ಪತ್ರಕರ್ತರು ಅಭಿವ್ಯಕ್ತಿ ಸ್ವಾತಂತ್ರ್ಯ ಕಳೆದುಕೊಳ್ಳುವ ಹಂತಕ್ಕೆ ತಲುಪುತ್ತಿದ್ದಾರೆ: ಸಚಿವ ಎಚ್.ಕೆ.ಪಾಟೀಲ್
ಹೊನಕೆರೆ ನಂಜುಂಡೇಗೌಡಗೆ ‘ಖಾದ್ರಿ ಶಾಮಣ್ಣ ಪ್ರಶಸ್ತಿ’ ಪ್ರದಾನ
ಬೆಂಗಳೂರು, ಅ.28: ‘ಇತ್ತೀಚೆಗೆ ಪತ್ರಕರ್ತರು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಳೆದುಕೊಳ್ಳುವ ಹಂತಕ್ಕೆ ತಲುಪುತ್ತಿದ್ದಾರೆ’ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಆತಂಕ ವ್ಯಕ್ತಪಡಿಸಿದ್ದಾರೆ.
ಶನಿವಾರ ನಗರದ ಕೆ.ಜಿ.ರಸ್ತೆಯ ಎಫ್‍ಕೆಸಿಸಿಐ ಸಭಾಂಗಣದಲ್ಲಿ ಖಾದ್ರಿ ಶಾಮಣ್ಣ ಸ್ಮಾರಕ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಹೊನಕೆರೆ ನಂಜುಂಡೇಗೌಡ ಅವರಿಗೆ ‘ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿ’ ಪ್ರಧಾನ ಮಾಡಿ ಮಾತನಾಡಿದ ಅವರು, ಪತ್ರಿಕೋದ್ಯಮದ ಧ್ವನಿಯೇ ಕಡಿಮೆಯಾಗಿದೆ. ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಶೇ.50ರಷ್ಟು ಮಾತ್ರ ಉಳಿದಿದೆ ಎಂದರು.
ಪತ್ರಕರ್ತರು ಎಷ್ಟೇ ಗರ್ವದಿಂದ ಅಭಿವ್ಯಕ್ತಿ ಸ್ವಾತಂತ್ರ್ಯ, ಮೂಲಭೂತ ಹಕ್ಕುಗಳ ಬಗ್ಗೆ ಮಾತನಾಡುತ್ತಿದ್ದರೂ ದೊಡ್ಡ ಜಾತಿ, ಶ್ರೀಮಂತರು, ಉದ್ಯಮಗಳ ವಿರುದ್ಧ ಬರೆಯಲು ಆಗುತ್ತಿಲ್ಲ. ಇನ್ನು ಪ್ರಭಾವಿ ರಾಜಕಾರಣಿಗಳ ವಿರುದ್ಧ ಬರೆಯುವುದೂ ವಿರಳವಾಗಿದೆ. ಪ್ರತಿಯೊಬ್ಬ ಪತ್ರಿಕೋದ್ಯಮಿಯೂ ಸುತ್ತ-ಮುತ್ತಲು ಏನು ನಡೆಯುತ್ತಿದೆ ಎಂಬುದನ್ನು ಗ್ರಹಿಸಿ ಆತ್ಮವಲೋಕನ ಮಾಡಿಕೊಳ್ಳುವ ಪ್ರಸಂಗ ಬಂದಿದೆ. ಹಿರಿಯ ಪತ್ರಕರ್ತರು ಈ ಸಂಬಂಧ ಎಲ್ಲರನ್ನೂ ಜಾಗೃತಗೊಳಿಸುವ ಕೆಲಸ ಮಾಡಬೇಕಿದೆ ಎಂದು ಅವರು ಸಲಹೆ ನೀಡಿದರು.
