ ಬಂದ ದಿನದಿಂದಲೂ ವಿನಾಕಾರಣ ಗೊಂದಲ ಸೃಷ್ಟಿಸುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಶಾಸಕರಿಗೆ ಆಮಿಷಗಳನ್ನು ಒಡ್ಡುತ್ತಿರುವ ಮಾತುಗಳನ್ನು ಕೇಳುತ್ತಿದ್ದೇವೆ. ನಾವು ಬಹಳಷ್ಟು ಮಂದಿ ಇದೇ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದೇವೆ. ಆದರೆ, ಬಿಜೆಪಿಯವರ ಆಮಿಷಗಳಿಗೆ ಯಾರೂ ಒಳಗಾಗುವುದಿಲ್ಲ. ನಮ್ಮ ಸರಕಾರ ಸುಭದ್ರವಾಗಿರುತ್ತದೆ ಎಂದು ಬಾಬಾಸಾಹೇಬ್ ಪಾಟೀಲ್ ತಿಳಿಸಿದರು.