ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್ ರನ್ನು ಸೇವೆಯಿಂದ ಅಮಾನತುಗೊಳಿಸಲು ಜೆಡಿಎಸ್ ಒತ್ತಾಯ
ರಾಜ್ಯ ಮುಖ್ಯ ಕಾರ್ಯದರ್ಶಿಗೆ ಪತ್ರ
ಎಂ.ಚಂದ್ರಶೇಖರ್/ಎಚ್.ಡಿ.ಕುಮಾರಸ್ವಾಮಿ
ಬೆಂಗಳೂರು: ಭ್ರಷ್ಟಾಚಾರ, ದುರ್ನಡತೆ, ಸುಲಿಗೆ ಮುಂತಾದ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ಲೋಕಾಯುಕ್ತ ಎಡಿಜಿಪಿ ಎಂ.ಚಂದ್ರಶೇಖರ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ, ಅವರ ವಿರುದ್ಧ ಸೂಕ್ತ ತನಿಖೆ ನಡೆಸಬೇಕು ಎಂದು ಜಾತ್ಯತೀತ ಜನತಾ ದಳದ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಸಿ.ಬಿ. ಅವರು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
ಎಂ. ಚಂದ್ರಶೇಖರ್ ವಿರುದ್ಧ ಸೂಕ್ತ ತನಿಖೆ ನಡೆಸಿ, ಶಿಸ್ತು ಕ್ರಮ ಕೈಗೊಳ್ಳಲು ಕೇಡರ್ ಸೆಂಟ್ರಲ್ ಪ್ರಾಧಿಕಾರವಾಗಿರುವ ಕೇಂದ್ರ ಗೃಹ ಸಚಿವಾಲಯಕ್ಕೆ ಸೂಕ್ತ ಪ್ರಸ್ತಾವವನ್ನು ರಾಜ್ಯ ಸರಕಾರದ ಶಿಫಾರಸಿನೊಂದಿಗೆ ಕಳಿಸಿಕೊಡಬೇಕು ಎಂದೂ ಅವರು ತಮ್ಮ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಎಂ. ಚಂದ್ರಶೇಖರ್ 1998 ಬ್ಯಾಚ್ ನ ಹಿಮಾಚಲ ಪ್ರದೇಶ ಕೇಡರ್ ನ ಐಪಿಎಸ್ ಅಧಿಕಾರಿಯಾಗಿದ್ದಾರೆ. ಆದರೆ, ತಮ್ಮ ಪತ್ನಿಯ ಅನಾರೋಗ್ಯ ಮತ್ತು ಹಿಮಾಚಲ ಪ್ರದೇಶ ವಾತಾವರಣ ಮತ್ತು ಹವಾಗುಣ ಸರಿ ಹೊಂದುವುದಿಲ್ಲ ಎಂಬ ಕುಂಟು ನೆಪ ಹೇಳಿ ಮತ್ತು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ, ರಾಜಕೀಯ ಪ್ರಭಾವದೊಂದಿಗೆ ಕರ್ನಾಟಕ ರಾಜ್ಯಕ್ಕೆ ವರ್ಗಾವಣೆಗೊಂಡಿರುತ್ತಾರೆ. ತದನಂತರ, ಕರ್ನಾಟಕ ಐಪಿಎಸ್ ಕೇಡರ್ ನಲ್ಲಿ ವಿಲೀನಗೊಂಡಿದ್ದಾರೆ ಎಂದು ಪತ್ರದಲ್ಲಿ ಆರೋಪಿಸಲಾಗಿದೆ.
ಫೆಬ್ರವರಿ 2, 2023ರಂದು ಶ್ರೀ ಧರ ಎನ್ನುವವರು ಅಂದಿನ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾದ ರಜನೀಶ್ ಗೋಯಲ್ ಅವರಿಗೆ ನೀಡಿರುವ ದೂರು ಸೇರಿದಂತೆ ಒಟ್ಟು 4 ಕ್ರಿಮಿನಲ್ ಪ್ರಕರಣಗಳು ಎಂ.ಚಂದ್ರಶೇಖರ್ ವಿರುದ್ಧ ದಾಖಲಾಗಿವೆ. ಚಂದ್ರಶೇಖರ್ ಸುಲಿಗೆಕೋರರಾಗಿದ್ದು, ಸರಣಿ ಅಪರಾಧಗಳಲ್ಲಿ ಭಾಗಿಯಾಗಿರುವ ಅಧಿಕಾರಿಯಾಗಿದ್ದಾರೆ ಎಂದು ಪತ್ರದಲ್ಲಿ ಆರೋಪಿಸಲಾಗಿದೆ.
ರಾಜಕೀಯದಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳು ಪರಸ್ಪರ ಆರೋಪ ಮತ್ತು ಪ್ರತ್ಯಾರೋಪ ಮಾಡುವುದು ಸಹಜ ಪ್ರಕ್ರಿಯೆ. ಅದರಂತೆ, ಕೇಂದ್ರ ಭಾರಿ ಕೈಗಾರಿಕೆ ಮತ್ತು ಉಕ್ಕು ಸಚಿವರಾದ ಎಚ್.ಡಿ.ಕುಮಾರಸ್ವಾಮಿ ರಾಜ್ಯ ಸರಕಾರ ಮತ್ತು ಅಧಿಕಾರಿಗಳ ವಿರುದ್ಧ ಕೆಲ ಆರೋಪಗಳನ್ನು ಮಾಡಿದ್ದರು. ಆದರೆ, ಈ ಆರೋಪಗಳಿಗೆ ಅಸಭ್ಯ ಮತ್ತು ಅವಹೇಳನಕಾರಿಯಾಗಿ ಪ್ರತಿಕ್ರಿಯಿಸಿರುವ ಎಂ.ಚಂದ್ರಶೇಖರ್ ವಿರುದ್ಧ ದುರ್ನಡತೆ ಪ್ರಕರಣವನ್ನು ದಾಖಲಿಸಿಕೊಳ್ಳಬೇಕು ಎಂದು ಪತ್ರದಲ್ಲಿ ಆಗ್ರಹಿಸಲಾಗಿದೆ.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಯ ವ್ಯಕ್ತಿತ್ವ ಮತ್ತು ವರ್ಚಸ್ಸಿಗೆ ಧಕ್ಕೆ ತರುವಂಥ ಹೇಳಿಕೆ ನೀಡಿರುವ ಎಂ.ಚಂದ್ರಶೇಖರ್ ವಿರುದ್ಧ ಉನ್ನತ ಮಟ್ಟದ ತನಿಖೆ ನಡೆಸಲು ಅಗತ್ಯವಿರುವ ದಾಖಲಾತಿಗಳೊಂದಿಗೆ ಭಾರತೀಯ ಪೊಲೀಸ್ ಸೇವೆಗಳ ವೃಂದದ ಪ್ರಾಧಿಕಾರವಾಗಿರುವ ಕೇಂದ್ರ ಗೃಹ ಸಚಿವಾಲಯಕ್ಕೆ ರಾಜ್ಯ ಸರಕಾರದ ಸೂಕ್ತ ಶಿಫಾರಸಿನೊಂದಿಗೆ ಪ್ರಸ್ತಾವ ಕಳುಹಿಸಿಕೊಡಬೇಕು ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ. ಈ ಪತ್ರಕ್ಕೆ ಜಾತ್ಯತೀತ ಜನತಾದಳದ ಹಲವಾರು ನಾಯಕರು ಸಹಿ ಮಾಡಿದ್ದಾರೆ.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಇತ್ತೀಚೆಗೆ ಲೋಕಾಯುಕ್ತ ಎಡಿಜಿಪಿ ಎಂ.ಚಂದ್ರಶೇಖರ್ ಖಾಸಗಿ ವಾಹಿನಿಗೆ ರಾಜ್ಯಪಾಲರ ಪತ್ರವನ್ನು ಬಹಿರಂಗಪಡಿಸಿರುವ ಆರೋಪ ಮಾಡಿದ್ದರು. ಆದರೆ ಈ ಆರೋಪವನ್ನು ಚಂದ್ರಶೇಖರ್ ಅವರು ನಿರಾಕರಿಸಿದ್ದರು. ಅದರ ಬೆನ್ನಲ್ಲೇ ಜೆಡಿಎಸ್ ಮುಖಂಡರು ಲೋಕಾಯುಕ್ತ ಎಡಿಜಿಪಿ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗೆ ಬರೆದಿರುವುದು ಕುತೂಹಲ ಮೂಡಿಸಿದೆ.