‘ಇಂಡಿಯಾ ಮೈತ್ರಿಕೂಟ’ ಸೇರುತ್ತಿರುವ ಜೆಡಿಎಸ್ ನಾಯಕರು: ಡಿ.ಕೆ. ಶಿವಕುಮಾರ್
ಡಿ.ಕೆ. ಶಿವಕುಮಾರ್
ಬೆಂಗಳೂರು: ಜೆಡಿಎಸ್ ಪಕ್ಷ ಬಿಜೆಪಿ ನೇತೃತ್ವದ ಎನ್ಡಿಎಗೆ ಸೇರಿದ ಕಾರಣದಿಂದಾಗಿ, ಕೇರಳ ಸೇರಿದಂತೆ ಇತರೆ ರಾಜ್ಯಗಳಲ್ಲಿರುವ ಜೆಡಿಎಸ್ ಪಕ್ಷದ ನೂರಾರು ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಅದರಲ್ಲೂ ‘ಇಂಡಿಯಾ’ ಮೈತ್ರಿಕೂಟಕ್ಕೆ ಸೇರುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.
ಬುಧವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಪಕ್ಷಗಳ ಮುಖಂಡರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡ ಬಳಿಕ ಅವರು ಮಾತನಾಡಿದರು.
ಕುಮಾರಣ್ಣ ಬಿಜೆಪಿ ಜೊತೆಗಿನ ಮೈತ್ರಿ ಕರ್ನಾಟಕಕ್ಕೆ ಮಾತ್ರ ಸೀಮಿತ ಎನ್ನುತ್ತಿದ್ದಾರೆ. ಆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಕೇರಳಕ್ಕೆ ಒಂದು ಭಾಗ, ಕರ್ನಾಟಕಕ್ಕೆ ಒಂದು ಭಾಗ ಎಂದು ಹೇಗೆ ಮಾಡುತ್ತಾರೋ ಎಂದು ಶಿವಕುಮಾರ್ ವ್ಯಂಗ್ಯವಾಡಿದರು.
ನಾನು ಕೇವಲ ಪಕ್ಷಕ್ಕೆ ಆಹ್ವಾನ ನೀಡಲು ಬಂದಿಲ್ಲ. ಒಬ್ಬೊಬ್ಬ ನಾಯಕರು, ಕಾರ್ಯಕರ್ತರು ಕನಿಷ್ಠ 10 ಜನರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಗುರಿ ನೀಡಲು ಬಂದಿದ್ದೇನೆ. ಕಾಂಗ್ರೆಸ್ ಪಕ್ಷವೇ ಈ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ಈ ದೇಶದ ಇತಿಹಾಸ, ಎಲ್ಲರೂ ಸೇರಿ ಮತ್ತಷ್ಟು ಪಕ್ಷವನ್ನು ಬಲಪಡಿಸೋಣ. ಇತರರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಕೆಲಸವನ್ನು ಬೆಂಗಳೂರಿಗೆ ಬಂದು ಮಾಡಬೇಕಾಗಿಲ್ಲ, ನೀವು ಇರುವ ಸ್ಥಳಗಳಲ್ಲೇ ಈ ಕೆಲಸ ಮಾಡಬೇಕು ಎಂದು ಅವರು ಹೇಳಿದರು.
ಕಳೆದ ವರ್ಷ ಇದೇ ಹೊತ್ತಿನಲ್ಲಿ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರ ಜೊತೆ ಭಾರತ್ ಜೋಡೊ ಯಾತ್ರೆಯಲ್ಲಿ ಹೆಜ್ಜೆ ಹಾಕುತ್ತಿದ್ದೆವು. ಆದರೆ ಇಂದು ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಿ ಅಂಬಾರಿ ಜೊತೆ ಹೆಜ್ಜೆ ಹಾಕುತ್ತಿದ್ದೇವೆ. ಅಂಬಾರಿ ಮೆರವಣಿಗೆಯಲ್ಲಿ ಗ್ಯಾರಂಟಿ ಯೋಜನೆಗಳ ಬಗ್ಗೆ ಟ್ಯಾಬ್ಲೋ ಮೆರವಣಿಗೆ ಮಾಡಲಾಯಿತು. ಇಡೀ ದೇಶವೇ 'ಕರ್ನಾಟಕ ಮಾದರಿ' ಅನುಕರಣೆ ಮಾಡಲು ಕಾಯುತ್ತಿದೆ ಎಂದು ಶಿವಕುಮಾರ್ ತಿಳಿಸಿದರು.
