ಎನ್‍ಡಿಎಗೆ ಜೆಡಿಎಸ್ ಸೇರ್ಪಡೆ: ರಾಜ್ಯ ಬಿಜೆಪಿ ನಾಯಕರ ಪ್ರತಿಕ್ರಿಯೆ ಏನು?
ಬೆಂಗಳೂರು: ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿ ಒಕ್ಕೂಟಕ್ಕೆ ಜೆಡಿಎಸ್ ಸೇರ್ಪಡೆಯನ್ನು ರಾಜ್ಯ ಬಿಜೆಪಿ ನಾಯಕರು ಸ್ವಾಗತಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಬಿಜೆಪಿ ನಾಯಕರು ಪ್ರತಿಕ್ರಿಯಿಸಿದ್ದು, ಮೈತ್ರಿ ಒಕ್ಕೂಟಕ್ಕೆ ಜೆಡಿಎಸ್ ನಾಯಕರನ್ನು ಸ್ವಾಗತಿಸಿದ್ದಾರೆ.
ʼʼಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಇಂದು ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ , ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಜೆಡಿಎಸ್ ಪಕ್ಷವು ಎನ್.ಡಿ. ಎ. ಭಾಗವಾಗಿರುವುದು ಸ್ವಾಗತಾರ್ಹ ಬೆಳವಣಿಗೆ. ಜೆಡಿಎಸ್ ನಾಯಕರಾದ ಕುಮಾರಸ್ವಾಮಿ, ಎಚ್ ಡಿ ರೆವಣ್ಣ ಅವರಿಗೂ ಸ್ವಾಗತ. ಇದೇ ಸಂದರ್ಭದಲ್ಲಿ ಮಾಜಿ ಪ್ರದಾನಿ ದೇವೇಗೌಡ ಅವರ ಮಾರ್ಗದರ್ಶನ ಮತ್ತು ಆಶೀರ್ವಾದ ಇದಕ್ಕೆ ದೊರಕುತ್ತದೆ ಎಂಬ ವಿಶ್ವಾಸ ಇದೆʼʼ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.
ʼʼಬಿಜೆಪಿ ಮತ್ತು ಜೆಡಿಎಸ್ ನಡುವಿನ ಈ ಮೈತ್ರಿಯಿಂದ ರಾಜ್ಯದಲ್ಲಿ ಬಿಜೆಪಿ ಗರಿಷ್ಠ ಸ್ಥಾನಗಳನ್ನು ಗೆಲ್ಲಲಿದೆ. ವಿಶ್ವವಂದ್ಯ ನಾಯಕ ಹಾಗೂ ಪ್ರಧಾನಿ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಮಂತ್ರಿ ಆಗುವುದು ನಿಶ್ಚಿತ ಎಂಬುದರ ಸಂಕೇತ ಇದೆʼʼ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್‍ಕುಮಾರ್ ಕಟೀಲ್ ತಿಳಿಸಿದ್ದಾರೆ.
ʼʼಪ್ರಧಾನಿ ನರೇಂದ್ರ ಮೋದಿ ಅವರ ಸಮರ್ಥ ನಾಯಕತ್ವದ ಎನ್‌ಡಿಎ ಮೈತ್ರಿಕೂಟದ ಭಾಗವಾಗಲಿರುವ ಜೆಡಿಎಸ್ ಪಕ್ಷಕ್ಕೆ ಹೃದಯಪೂರ್ವಕ ಸ್ವಾಗತ. ನವಭಾರತ ನಿರ್ಮಾಣಕ್ಕೆ ಈ ಮೈತ್ರಿಯು ಇನ್ನಷ್ಟು ಬಲ ತುಂಬಲಿದ್ದು, ನವ ಕರ್ನಾಟಕ ನಿರ್ಮಾಣಕ್ಕೆ ಹೊಸ ಭಾಷ್ಯ ಬರೆಯಲಿದೆʼʼ ಎಂದು ಮಾಜಿ ಸಚಿವ ಅಶ್ವತ್ಥನಾರಾಯಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ʼʼಪ್ರಧಾನಿ ನರೇಂದ್ರ ಮೋದಿ ಅವರ ಸಮರ್ಥ ಮುಂದಾಳತ್ವ ಹಾಗೂ ಅಭಿವೃದ್ಧಿ ಆಧಾರಿತ ರಾಜಕಾರಣವನ್ನು ಒಪ್ಪಿ ಎನ್ ಡಿ ಎ ಮೈತ್ರಿಕೂಟದ ಭಾಗವಾಗಲಿರುವ ಜೆಡಿಎಸ್ ಪಕ್ಷಕ್ಕೆ ಹೃದಯಪೂರ್ವಕ ಸ್ವಾಗತ ಹಾಗೂ ಅಭಿನಂದನೆಗಳು. ಇದರಿಂದ ಎನ್ ಡಿ ಎ ಮೈತ್ರಿಕೂಟದ ಶಕ್ತಿ ಇನ್ನಷ್ಟು ಹೆಚ್ಚಾಗಿದೆ ಹಾಗೂ ಮಾನ್ಯ ಪ್ರಧಾನಿಯವರ ನವ ಭಾರತದ ಕನಸು ಸಾಕಾರವಾಗಲು ಶಕ್ತಿ ತುಂಬಲಿದೆʼʼ ಎಂದು ಮಾಜಿ ಸಚಿವ ಆರ್ಾಶೋಕ್ ತಿಳಿಸಿದ್ದಾರೆ.