‘ಜನಾಕ್ರೋಶ ಯಾತ್ರೆ’ಯ ದಿಕ್ಕು ಬದಲಿಸಲು ಕಾಂಗ್ರೆಸ್ನಿಂದ ಕೇಂದ್ರದ ವಿರುದ್ಧ ಹೋರಾಟ: ವಿಜಯೇಂದ್ರ
ವಿಜಯೇಂದ್ರ
ಬೆಳಗಾವಿ : ಬಿಜೆಪಿ ಜನಾಕ್ರೋಶ ಯಾತ್ರೆಯ ದಿಕ್ಕು ಬದಲಿಸಲು ಕಾಂಗ್ರೆಸ್ಸಿನವರು ನಾಳೆ(ಎ.17) ಕೇಂದ್ರ ಸರಕಾರದ ವಿರುದ್ಧ ಹೋರಾಟ ಹಮ್ಮಿಕೊಂಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆರೋಪಿಸಿದ್ದಾರೆ.
ಬುಧವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ‘ಬಿಜೆಪಿ 3 ಹಂತದಲ್ಲಿ ಜನಾಕ್ರೋಶ ಯಾತ್ರೆಯನ್ನು ಹಮ್ಮಿಕೊಂಡಿದೆ. ಮೊದಲ ಹಂತದಲ್ಲಿ ಮೈಸೂರಿನಿಂದ ಪ್ರಾರಂಭವಾಗಿ ಮಂಡ್ಯ, ಹಾಸನ, ಮಡಿಕೇರಿ, ಮಂಗಳೂರು, ಉಡುಪಿ, ಚಿಕ್ಕಮಗಳೂರು ಉತ್ತರ ಕನ್ನಡ, ನಿಪ್ಪಾಣಿ ಮೂಲಕ ಇವತ್ತು ಬೆಳಗಾವಿಯಲ್ಲಿ ಜನಾಕ್ರೋಶ ಯಾತ್ರೆ ಪ್ರಾರಂಭವಾಗಿದೆ. ಮೊದಲ ಹಂತದ ಜನಾಕ್ರೋಶ ಯಾತ್ರೆ ಪರಿಣಾಮವಾಗಿ ಕಾಂಗ್ರೆಸ್ ಸರಕಾರ, ಮುಖ್ಯಮಂತ್ರಿ ತಲೆ ಕೆಡಿಸಿಕೊಂಡಿದ್ದಾರೆ ಎಂದರು.
ಸೀಮಿತವಾದ ಸರಕಾರ: ಗ್ಯಾರಂಟಿಗಳನ್ನು ನೀಡಿದ್ದು, ಜನರು ಸಂತೋಷ, ನೆಮ್ಮದಿಯಿಂದಿದ್ದಾರೆಂಬ ಭ್ರಮೆಯಲ್ಲಿ ರಾಜ್ಯದ ಸಿಎಂ ಇದ್ದರು. ಸರಕಾರ ಬಂದಾಗಿನಿಂದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ಸಚಿವ ಸಂಪುಟದ ಸದಸ್ಯರು ಬೆಂಗಳೂರಿಗೇ ಸೀಮಿತವಾಗಿದ್ದಾರೆ. ಸರಕಾರದ ಜನವಿರೋಧಿ ನೀತಿಗಳನ್ನು ಎಳೆಎಳೆಯಾಗಿ ನಾಡಿನ ಜನರ ಮುಂದೆ ಬಿಚ್ಚಿಡುವ ಕೆಲಸ ಮಾಡುತ್ತಿದ್ದೇವೆ ಎಂದರು.
ಬೆಲೆ ಏರಿಕೆಯ ಪರಿಣಾಮವಾಗಿ ನಾಡಿನ ಜನರು ತತ್ತರಿಸಿದ್ದಾರೆ, ಬೇಸರ ಪಡುತ್ತಿದ್ದು, ಆಕ್ರೋಶ ಭರಿತರಾಗಿದ್ದಾರೆ. ನಮ್ಮ ಹೋರಾಟದ ಪರಿಣಾಮ ಮುಖ್ಯಮಂತ್ರಿಗೂ ತಟ್ಟಿದೆ. ಈಗ ಅವರಿಗೆ ಜ್ಞಾನೋದಯ ಆಗುತ್ತಿದೆ ಎಂದ ಅವರು, ಮುಖ್ಯಮಂತ್ರಿಗಳು ಮತ್ತು ಸಚಿವರು ಹಳ್ಳಿಗಳಿಗೆ ತೆರಳಿ ಬೆಲೆ ಏರಿಕೆಯಿಂದ ಪರದಾಡುತ್ತಿರುವ ಜನರ ಸಮಸ್ಯೆಗಳನ್ನು ಆಲಿಸಿ ಪರಿಹರಿಸಬೇಕು ಎಂದು ಆಗ್ರಹಿಸಿದರು.
ಜಾರಿ ನಿರ್ದೇಶನಾಲಯವು(ಈ.ಡಿ) ನ್ಯಾಷನಲ್ ಹೆರಾಲ್ಡ್ ಪ್ರಕರಣ ಸಮಗ್ರ ತನಿಖೆ ನಡೆಸಿ ಸೋನಿಯಾ ಗಾಂಧಿಯವರು ಮೊದಲನೇ ಆರೋಪಿ, ರಾಹುಲ್ ಗಾಂಧಿಯವರು ಎರಡನೇ ಆರೋಪಿ ಎಂದಿದೆ. ಏನು ಮಾಡಿದ್ದಾರೋ ಅದನ್ನು ಅನುಭವಿಸಲೇಬೇಕಾಗುತ್ತಿದೆ. ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ, ಅದನ್ನು ಎದುರಿಸಬೇಕಾಗುತ್ತದೆ ಎಂದು ಅವರು ಪ್ರತಿಕ್ರಿಯೆ ನೀಡಿದರು.