ಪ್ರಧಾನಿ ಮೋದಿ ಗ್ಯಾರಂಟಿ ಯೋಜನೆಯಿಂದ ರಾಜ್ಯ ದಿವಾಳಿಯಾಗುತ್ತದೆ ಎಂದರು. ಆದರೆ ಈಗ ಐದು ಗ್ಯಾರಂಟಿಗಳ ಬಗ್ಗೆ ಎಲ್ಲರೂ ವ್ಯಾಖ್ಯಾನ ಮಾಡುತ್ತಿದ್ದಾರೆ. ಯಡಿಯೂರಪ್ಪ ಅವರು ಒಂದು ಕಾಳು ಅಕ್ಕಿ ಕಡಿಮೆಯಾದರೂ ಹೋರಾಟ ಮಾಡುತ್ತೇನೆ ಎಂದು ಹೇಳುತ್ತಿದ್ದರು. ಮಾಜಿಮಂತ್ರಿಯೊಬ್ಬರು ಗೃಹಲಕ್ಷ್ಮಿ ಯೋಜನೆಯಿಂದ ಅತ್ತೆ- ಸೊಸೆಗೂ ಜಗಳ ತಂದು ಹಾಕುತ್ತಿದೆ ಸರಕಾರ ಎಂದು ಟೀಕಿಸಿದ್ದರು. ಆದರೆ ಈ ಎಲ್ಲರ ಮಾತುಗಳು ಸುಳ್ಳಾಗಿವೆ ಎಂದು ಅವರು ಹೇಳಿದರು.
ಮೈಸೂರು ದಸರಾಗೆ ಲಕ್ಷಾಂತರ ತಾಯಂದಿರು, ಅಕ್ಕ-ತಂಗಿಯರು ತಮ್ಮ ಮಕ್ಕಳನ್ನು ಕರೆದುಕೊಂಡು ಬಂದಿದ್ದರು. ಇಡೀ ಮೈಸೂರಿನ ತುಂಬಾ ಮಹಿಳೆಯರೆ ಇದ್ದರು. ನನ್ನ ಮನೆಯವರನ್ನು ದಸರಾ ನೋಡಲು ಕರೆದುಕೊಂಡು ಹೋಗಿದ್ದೆ, ಇಂತಹ ಬರಗಾಲದಲ್ಲೂ ಜನ ಸಂತೋಷದಿಂದ ಇರುವುದನ್ನು ನೋಡಿದೆ. ವಾಹನ ದಟ್ಟಣೆ ಹೆಚ್ಚಿದ್ದ ಕಾರಣ ಒಂದು ಗಂಟೆ ತಡವಾಯಿತು ಆದರೂ ಜನರನ್ನು ಕಂಡು ಸಂತೋಷವಾಯಿತು ಎಂದು ಶಿವಕುಮಾರ್ ತಿಳಿಸಿದರು.
ನಾವು ಕೇವಲ ಬಸ್ ಪ್ರಯಾಣ ಮಾತ್ರ ಉಚಿತ ನೀಡಿದ್ದೇವೆ. ಹೋಟೆಲ್, ದೇವಸ್ಥಾನ, ಶಾಪಿಂಗ್ ಸೇರಿದಂತೆ ಅನೇಕ ಕಡೆಗಳಲ್ಲಿ ಖರ್ಚು ಮಾಡಿರುತ್ತಾರೆ. ಇದಕ್ಕೆ ನಾವು ಹಣ ಕೊಟ್ಟಿದ್ದೇವೆಯೇ? ಇಲ್ಲ ಆದರೆ ಗ್ಯಾರಂಟಿ ಯೋಜನೆಗಳಿಂದ ಹಣದ ವಹಿವಾಟು ಹೆಚ್ಚಾಗಿದೆ. ಹೋಟೆಲ್, ವಸತಿ ಸೇರಿದಂತೆ ಅನೇಕ ಕಡೆ ಬಿಲ್ ಕಟ್ಟುತ್ತಾರೆ. ಇದರಿಂದ ತೆರಿಗೆ ಸಂಗ್ರಹ ಪರೋಕ್ಷವಾಗಿ ಹೆಚ್ಚಳವಾಗುತ್ತಿದೆ ಎಂದು ಅವರು ಹೇಳಿದರು.
