ʼಜನತಾ ದರ್ಶನʼ ಕಾರ್ಯಕ್ರಮದ ವೇದಿಕೆಯಲ್ಲಿ ಜಟಾಪಟಿ: ಕೋಲಾರ ಸಂಸದ ಮುನಿಸ್ವಾಮಿ, ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ ಬಂಧನಕ್ಕೆ ಒತ್ತಾಯ
ಎಸ್ಪಿಗೆ ರೈತ ಸಂಘದ ಮುಖಂಡರಿಂದ ದೂರು
ಕೋಲಾರ .ಸೆ.26 : ಸರಕಾರಿ ಕಾರ್ಯಕ್ರಮ ಜತನಾ ದರ್ಶನ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿ ರೌಡಿಗಳ ರೀತಿ ವರ್ತಿಸಿ ಕೋಲಾರ ಜಿಲ್ಲೆಯ ಮಾನ ಮರ್ಯಾದೆಯನ್ನು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹರಾಜು ಹಾಕಿರುವ ಸಂಸದ ಎಸ್.ಮುನಿಸ್ವಾಮಿ ಹಾಗೂ ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಅವರ ಮೇಲೆ ದೂರು ದಾಖಲಿಸಿ ಇಬ್ಬರನ್ನು ನ್ಯಾಯಾಂಗ ಬಂದನಕ್ಕೆ ಒಳಪಡಿಸುವಂತೆ ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ರೈತ ನಾಯಕ ಪ್ರೊ. ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಯುವ ಘಟಕ ಅಧ್ಯಕ್ಷ ಕಲ್ವಮಂಜಲಿ ಶಿವಣ್ಣ ದೂರು ಸಲ್ಲಿಸಿ, ಒತ್ತಾಯಿಸಿದರು.
ದೂರಿನ್ಲಲೇನಿದೆ?
ʼʼಇಡೀ ರಾಜ್ಯಾದ್ಯಂತ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯವರು ಹಾಗೂ ಉಪ ಮುಖ್ಯ ಮಂತ್ರಿಗಳಾದ ಡಿ.ಕೆ.ಶಿವಕುಮಾರ್ ರವರು ಜನರ ಬಳಿಗೆ ಸರ್ಕಾರ ತೆಗೆದುಕೊಳ್ಳುವ ದೃಷ್ಟಿಯಿಂದ ಪ್ರತಿ ಜಿಲ್ಲೆಯ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಜನತಾದರ್ಶನ ಕಾರ್ಯಕ್ರಮವನ್ನು ರೂಪಿಸಿರುವುದು ಸ್ವಾಗರ್ತಾಹ. ಆದರೆ ಕೋಲಾರದಲ್ಲಿ ಸೆಪ್ಟೆಂಬರ್ 25ರಂದು ಸೋಮವಾರ ನಗರದ ಟಿ. ಚನ್ನಯ್ಯ ರಂಗಮಂದಿರದಲ್ಲಿ ಜನತಾದರ್ಶನವನ್ನು ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾದ ಬೈರತಿ ಸುರೇಶ್ ರವರ ಹಾಗೂ ಜಿಲ್ಲೆಯ ಎಲ್ಲಾ ಶಾಸಕರು ನೇತೃತ್ವದಲ್ಲಿ ಹಮ್ಮಿಕೊಂಡಿದ್ದು. ಇಡೀ ಜಿಲ್ಲೆಯಾದ್ಯಂತ ಇರುವ ಅಧಿಕಾರಿಗಳು ಹಾಗೂ ಸಾರ್ವಜನಿಕರು, ರೈತರು, ದಲಿತರು ಇನ್ನು ಹಲವು ಪ್ರಗತಿ ಪರ ಸಂಘಟನೆಯ ಮುಖಂಡರುಗಳು ಅಭಿವೃದ್ದಿಯ ಬಗ್ಗೆ ಹಾಗೂ ಕಚೇರಿಗಳಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳ ವಿಳಂಬ ಆಗುತ್ತಿರುವ ಬಗ್ಗೆ ಅಹವಾಲುಗಳನ್ನು ಸಲ್ಲಿಸಲು ಬಂದಿದ್ದರುʼʼ
ʼʼಮುನಿಸ್ವಾಮಿ ಏರಿದ ಧ್ವನಿಯಲ್ಲಿ ವೇದಿಕೆಗೆ ತೆರಳಿ ನಾರಾಯಣಸ್ವಾಮಿಯವರನ್ನು ನಿಂದಿಸಿದರು. ಇಬ್ಬರೂ ಪರಸ್ಪರ ಏಕ ವಚನ ಪ್ರಯೋಗ ಮಾಡಿ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಯಿತು. ಸಚಿವ ಭೈರತಿ ಸುರೇಶ್ ಮತ್ತು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಸಂಯಮದಿಂದ ವರ್ತಿಸುವಂತೆ ಮುನಿಸ್ವಾಮಿಯವರಿಗೆ ಹೇಳಿದರು. ಆದರೆ ಯಾರ ಮಾತನ್ನೂ ಕೇಳದ ಮುನಿಸ್ವಾಮಿ ಮತ್ತು ನಾರಾಯಣಸ್ವಾಮಿ ಅವರ ವಾಗ್ವಾದದಿಂದಾಗಿ ಇಡೀ ಸಭೆ ಸ್ಥಬ್ದಗೊಂಡಿತ್ತುʼʼ ಎಂದು ದೂರಿನಲ್ಲಿ ವಿವರಿಸಲಾಗಿದೆ.
