ಬೆಳಗಾವಿ | ಜೈನಮುನಿ ಹತ್ಯೆ ಪ್ರಕರಣ: ಸತತ 10 ಗಂಟೆಗಳ ಕಾರ್ಯಾಚರಣೆಯ ಬಳಿಕ ಮೃತದೇಹ ಪತ್ತೆ ಹಚ್ಚಿದ ಪೊಲೀಸರು
ಬೆಳಗಾವಿ: ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ನಂದಿಪರ್ವತ ಆಶ್ರಮದಿಂದ ನಾಪತ್ತೆಯಾಗಿದ್ದ ಜೈನಮುನಿ ಅವರ ಮೃತದೇಹವು ಶನಿವಾರ ಪತ್ತೆಯಾಗಿರುವುದು ವರದಿಯಾಗಿದೆ.
ಸ್ವಾಮೀಜಿ ನಾಪತ್ತೆಯಾಗಿದ್ದ ಆಶ್ರಮದಿಂದ 28 ಕಿ.ಮೀ. ದೂರದಲ್ಲಿರುವ ರಾಯಭಾಗ ತಾಲೂಕಿನ ಆರೋಪಿಯ ಹೊಲದಲ್ಲಿನ ಕೊಳವೆಬಾವಿಯಲ್ಲಿ ಮೃತದೇಹ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಆರೋಪಿಗಳು ಶವವನ್ನು ತುಂಡುತುಂಡಾಗಿ ಕತ್ತರಿಸಿ ಬಟ್ಟೆಯಲ್ಲಿ ಸುತ್ತಿ, ಚೀಲದೊಳಗೆ ಇಟ್ಟು ಕೊಳವೆಬಾವಿಯಲ್ಲಿ ಹಾಕಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಜೈನಮುನಿ ಜುಲೈ 6ರಂದು ಬೆಳಗ್ಗೆ ತಮ್ಮ ಆಶ್ರಮದಿಂದ ನಾಪತ್ತೆಯಾಗಿದ್ದರು. ಮೊನ್ನೆ ಬೆಳಗ್ಗೆ ಭಕ್ತರು ಆಶ್ರಮಕ್ಕೆ ಆಗಮಿಸಿದಾಗ ಪ್ರಕರಣ ಬೆಳಕಿಗೆ ಬಂದಿತ್ತು. ಆಶ್ರಮದ ಸುತ್ತಮುತ್ತ ಶೋಧ ನಡೆಸಿದ್ದ ಭಕ್ತರಿಗೆ ಜೈನಮುನಿ ಸುಳಿವು ಸಿಗದಿದ್ದಾಗ ನಿನ್ನೆ ಚಿಕ್ಕೋಡಿ ಪೊಲೀಸ್ ಠಾಣೆಗೆ ಜೈನಮುನಿಗಳು ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಚಿಕ್ಕೋಡಿ ಪೊಲೀಸರು, ಅನುಮಾನದ ಮೇಲೆ ಇಬ್ಬರನ್ನು ವಶಕ್ಕೆ ಪಡೆದಿದ್ದರು. ತನಿಖೆಯ ವೇಳೆ ಕೊಲೆ ಮಾಡಿ ಕಟಕಬಾವಿ ಗ್ರಾಮದ ಗದ್ದೆಯಲ್ಲಿ ಎಸೆದಿದ್ದಾಗಿ ಆರೋಪಿಗಳು ಪೊಲೀಸರ ಮುಂದೆ ಹೇಳಿಕೆ ನೀಡಿದ್ದರು.
ಇದೀಗ ಆರೋಪಿಗಳ ಮಾಹಿತಿ ಆಧರಿಸಿ ಸತತ 10 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ ಪೊಲೀಸರು ಶವದ ಭಾಗಗಳನ್ನು ಹೊರತೆಗೆದರು.