ಜೆಡಿಎಸ್ ಪಕ್ಷದ ಸಾವಿರಾರು ಕಾರ್ಯಕರ್ತರನ್ನು ಪಕ್ಷಕ್ಕೆ ಬರ ಮಾಡಿಕೊಳ್ಳಲು ಮೈಸೂರಿನಿಂದ ಓಡೋಡಿ ಬಂದೆ. ಮುಖ್ಯಮಂತ್ರಿ ಸಹ ಈ ಕಾರ್ಯಕ್ರಮಕ್ಕೆ ಬರಬೇಕಾಗಿತ್ತು, ಕೊನೆ ಕ್ಷಣದಲ್ಲಿ ಬೇರೆ ಕಾರ್ಯಕ್ರಮ ನಿಗದಿಯಾದ ಕಾರಣ ಬರಲಾಗಲಿಲ್ಲ. ಶಿವಮೊಗ್ಗ ಜಿಲ್ಲೆಯ ಜೆಡಿಎಸ್ ನಾಯಕ ಶ್ರೀಕಾಂತ್ ನನ್ನ ಹಳೆಯ ಗೆಳೆಯ, ಒಳ್ಳೆಯ ಸಂಘಟನಾ ಚತುರ. ಬಹಳ ಕಾಲದಿಂದ ಗಾಳ ಹಾಕುತ್ತಲೇ ಇದ್ದೆ, ಬಲೆಗೆ ಬಿದ್ದಿರಲಿಲ್ಲ. ಈತನಿಗೆ ಸಾಕಷ್ಟು ಆಶ್ವಾಸನೆ ನೀಡಿದ್ದೆವು, ಬಹಿರಂಗವಾಗಿ ಹೇಳಲು ಆಗುವುದಿಲ್ಲ ಎಂದು ಶಿವಕುಮಾರ್ ತಿಳಿಸಿದರು.
ಬದುಕಿನಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದು ಶಿವಮೊಗ್ಗ, ಬೆಂಗಳೂರಿನಲ್ಲಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದರು. ಶ್ರೀಕಾಂತ್ ಅವರಿಗೆ ನಾಯಕರನ್ನು ಸೃಷ್ಟಿಮಾಡುವ ದೊಡ್ಡ ಶಕ್ತಿಯಿದೆ. ಇದಕ್ಕೆ ಸಾಕ್ಷಿಯಾಗಿ, ಯಶವಂತಪುರ, ಶಿವಮೊಗ್ಗದ ಎಲ್ಲ ಪಕ್ಷಗಳ ನಾಯಕರು ಬಂದಿದ್ದಾರೆ ಎಂದು ಅವರು ಹೇಳಿದರು.
ತುಮಕೂರಿನ ಶಫಿ ಅಹ್ಮದ್ ನಮ್ಮ ಪಕ್ಷದ ಆಸ್ತಿಯಾಗಿದ್ದವರು. ಹಿಂದಿನ ಚುನಾವಣೆಯಲ್ಲಿ ಏಕೆ ದುಡುಕಿನ ನಿರ್ಧಾರ ತೆಗೆದುಕೊಂಡರೋ ಗೊತ್ತಿಲ್ಲ, ಮತ್ತೆ ಅವರನ್ನು ಭವ್ಯವಾಗಿ ಪಕ್ಷಕ್ಕೆ ಬರ ಮಾಡಿಕೊಳ್ಳಲಾಗಿದೆ ಎಂದು ಶಿವಕುಮಾರ್ ಹೇಳಿದರು.
ಶಿವಮೊಗ್ಗದ ಜೆಡಿಎಸ್ ಮುಖಂಡ ಶ್ರೀಕಾಂತ್, ನಾಗರಾಜ್, ಪಾಲಾಕ್ಷ, ತುಮಕೂರಿನ ಶಫಿ ಅಹ್ಮದ್, ಫರ್ಝಾನಾ ತಮ್ಮ ಅಪಾರ ಬೆಂಬಲಿಗರ ಜತೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಮ್ ಅಹ್ಮದ್, ಸಚಿವ ಮಧು ಬಂಗಾರಪ್ಪ, ಮಾಜಿ ಸಚಿವ ಟಿ.ಬಿ. ಜಯಚಂದ್ರ, ಗೀತಾ ಶಿವರಾಜ್ಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.