ಜುಲೈ 27ಕ್ಕೆ ಬೆಂಗಳೂರು ಬಂದ್ಗೆ ಖಾಸಗಿ ಬಸ್, ಆಟೋ ರಿಕ್ಷಾ, ಟ್ಯಾಕ್ಸಿ ಒಕ್ಕೂಟ ಕರೆ
ಬೆಂಗಳೂರು ನಗರ- ಫೈಲ್ ಚಿತ್ರ
ಬೆಂಗಳೂರು, ಜು.20: ಸರಕಾರವು ‘ಶಕ್ತಿ’ ಯೋಜನೆಯಡಿ ಉಚಿತ ಬಸ್ ವ್ಯವಸ್ಥೆ ಕಲ್ಪಿಸಿದ್ದು, ಇದರಿಂದ ಆಟೋ, ಟ್ಯಾಕ್ಸಿ ಅಥವಾ ಖಾಸಗಿ ಬಸ್ ಚಾಲಕರಿಗೆ ನಷ್ಟವಾಗುತ್ತಿದೆ. ಹಾಗಾಗಿ ಜು.27ರಂದು ಖಾಸಗಿ ಬಸ್, ಆಟೋ ರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರು ಸೇರಿದಂತೆ 20ಕ್ಕೂ ಹೆಚ್ಚು ಸಂಘಟನೆಗಳು ‘ಬೆಂಗಳೂರು ಬಂದ್'ಗೆ ಕರೆ ನೀಡಿವೆ.
ಗುರುವಾರ ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಆಟೋ ಚಾಲಕರ ಒಕ್ಕೂಟದ ಮುಖಂಡ ಎಸ್. ನಟರಾಜ ಮಾತನಾಡಿ, ‘ಶಕ್ತಿ ಯೋಜನೆ ಆಟೋ ಟ್ಯಾಕ್ಸಿ ಚಾಲಕರ ಹೊಟ್ಟೆಯ ಮೇಲೆ ಹೊಡೆದಿದೆ. ಬದುಕು ನಡೆಸುವುದು, ಮಕ್ಕಳ ಶಿಕ್ಷಣಕ್ಕೆ ತೊಂದರೆ ಆಗುತ್ತಿದ್ದು, ಸರಕಾರ ಆರ್ಥಿಕವಾಗಿ ಸಹಾಯ ಮಾಡಬೇಕು ಎಂದು ಆಗ್ರಹಿಸಿದರು.
ಶಕ್ತಿ ಯೋಜನೆಗೆ ಚಾಲನೆ ನೀಡುವ ಮೂಲಕ ಮಹಿಳೆಯರಿಗೆ ಉಚಿತ ಬಸ್ ಸೌಲಭ್ಯ ಕಲ್ಪಿಸಿತು. ಇದರಿಂದ ಆಟೋ, ಟ್ಯಾಕ್ಸಿ, ಖಾಸಗಿ ಬಸ್ ಚಾಲಕರ ಬದುಕು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಈ ಸಂಬಂಧ ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಒಕ್ಕೂಟಗಳು ಸಭೆ ನಡೆಸಿ ಬಂದ್ಗೆ ತೀರ್ಮಾನಿಸಿವೆ ಎಂದು ಅವರು ಮಾಹಿತಿ ನೀಡಿದರು.
ಒಂದು ವಾರದದಿಂದ ರಾಜ್ಯ ಸರಕಾರದ ಪ್ರತಿನಿಧಿಗಳನ್ನು ಭೇಟಿ ಮಾಡಿ ಖಾಸಗಿ ಬಸ್ ಸಂಸ್ಥೆ ಮನವಿ ಮಾಡಿತ್ತು. ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಗಡುವು ನೀಡಲಾಗಿತ್ತು. ಆದರೆ ವಾರ ಕಳೆದರೂ ಸಂಬಂಧಿಸಿದ ಅಧಿಕಾರಿಗಳು ಸ್ಪಂದಿಸಿಲ್ಲ ಎಂದು ಅವರು ಆರೋಪಿಸಿದರು.