ʼʼಸಾರ್ವಜನಿಕರಿಗೆ ಸಂಘಟನೆಯ ಮುಖಂಡರುಗಳಿಗೆ ಅವಕಾಶ ಸಿಗದೆ ಬರೀ ಇವರಿಬ್ಬರ ಕಿರುಚಾಟದಿಕಂದ ಇಡೀ ಜನತಾ ದರ್ಶನ ಸಭೆ ಹಾಳಾಯ್ತು. ಇವರಿಬ್ಬರ ವೈಯಕ್ತಿಕ ವಿಚಾರದಲ್ಲಿ ಜಿಲ್ಲೆಯ ಗೌರವವನ್ನು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹಾಳು ಮಾಡಿದ್ದಾರೆ. ಇವರಿಬ್ಬರಿಗೂ ಶಾಸಕ ಮತ್ತು ಸಂಸದ ಸ್ಥಾನಮಾನಗಳ ಘನತೆ ಗೊತ್ತಿಲ್ಲದೆ ಇರುವುದು ವಿಪರ್ಯಾಸ. ಇಂತಹ ಮಾನಗೇಡಿ ಶಾಸಕ ಮತ್ತು ಸಂಸದರನ್ನು ಗೆಲ್ಲಿಸಿದಂತ ಕೋಲಾರ ಜಿಲ್ಲೆಯ ಜನರನ್ನು ಮೂರ್ಖರನ್ನಾಗಿ ಮಾಡಿದ್ದಾರೆʼʼ ಎಂದು ಆರೋಪಿಸಲಾಗಿದೆ.
ʼʼರೈತ ನಾಯಕ ಪ್ರೊ. ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿ ಇವರಿಬ್ಬರ ಮೇಲೆ ಸಂಬಂಧಪಟ್ಟ ಠಾಣೆಯಲ್ಲಿ ದೂರನ್ನು ದಾಖಲಿಸಿ ಇಬ್ಬರನ್ನು ನ್ಯಾಯಾಂಗ ಬಂದನಕ್ಕೆ ಒಳಪಡಿಸಬೇಕುʼʼ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ರಾಜ್ಯ ಯುವ ಘಟಕ ಅಧ್ಯಕ್ಷ ಕಲ್ವಮಂಜಲಿ ರಾಮುಶಿವಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ನಾರಾಯಣಸ್ವಾಮಿ, ರಾಜ್ಯ ಉಪಾಧ್ಯಕ್ಷ ಕೊಲದೇವಿ ಗೋಪಾಲಕೃಷ್ಣಮೂರ್ತಿ, ಕೋಲಾರ ತಾಲ್ಲೂಕು ಅಧ್ಯಕ್ಷ ಜಗನ್ನಾಥರೆಡ್ಡಿ, ಶ್ರೀನಿವಾಸಪುರ ತಾಲ್ಲೂಕು ಅಧ್ಯಕ್ಷ ದೊಡ್ಡಕುರುಬರಹಳ್ಳಿ ಶಂಕರೇಗೌಡ, ಮುಳಬಾಗಿಲು ತಾಲ್ಲೂಕು ಅಧ್ಯಕ್ಷ ಕಾಡಕಚ್ಚನಹಳ್ಳಿ ವಿಶ್ವನಾಥಗೌಡ, ಮಾಲೂರು ತಾಲ್ಲೂಕು ಅಧ್ಯಕ್ಷ ತಿಪ್ಪಸಂದ್ರ ಹರೀಶ್‌ಗೌಡ, ತೇರಹಳ್ಳಿ ಚಂದ್ರಪ್ಪ, ಅಶೋಕ್, ಮಾಸ್ತಿ ಹೋಬಳಿ ಅಧ್ಯಕ್ಷ ಮುನಿರಾಜು ಹಾಜರಿದ್ದರು.