ಬಿಜೆಪಿ ಜೊತೆ ಮೈತ್ರಿಗೆ ಜೆಡಿಎಸ್ ಪಕ್ಷದ ಮುಸ್ಲಿಮ್ ನಾಯಕರ ಅಸಮಾಧಾನ; ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ನಡೆಸಲು ನಿರ್ಧಾರ
ಬೆಂಗಳೂರು, ಸೆ.24: ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಜೊತೆ ಜೆಡಿಎಸ್ ಪಕ್ಷವು ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿರುವುದು ಮುಸ್ಲಿಮ್ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ.
ರವಿವಾರ ಈ ಸಂಬಂಧ ನಗರದ ಕುಮಾರಕೃಪಾ ಅತಿಥಿ ಗೃಹದಲ್ಲಿ ಜೆಡಿಎಸ್ ರಾಜ್ಯ ಕಾರ್ಯಾಧ್ಯಕ್ಷ ಎನ್.ಬಿ.ನಬಿ ನೇತೃತ್ವದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿದ್ದ ಮುಸ್ಲಿಮ್ ನಾಯಕರು, ಜಿಲ್ಲಾವಾರು ಮುಖಂಡರ ಸಭೆಗಳನ್ನು ನಡೆಸಿ, ಅಭಿಪ್ರಾಯ ಕ್ರೋಢೀಕರಿಸಿ ಮುಂದಿನ ತೀರ್ಮಾನ ಕೈಗೊಳ್ಳಲು ನಿರ್ಧರಿಸಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗ ಮುಸ್ಲಿಮರಿಗೆ ಮಾಡಿರುವ ಅನ್ಯಾಯವನ್ನು ಯಾರೊಬ್ಬರೂ ಮರೆಯಲು ಸಾಧ್ಯವಿಲ್ಲ. ಅಂತಹ ಪಕ್ಷದ ಜೊತೆ ನಮ್ಮ ನಾಯಕರು ಮಾಡಿಕೊಂಡಿರುವ ಮೈತ್ರಿಗೆ ನಮ್ಮ ವಿರೋಧವಿದೆ ಎಂದು ಜೆಡಿಎಸ್ ನಾಯಕ ಡಾ.ಮೋಹಿದ್ ಅಲ್ತಾಫ್ ತಿಳಿಸಿದರು.
‘ವಾರ್ತಾಭಾರತಿ’ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ‘ಈ ಮೈತ್ರಿಗೆ ನಮ್ಮ ಒಪ್ಪಿಗೆ ಇಲ್ಲ. ಇಂದು ಸಮಾಲೋಚನಾ ಸಭೆ ನಡೆಸಿದ್ದೇವೆ. ಅದರಂತೆ, ಅ.1ರಂದು ಕಲಬುರ್ಗಿ, ಬೀದರ್, ರಾಯಚೂರು, ಯಾದಗಿರಿ, ಅ.3ರಂದು ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಜಿಲ್ಲೆಗಳಲ್ಲಿ ಜೆಡಿಎಸ್ ಪಕ್ಷದ ಸ್ಥಳೀಯ ಮುಸ್ಲಿಮ್ ಮುಖಂಡರು, ನಾಯಕರು, ಕಾರ್ಯಕರ್ತರೊಂದಿಗೆ ಸಭೆಗಳನ್ನು ನಡೆಸುತ್ತೇವೆ ಎಂದು ಹೇಳಿದರು.
ಈ ರೀತಿ ಎಲ್ಲ ಜಿಲ್ಲೆಗಳಲ್ಲೂ ಸಭೆಗಳನ್ನು ನಡೆಸುತ್ತೇವೆ. ಆನಂತರ, ಬೆಂಗಳೂರಿನಲ್ಲಿ ದೊಡ್ಡ ಸಮಾವೇಶ ಮಾಡಿ, ನಮ್ಮ ಮುಂದಿನ ರಾಜಕೀಯ ನಡೆಯನ್ನು ಪ್ರಕಟಿಸುತ್ತೇವೆ ಎಂದು ಮೋಹಿದ್ ಅಲ್ತಾಫ್ ಹೇಳಿದರು.
