ಗುಜರಾತ್ ಮಾಡೆಲ್ ದಲಿತರ, ಆದಿವಾಸಿಗಳ ಧ್ವನಿ ಕೇಳಿಸಿಕೊಳ್ಳುತ್ತಿಲ್ಲ : ಜಿಗ್ನೇಶ್ ಮೇವಾನಿ
ಬೆಂಗಳೂರು : ಗುಜರಾತ್ ಮಾಡೆಲ್ ಸರಕಾರವು ಅಂಬಾನಿ, ಅದಾನಿಯಂತಹ ಉಳ್ಳುವರಿಗೆ ಮತ್ತು ಬಂಡವಾಳ ಶಾಹಿಗಳಿಗೆ ಬಡವರ ಭೂಮಿ ನೀಡಲು ಹೊರಟಿದ್ದು, ದಲಿತರ-ಆದಿವಾಸಿಗಳ ಧ್ವನಿಯನ್ನೇ ಕೇಳಿಸಿಕೊಳ್ಳುತ್ತಿಲ್ಲ ಎಂದು ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಬೇಸರ ವ್ಯಕ್ತಪಡಿಸಿದ್ದಾರೆ.
ಶನಿವಾರ ಇಲ್ಲಿನ ಗಾಂಧಿಭವನದಲ್ಲಿ ನಡೆದ ಭೂಮಿ ವಸತಿ ಹಕ್ಕು ವಂಚಿತ ಪ್ರಾತಿನಿಧ್ಯ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗುಜರಾತ್ ಸರಕಾರ ಉಳುವವನೇ ಭೂಮಿಯ ಒಡೆಯ ಎಂಬುವುದರ ಅರ್ಥ ಬದಲಾಯಿಸಿ ಈಗ ಉಳ್ಳವನೇ ಭೂಮಿಯ ಒಡೆಯ ಮಾಡಲು ಹೊರಟಿದೆ ಎಂದು ಹೇಳಿದರು.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಈ ದೇಶದ ದಲಿತರ, ಆದಿವಾಸಿಗಳು, ವಸತಿ ಮತ್ತು ಭೂ ವಂಚಿತರ ಗೋಳನ್ನು ಆಲಿಸುತ್ತಿಲ್ಲ. ಶೂದ್ರರಿಗೆ ಭೂಮಿ ಹಕ್ಕು ನಿರಾಕರಿಸುತ್ತದೆ. ಸಂಪತ್ತಿನ ಹಕ್ಕು ಇರಬಾರದು ಎಂದು ಹೇಳುತ್ತದೆ. ಪ್ರಧಾನಿ ನರೇಂದ್ರ ಮೋದಿ ಮನುಸ್ಮೃತಿಯ ಪ್ರತಿಪಾದಕರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇಶದ ಎಲ್ಲ ಕಡೆಗಳಲ್ಲಿ ಉಳುವವನೇ ಭೂಮಿಯ ಒಡೆಯ ಕಾನೂನು ಸಂಪೂರ್ಣವಾಗಿ ಜಾರಿಯಾಗಿಲ್ಲ, ಕೇವಲ ಪುಸ್ತದಲ್ಲಿ ಮಾತ್ರ ಭೂ ಮಾಲೀಕತ್ವ ವರ್ಗಾವಣೆ ಆಗಿದೆ. ಹೀಗಾಗಿ ಮದ್ಯಪ್ರದೇಶ, ಉತ್ತರ ಪ್ರದೇಶ, ಗುಜರಾತ್, ರಾಜಸ್ತಾನ್, ಮಹಾರಾಷ್ಟ್ರದಲ್ಲಿ ದಲಿತರಿಗೆ ಸಾಕಷ್ಟು ಭೂಮಿ ಇದ್ದರೂ, ಅದನ್ನು ಅನುಭವಿಸುತ್ತಿರುವವರು ಬಂಡವಾಳಶಾಹಿಗಳಾಗಿದ್ದಾರೆ ಎಂದು ಅವರು ಹೇಳಿದರು.
ಈ ವೇಳೆ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಭೂಮಿ ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಉಪಾಧ್ಯಕ್ಷ ಸಿರಿಮನೆ ನಾಗರಾಜ್, ನೂರ್ ಶ್ರೀಧರ್, ಕುಮಾರ್ ಸಮತಳ, ಡಾ.ವಿಜಯಾ, ಕೆಎಲ್. ಅಶೋಕ್ ಸೇರಿದಂತೆ ಮತ್ತಿತರರು ಇದ್ದರು.
