ಕಾಂಗ್ರೆಸ್ ಪಕ್ಷ ತೊರೆದ ಬಗ್ಗೆ ಜಗದೀಶ್ ಶೆಟ್ಟರ್ ಸ್ಪಷ್ಟನೆ ನೀಡಲಿ: ಸಚಿವ ಮಧು ಬಂಗಾರಪ್ಪ
ಶಿವಮೊಗ್ಗ: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಪಕ್ಷಕ್ಕೆ ಬರುವಾಗ ಮನಸಾರೆ ಬಂದಿದ್ರು, ಈಗ ಮನಸಾರೆ ಹೋಗಿದ್ದಾರೋ ಇಲ್ವೋ ಗೊತ್ತಿಲ್ಲ. ಅದನ್ನ ಅವರೇ ಹೇಳಬೇಕು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಜಗದೀಶ್ ಶೆಟ್ಟರ್ ಬಿಜೆಪಿಗೆ ವಾಪಸ್ ವಿಚಾರವಾಗಿ ಶಿವಮೊಗ್ಗದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು,ಜಗದೀಶ್ ಶೆಟ್ಟರ್ ರಾಜ್ಯದ ಮಾಜಿ ಸಿಎಂ. ಕಾಂಗ್ರೆಸ್ ಪಕ್ಷಕ್ಕೆ ಬರುವಾಗ ಅವರೇ ಬಿಡುವ ಕಾರಣ ಹೇಳಿದ್ದರು. ಬಿಜೆಪಿಯ ಸಿದ್ದಾಂತ, ನಾಯಕತ್ವದ ಬಗ್ಗೆ ಮಾತನಾಡಿಯೇ ಬಂದಿದ್ದರು ಎಂದರು.
ಜಗದೀಶ್ ಶೆಟ್ಟರ್ ಕಾಂಗ್ರೆಸ್ ನಿಂದ ಚುನಾವಣೆಗೆ ನಿಂತಾಗ ಸಾಕಷ್ಟು ನಾಯಕರು ಅವರ ಪರ ಪ್ರಚಾರ ಮಾಡಿದ್ದಾರೆ. ಜನಪ್ರತಿನಿಧಿಯಾಗಿ ಜನ ಅವರನ್ನು ಸ್ವೀಕಾರ ಮಾಡಿರಲಿಲ್ಲ. ಆದರೂ, ಪಕ್ಷ ಅವರಿಗೆ ಬಹಳಷ್ಟು ಗೌರವ ಕೊಟ್ಟಿದೆ. ಎಂಎಲ್ ಸಿ ಸ್ಥಾನ ನೀಡಿತ್ತು. ನಿನ್ನೆವರೆಗೂ ಹೋಗುವ ಮಾತನಾಡಿಲ್ಲ, ಬಿಡಲ್ಲ ಎಂದಿದ್ದರು. 24 ಗಂಟೆಯೊಳಗೆ ಬದಲಾವಣೆ ಆಗಿದೆ. ಯಾಕೆ ಬದಲಾವಣೆ ಆಗಿದೆ. ಸಿಬಿಐ, ಈಡಿ ಎಲ್ಲವೂ ಇರ್ತಾವಲ್ಲಾ ಅದರಿಂದನೂ ಹೋಗಿರಬಹುದು ಎಂದರು.
ಶೆಟ್ಟರ್ ಅವರನ್ನು ನಾವಂತೂ ಕಳಿಸಿಲ್ಲ. ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ಏನು ನಷ್ಟವಿಲ್ಲ. ಪ್ರಜಾಪ್ರಭುತ್ವದಲ್ಲಿ ಆಯ್ಕೆಯಾದ ಸರ್ಕಾರ ಇದೆ. ಏನೂ ಅಗಲ್ಲ ಎಂದರು.
ಬಿಜೆಪಿಯವರು ಮಾನ ಮರ್ಯಾದೆ ಇದ್ದರೆ ಅವರ ಸಾಧನೆ ಹೇಳಲಿ. ನಾನು ಕೂಡ ಬೇರೆ ಪಕ್ಷದಿಂದ ಬಂದೋನು. ಸಾಕಷ್ಟು ಜನರಿದ್ರೂ ನನಗೆ ಪ್ರೀತಿ, ವಿಶ್ವಾಸ, ಅಧಿಕಾರ ಕೊಟ್ಟಿದ್ದಾರೆ. ಅದರ ಮೇಲೆ ನಾವು ಗೌರವ ಕೊಡಬೇಕು ಎಂದರು.
ತತ್ವ- ಸಿದ್ದಾಂತ ವಿರೋಧವಿದ್ದರೂ ಶೆಟ್ಟರ್ ಅವರಿಗೆ ಬಹಳ ಆತ್ಮೀಯತೆಯಿಂದ ಸ್ಥಾನಮಾನ ಕೊಟ್ಟಿದ್ವಿ. ಅವರು ಹಿರಿಯರು, ಟೀಕೆ-ಟಿಪ್ಪಣಿ ಮಾಡಲ್ಲ. ಬಿಜೆಪಿ ಜಾತಿ-ಧರ್ಮ ಆಧಾರದ ಮೇಲೆ ಚುನಾವಣೆ ಮಾಡೋದು. ಆದರೆ ಕಾಂಗ್ರೆಸ್ ಜನರ ಕಷ್ಟಕ್ಕೆ ಸ್ಪಂದಿಸುವ ರಾಜಕೀಯ ಮಾಡುತ್ತದೆ. ಬಿಜೆಪಿಯರ ತಂತ್ರ -ಕುತಂತ್ರಕ್ಕೆ ನಾವು ತಲೆ ಕೆಡಿಸಿಕೊಳ್ಳಲ್ಲ ಎಂದರು.