‘ನಾನು 30 ವರ್ಷಗಳಿಂದ ಜೆಡಿಎಸ್ ಪಕ್ಷದಲ್ಲಿದ್ದೇನೆ. ನಮ್ಮ ಪಕ್ಷ ಜಾತ್ಯತೀತ ನೆಲೆಗಟ್ಟಿನಲ್ಲಿ ನಿಂತಿದೆ ಮತ್ತು ಮತದಾರರಿಗೆ ಮತ್ತು ಸಾರ್ವಜನಿಕರಿಗೆ ನಾವು ಯಾವಾಗಲೂ ಜಾತ್ಯತೀತತೆಯ ತತ್ವಗಳನ್ನು ಪ್ರಚಾರ ಮಾಡಿದ್ದೇವೆ. ಈಗ ನನ್ನ ಪಕ್ಷವು ಸಮುದಾಯಗಳು ಹಾಗೂ ಜಾತಿಗಳ ನಡುವೆ ಬಿರುಕು ಮೂಡಿಸುವ, ಕೋಮುವಾದವನ್ನು ಪ್ರೋತ್ಸಾಹಿಸುವ ಪಕ್ಷದೊಂದಿಗೆ ಕೈ ಜೋಡಿಸಿದೆ. ಜಾತ್ಯತೀತ ತತ್ವದ ಮೇಲೆ ವಿಶ್ವಾಸ ಇರಿಸಿರುವ ನಾವು ಇದನ್ನು ವಿರೋಧಿಸಲೇಬೇಕು. ಈ ಹಿನ್ನೆಲೆಯಲ್ಲಿ ಪಕ್ಷದ ಹಿರಿಯ ಉಪಾಧ್ಯಕ್ಷ ಸ್ಥಾನ ಹಾಗೂ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ’ ಎಂದು ಸೈಯದ್ ಶಫಿಉಲ್ಲಾ ಹೇಳಿದರು.
‘ಬಿಜೆಪಿ ಜೊತೆ ಮೈತ್ರಿ ಮುಂದುವರೆಸಿದರೆ ನಾವು ಪಕ್ಷದ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲ ಎಂದು ನಿರ್ಧಾರ ಮಾಡಿದ್ದೇವೆ. ನಮ್ಮ ರಾಜಕೀಯ ಹೋರಾಟ ಸದಾ ಕಾಲ ಕೋಮುವಾದಿಗಳ ವಿರುದ್ಧ ಇದ್ದದ್ದು. ಇವತ್ತು ಅವರ ಜೊತೆ ಸೇರಿ ಕೆಲಸ ಮಾಡುವುದು ಸಾಧ್ಯವಿಲ್ಲ. ಮುಸ್ಲಿಮರ ವಿರುದ್ಧ ದ್ವೇಷ ಸಾಧಿಸುವ, ಒಡೆದು ಆಳುವ ನೀತಿ ಅನುಸರಿಸುವ ಬಿಜೆಪಿ, ಈ ಹಿಂದೆ ಸರಕಾರ ನಡೆಸಿದಾಗ ಹಲಾಲ್, ಹಿಜಾಬ್, ಅಝಾನ್, ವ್ಯಾಪಾರ ನಿಷೇಧ, ಮೀಸಲಾತಿ ರದ್ದು ಮಾಡಿದ್ದನ್ನು ಸಮುದಾಯ ಮರೆಯಲು ಸಾಧ್ಯವೇ? ಮುಂದಿನ ವಾರ ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ನಡೆಸಿ ನಮ್ಮ ನಿರ್ಧಾರ ಪ್ರಕಟಿಸುತ್ತೇವೆ’
-ಇಮ್ರಾನ್ ಪಾಷ, ಬಿಬಿಎಂಪಿ ಮಾಜಿ ಸದಸ್ಯ