ಸಮಾವೇಶದ ನಿರ್ಣಯಗಳು :
1. ಭೂ ಮಂಜೂರಾತಿ ಪ್ರಕ್ರಿಯೆಯ ಉಸ್ತುವಾರಿಗಾಗಿ ರಚಿಸಲಾಗಿದ್ದ ‘ಉನ್ನತ ಮಟ್ಟದ ಸಮಿತಿ’ಯನ್ನು ಪುನರಚಿಸಿ ಸಕ್ರಿಯಗೊಳಿಸಬೇಕು. ಇದರ ಅಧ್ಯಕ್ಷತೆಯನ್ನು ಕಂದಾಯ ಸಚಿವರು ವಹಿಸಿಕೊಳ್ಳಬೇಕು.
2. ಜನರು ಸಾಗುವಳಿ ಮಾಡುತ್ತಿರುವ ಅಥವಾ ವಾಸವಾಗಿರುವ, ಬೇರೆ ಭೂಮಿಯನ್ನಾಗಲೀ, ಮನೆಯನ್ನಾಗಲೀ ಹೊಂದಿಲ್ಲದಿರುವ, ಅರ್ಜಿಗಳನ್ನು ವಿಸರ್ಜಿಸದೆ ಆಧ್ಯತೆಯ ಮೇಲೆ ಮಂಜೂರು ಮಾಡಲು ಕ್ರಮವಹಿಸಬೇಕು.
3. ಅರಣ್ಯ-ಕಂದಾಯ ಭೂಮಿಗಳ ಬಗ್ಗೆ ಇರುವ ಗೊಂದಲಗಳನ್ನು ಜಂಟಿ ಸರ್ವೆ ಮೂಲಕ ನಿವಾರಿಸಬೇಕು. ಗೋಮಾಳ ಭೂಮಿಗೆ ಮತ್ತು ಸಿ ಆಂಡ್ ಡಿ ಭೂಮಿಗೆ ಅರಣ್ಯ ಇಲಾಖೆಯ ಅನುಮತಿ ಕೇಳುವುದನ್ನು ಕೈಬಿಡಬೇಕು.
4. ಅಲೆಮಾರಿಗಳು, ಆದಿವಾಸಿಗಳು, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಭೂಮಿ-ವಸತಿ ರಹಿತರಿಗೆ ಆದ್ಯತೆಯಲ್ಲಿ ಭೂ ಮಂಜೂರಾತಿ ಆಗುವಂತೆ ನೋಡಿಕೊಳ್ಳಬೇಕು.
5. ಬಿಜೆಪಿ ಸರಕಾರ ಭೂ ಸುಧಾರಣಾ ಕಾಯ್ದೆಗೆ ತಂದಿದ್ದ ಬಲಾಡ್ಯರ ಪರವಾದ ತಿದ್ದುಪಡಿಗಳನ್ನು ಕೂಡಲೇ ರದ್ದು ಮಾಡಬೇಕು.
6. ‘ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ’ಯು ಖುದ್ದಾಗಿ ಪರಿಶೀಲನೆ ನಡೆಸಿ ನ್ಯಾಯಬದ್ಧ ಎಂದು ಗುರುತಿಸಿರುವ ಅರ್ಜಿಗಳ ಕಡತವನ್ನು ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ಕಳುಹಿಸಿಕೊಟ್ಟು ವಿಶೇಷ ಆಧ್ಯತೆಯ ಮೇಲೆ ಪರಿಗಣಿಸಬೇಕು.
ಈ ದೇಶದಲ್ಲಿ ವಸತಿಹೀನರಿಗೆ ಇನ್ನೂ ವಸತಿ ಸಿಕ್ಕಿಲ್ಲ, ಸ್ವಂತ ಭೂಮಿಯೂ ಇಲ್ಲ. ದಲಿತರಿಗೆ, ಆದಿವಾಸಿಗಳಿಗೆ ಭೂ ಹಕ್ಕು ನೀಡಬೇಕು ಎಂಬುವುದು ಅಂಬೇಡ್ಕರ್ ಹೋರಾಟದ ಭಾಗವಾಗಿದ್ದು, ಭೂಮಿ, ವಸತಿಗಾಗಿ ದೊಡ್ಡ ಹೋರಾಟ ರೂಪಿಸಬೇಕಿದೆ. ನಾನು ಆ ಹೋರಾಟದಲ್ಲಿ ಭಾಗಿಯಾಗುತ್ತೇನೆ.
- ಜಿಗ್ನೇಶ್ ಮೇವಾನಿ, ಗುಜರಾತ್ ಶಾಸಕ