ಜಗದೀಶ್ ಶೆಟ್ಟರ್ ಅವರ ಹಗರಣದ ದಾಖಲೆ ಶೀಘ್ರದಲ್ಲೇ ಬಿಡುಗಡೆ ಮಾಡುವೆ: ಶಾಸಕ ಯತ್ನಾಳ್
ಹುಬ್ಬಳ್ಳಿ, ಸೆ.17:ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹಿಂದೆ ಲಿಂಗಾಯುತ ಸಮುದಾಯವಿಲ್ಲ. ಜತೆಗೆ, ಅವರು ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಸಮಾಜಕ್ಕೆ ಅವರ ಕೊಡುಗೆ ಏನು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಶ್ನಿಸಿದ್ದಾರೆ.
ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಗದೀಶ್ ಶೆಟ್ಟರ್ ಅವರ ಭೂಹಗರಣ ದಾಖಲೆಯನ್ನು ಶೀಘ್ರದಲ್ಲಿಯೇ ಬಹಿರಂಗಪಡಿಸಲಾಗುವುದು.ಇನ್ನೂ, ಅವರನ್ನು ನಂಬಿಕೊಂಡು ಯಾರೋ ಸಹ ಬಿಜೆಪಿ ಬಿಡುವುದಿಲ್ಲ. ಅವರ ಹಿಂದೆ ಲಿಂಗಾಯುತ ಸಮುದಾಯವೇ ಇಲ್ಲ ಎಂದು ಟೀಕಿಸಿದರು.
ಲೋಕಸಭೆ ಚುನಾವಣೆಗೆ ಬಿಜೆಪಿ, ಜೆಡಿಎಸ್ ಮೈತ್ರಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಯತ್ನಾಳ್, ಅದು ಹೈಕಮಾಂಡ್ಗೆ ಬಿಟ್ಟ ವಿಚಾರ. ನಾವು ರಾಜ್ಯ ರಾಜಕಾರಣದ ಬಗ್ಗೆ ಅಷ್ಟೇ ತಲೆಕೆಡಿಸಿಕೊಳ್ಳುತ್ತೇವೆ. ಮೈತ್ರಿ ಬಗ್ಗೆ ಯಡಿಯೂರಪ್ಪ ಅವರಿಗೆ ಮಾಹಿತಿ ಇರಬಹುದು. ಆದಷ್ಟು ಶೀಘ್ರ ಮೈತ್ರಿ ಕುರಿತು ಅಂತಿಮ ತೀರ್ಮಾನವಾಗುತ್ತೆ ಎಂದು ಹೇಳಿದರು.
ಪ್ರತಿಯೊಂದು ಲೋಕಸಭಾ ಸ್ಥಾನವೂ ಅತ್ಯಂತ ಮಹತ್ವದ್ದು. ಒಂದೇ ಮತದಿಂದ ವಾಜಪೇಯಿ ಸರಕಾರ ಪತನವಾಗಿತ್ತು. ಹೀಗಾಗಿ ಯಾವುದನ್ನೂ ನಾವು ಸುಲಭವಾಗಿ ತೆಗೆದುಕೊಳ್ಳಲು ಸಿದ್ಧವಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 25 ಸ್ಥಾನದಲ್ಲಿ ಗೆದ್ದಿದ್ದೇವೆ. ಈ ಬಾರಿ 28 ಸ್ಥಾನಗಳಲ್ಲಿ ಗೆಲ್ಲುವ ಗುರಿ ಇದೆ. ನಾವೇನೂ ಸರಕಾರ ಬೀಳಿಸುವ ಪ್ರಯತ್ನ ನಡೆಸಿಲ್ಲ. ತಾನಾಗಿಯೇ ಸರಕಾರ ಪತನವಾಗಲಿದೆ ಕಾದು ನೋಡಿ ಎಂದು ಅವರು ಹೇಳಿದರು.