ಹಿಂದೆ ಸುದ್ದಿಗೋಷ್ಠಿಗೆ ಬರಬೇಕಾದರೆ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುವ ಸಲುವಾಗಿ ತಲೆ ಕೆರೆದುಕೊಂಡು ಬರುತ್ತಿದ್ದೆವು. ಆದರೆ, ಇಂದು ಅದರ ಸ್ವರೂಪ ಬದಲಾಗಿದ್ದು, ತಲೆ ಬಾಚಿಕೊಂಡು ಬಂದರೆ ಸಾಕಾಗುತ್ತದೆ. ಒಬ್ಬರು ಮತ್ತೊಬ್ಬರಿಗೆ ಬೈಯ್ಯುವುದೇ ವರ್ಷದಲ್ಲಿ 100 ದಿನ ಪ್ರಮುಖ ಸುದ್ದಿಗಳಾಗಿರುತ್ತವೆ. ಪತ್ರಕರ್ತರು ಸಾರ್ವಜನಿಕರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡಬಾರದು ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.
ಎಲ್ಲರೂ ಸಮಾಜ, ಸರಕಾರ, ರಾಜಕೀಯ, ಸಾಮಾಜಿಕ ಕ್ಷೇತ್ರದೊಳಗೆ ಭ್ರಷ್ಟಾಚಾರ ಒಪ್ಪಿಕೊಂಡು ಅದಕ್ಕೆ ಗೌರವ ಸಲ್ಲಿಸಲು ಪ್ರಾರಂಭ ಮಾಡಿದ್ದೇವೆ. ಈ ಬಗ್ಗೆ ನಾವು ಜಾಗೃತರಾಗಬೇಕಿದೆ. ನಮ್ಮ ಭವಿಷ್ಯದ ಜನಾಂಗಕ್ಕೆ ಉತ್ತಮವಾದ್ದನ್ನು ಮತ್ತೆ ವಾಪಸ್ಸು ತರದಿದ್ದರೆ ಕರ್ತವ್ಯ ಚ್ಯುತಿ ಮಾಡಿದಂತಾದೀತು ಎಂದು ಎಚ್.ಕೆ.ಪಾಟೀಲ್ ಕಿವಿಮಾತು ಹೇಳಿದರು.
ಪ್ರಶಸ್ತಿಗೆ ಭಾಜನರಾಗಿರುವ ನಂಜುಂಡೇಗೌಡರು ಸರಕಾರ ಹಗಲು ರಾತ್ರಿ ಕೆಲಸ ಮಾಡುವಂತಹ ವಿಶೇಷ ಶೈಲಿಯ ಹಾಗೂ ಪರಿಣಾಮಕಾರಿ ವರದಿಗಾರಿಕೆ ಮೂಲಕ ರಾಜ್ಯಕ್ಕೆ ಬಹುದೊಡ್ಡ ಸೇವೆ ಸಲ್ಲಿಸಿದ್ದಾರೆ ಎಂದು ಎಚ್.ಕೆ.ಪಾಟೀಲ್ ಶ್ಲಾಘಿಸಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಹೊನಕೆರೆ ನಂಜುಂಡೇಗೌಡ, ‘ನಾನು ಪಡೆದಿರುವ ಖಾದ್ರಿ ಶಾಮಣ್ಣ ಪ್ರಶಸ್ತಿಯನ್ನು ನನ್ನ ತಾಯಿಗೆ ಸಮರ್ಪಿಸುತ್ತೇನೆ. ಪ್ರಶಸ್ತಿಯ ನಗದನ್ನು ಖಾದ್ರಿ ಶಾಮಣ್ಣ ಟ್ರಸ್ಟ್‍ಗೆ ನೀಡುವ ಮೂಲಕ ಈ ಟ್ರಸ್ಟ್ ಇನ್ನಷ್ಟು ಬೆಳೆಯಲಿ ಎಂದು ಹಾರೈಸುತ್ತೇನೆ ಎಂದರು. ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಆರ್.ಪಿ.ಜಗದೀಶ್, ನಾಗಣ್ಣ, ಶ್ರೀಶ, ಹಿರಿಯ ವಕೀಲ ಬಿ.ಟಿ.ವೆಂಕಟೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.