ಗೋರಿಪಾಳ್ಯ ಪಾಕಿಸ್ತಾನದಲ್ಲಿದೆ ಎಂಬ ವಿವಾದಾತ್ಮಕ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ ಕರ್ನಾಟಕ ಹೈಕೋರ್ಟ್ನ ನ್ಯಾಯಮೂರ್ತಿ ವಿ. ಶ್ರೀಶಾನಂದ
Screengrab:X
ಬೆಂಗಳೂರು: ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ವಿ ಶ್ರೀಶಾನಂದ ಅವರು ಕಲಾಪದ ವೇಳೆ ಬಳಸಿದ್ದ ಆಕ್ಷೇಪಾರ್ಹ ಪದಗಳಿಗೆ ವಿಷಾದ ವ್ಯಕ್ತಪಡಿಸಿದ್ದಾರೆ ಎಂದು Bar and Bench ವರದಿ ಮಾಡಿದೆ.
ನ್ಯಾಯಮೂರ್ತಿ ವಿ ಶ್ರೀಶಾನಂದ ಅವರ ಕಲಾಪದ ಎರಡು ವೀಡಿಯೊ ತುಣುಕುಗಳು ವೈರಲ್ ಆಗಿತ್ತು. ಸೆಪ್ಟೆಂಬರ್ 19 ರಂದು ವೈರಲ್ ಆದ ವೀಡಿಯೊದಲ್ಲಿ, ಆಗಸ್ಟ್ 28 ರಂದು ನ್ಯಾಯಮೂರ್ತಿ ಶ್ರೀಶಾನಂದ ಅವರು ನಡೆಸಿದ ಕಲಾಪದ ವೇಳೆ ಬೆಂಗಳೂರು ಪಶ್ಚಿಮದಲ್ಲಿ ಮುಸ್ಲಿಂ ಪ್ರಾಬಲ್ಯವಿರುವ ಗೋರಿಪಾಳ್ಯವನ್ನು 'ಪಾಕಿಸ್ತಾನ' ಎಂದು ಉಲ್ಲೇಖಿಸಿದ್ದು ಆಕ್ರೋಶಕ್ಕೆ ಕಾರಣವಾಗಿತ್ತು. ಅದಾದ ಬಳಿಕ ವೈರಲ್ ಆದ ಇನ್ನೊಂದು ವೀಡಿಯೊದಲ್ಲಿ ಮಹಿಳಾ ವಕೀಲರೊಬ್ಬರಿಗೆ ನ್ಯಾಯಮೂರ್ತಿಗಳು ಬಳಸಿದ ಪದದ ಬಗ್ಗೆಯೂ ಆಕ್ಷೇಪ ವ್ಯಕ್ತವಾಗಿತ್ತು.
ಘಟನೆಯ ಮರುದಿನ, ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿಆರ್ ಗವಾಯಿ, ಸೂರ್ಯ ಕಾಂತ್ ಮತ್ತು ಹೃಷಿಕೇಶ್ ರಾಯ್ ಅವರಿದ್ದ ಸುಪ್ರೀಂ ಕೋರ್ಟ್ ಪೀಠವು ಈ ಘಟನೆಯ ಬಗ್ಗೆ ಸ್ವಯಂ ಪ್ರೇರಿತ ವಿಚಾರಣೆ ಕೈಗೊಂಡು, ಕರ್ನಾಟಕ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅವರಿಂದ ಈ ಬಗ್ಗೆ ವರದಿ ಕೇಳಿತ್ತು.
ಶ್ರೀಶಾನಂದ ಅವರು ಬೆಂಗಳೂರಿನ ವಕೀಲರ ಸಂಘದ ಸದಸ್ಯರು, ಹಿರಿಯ ವಕೀಲರನ್ನು ಶನಿವಾರ ಮಧ್ಯಾಹ್ನ 2:30 ಕ್ಕೆ ತಮ್ಮ ನ್ಯಾಯಾಲಯದ ಕೋಣೆಗೆ ಕರೆದು ಆಕ್ಷೇಪಾರ್ಹ ಹೇಳಿಕೆಗಳಿಗೆ ವಿಷಾದ ವ್ಯಕ್ತಪಡಿಸುವ ಟಿಪ್ಪಣಿಯನ್ನು ಓದಿದರು ಎಂದು ತಿಳಿದು ಬಂದಿದೆ.
"ಆ ಹೇಳಿಕೆಗಳನ್ನು ನೀಡಿದಕ್ಕಾಗಿ ವಿಷಾದಿಸುತ್ತೇನೆ. ಯಾವುದೇ ನಿರ್ದಿಷ್ಟ ಸಮುದಾಯವನ್ನು ಅಥವಾ ವಕೀಲರ ಸಂಘದ ಯಾವುದೇ ಸದಸ್ಯರನ್ನು ನೋಯಿಸುವ ಉದ್ದೇಶವಿರಲಿಲ್ಲ ಎಂದು ನ್ಯಾಯಮೂರ್ತಿಗಳು ಹೇಳಿದರು. ಇನ್ನು ಮುಂದೆ ಅವರ ಕಲಾಪದ ವೇಳೆ ನ್ಯಾಯಾಲಯದಲ್ಲಿ ಯುವ ವಕೀಲರನ್ನು ಪ್ರೋತ್ಸಾಹಿಸುವಂತೆ ನಾವು ಅವರಿಗೆ ಹೇಳಿದ್ದೇವೆ. ಕಲಾಪದ ಸಮಯದಲ್ಲಿ ಬೇರೆ ಯಾವುದೇ ವಿಷಯಾಂತರವಾಗುವಂತೆ ಮಾಡಬೇಡಿ ಎಂದು ಅವರಿಗೆ ತಿಳಿಸಿದ್ದೇವೆ“’ ಎಂದು ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾ ರೆಡ್ಡಿ barandbench ಗೆ ತಿಳಿಸಿದ್ದಾರೆ.
ನ್ಯಾಯಮೂರ್ತಿ ಶ್ರೀಶಾನಂದ ಅವರು ವೈರಲ್ ಆಗಿರುವ ವೀಡಿಯೊದಲ್ಲಿರುವ ಮಹಿಳಾ ವಕೀಲರಿಗೆ ತಮ್ಮ ಸಂದೇಶವನ್ನು ತಿಳಿಸುವಂತೆ ವಕೀಲರ ಸಂಘದ ಸದಸ್ಯರನ್ನು ಕೇಳಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಮುಂದೆ ಅಂತಹ ಯಾವುದೇ ಹೇಳಿಕೆಗಳನ್ನು ನೀಡುವುದಿಲ್ಲ ಎಂದು ನ್ಯಾಯಮೂರ್ತಿ ಶ್ರೀಶಾನಂದ ಅವರು ಹೇಳಿದರು ಎಂದು ನ್ಯಾಯಾಲಯದಲ್ಲಿ ಹಾಜರಿದ್ದ ವಕೀಲರು ತಿಳಿಸಿದ್ದಾರೆ.