ನೀರು ತುಂಬಿದ್ದ ಹೊಂಡಕ್ಕೆ ಬಿದ್ದು ಇಬ್ಬರು ಬಾಲಕರು ಮೃತ್ಯು
- ಮೃತ ಬಾಲಕರು
ಕಲಬುರಗಿ: ಮಳೆ ನೀರಿನಿಂದ ತುಂಬಿದ್ದ ಹೊಂಡಕ್ಕೆ ಬಿದ್ದು ಇಬ್ಬರು ಬಾಲಕರು ಮೃತಪಟ್ಟಿರುವ ಘಟನೆ ಕಲಬುರಗಿ ನಗರದ ದುಬೈ ಕಾಲೋನಿಯಲ್ಲಿ ರವಿವಾರ ವರದಿಯಾಗಿದೆ.
ಸಂಜಯಗಾಂಧಿ ನಗರದ ಸುರೇಶ ಕನ್ನೋಳ್ ಪುತ್ರ ಅಭಿಷೇಕ್ (12) ಮತ್ತು ಭೀಮರಾಯ ನೆಲೋಗಿ ಪುತ್ರ ಅಜಯ್ (12) ಮೃತ ಬಾಲಕರು ಎಂದು ಗುರುತಿಸಲಾಗಿದೆ.
ದುಬೈ ಕಾಲೋನಿಯ ಮಕ್ಕಳ ಆಸ್ಪತ್ರೆ (ಹಳೇ ಕುಷ್ಠರೋಗಿ ಆಸ್ಪತ್ರೆ ಬಳಿ) ಮುಂಭಾಗದಲ್ಲಿ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣಕ್ಕೆ ತಗ್ಗು ತೋಡಲಾಗಿದೆ. ಸತತ ಮಳೆಯಿಂದ ತಗ್ಗು ಸಂಪೂರ್ಣ ಭರ್ತಿಯಾಗಿದೆ. ನಿನ್ನೆ ಸಂಜೆ ಇಬ್ಬರು ಬಾಲಕರು ಆಟವಾಡಲು ಹೋಗಿ ಗುಂಡಿಗೆ ಬಿದ್ದು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಅಗ್ನಿಶಾಮಕ ದಳದ ಸಿಬ್ಬಂದಿ ಬಾಲಕರ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಸುದ್ದಿ ತಿಳಿದು ಚೌಕ್ ಠಾಣೆ ಪಿಐ ರಾಜಶೇಖರ ಹಳಿಗೋಡಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು.
ಈ ಕುರಿತು ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story