ಚಿನ್ನ ಕಳ್ಳಸಾಗಾಣಿಕೆ ಆರೋಪ: ಕನ್ನಡ ಚಿತ್ರನಟಿ ಬಂಧನ

ರಾನ್ಯಾ ರಾವ್ x.com/htTweets
ಬೆಂಗಳೂರು: ಪೊಲೀಸ್ ಹೌಸಿಂಗ್ ಕಾರ್ಪೊರೇಷನ್ನ ಡೈರೆಕ್ಟರ್ ಜನರಲ್ ರಾಮಚಂದ್ರ ರಾವ್ ಅವರ ಪುತ್ರಿ ಹಾಗೂ ಕನ್ನಡ ಚಿತ್ರನಟಿ ರಾನ್ಯಾ ರಾವ್ ಅವರನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್ಐ) ಅಧಿಕಾರಿಗಳು ಸೋಮವಾರ ರಾತ್ರಿ ಇಲ್ಲಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾಣ ನಿಲ್ದಾಣದಲ್ಲಿ ಅಕ್ರಮ ಚಿನ್ನಕಳ್ಳಸಾಗಾಣಿಕೆ ಆರೋಪದಲ್ಲಿ ಬಂಧಿಸಿದ್ದಾರೆ.
ದುಬೈನಿಂದ ಆಗಮಿಸಿದ ರಾನ್ಯಾ ಅವರನ್ನು 14 ಕೆ.ಜಿ. ಚಿನ್ನದ ಬಾರ್ ಗಳ ಸಹಿತ ಬಂಧಿಸಲಾಗಿದೆ. ದೇಹಕ್ಕೆ ಧರಿಸಿದ್ದ ಬೆಲ್ಟ್ ನಲ್ಲಿ ಚಿನ್ನವನ್ನು ಹುದುಗಿಸಿ ಇಡಲಾಗಿತ್ತು ಎನ್ನಲಾಗಿದೆ. ಇದರ ಜತೆಗೆ ಆಕೆ ಧರಿಸಿದ್ದ 800 ಗ್ರಾಂ ಚಿನ್ನದ ಆಭರಣಗಳನ್ನು ಕೂಡಾ ವಶಪಡಿಸಿಕೊಳ್ಳಲಾಗಿದೆ. ನಟಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಕಳೆದ ಕೆಲ ತಿಂಗಳುಗಳಿಂದ ಬೆಂಗಳೂರು ವಿಮಾನ ನಿಲ್ದಾಣದ ಮೂಲಕ ಕಾರ್ಯಾಚರಣೆ ನಡೆಸುತ್ತಿರುವ ಚಿನ್ನ ಕಳ್ಳಸಾಗಾಣಿಕೆ ದಂಧೆಯಲ್ಲಿ ಈಕೆ ಷಾಮೀಲಾಗಿರಬೇಕು ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ.
ಸ್ಯಾಂಡಲ್ ವುಡ್ ನಟರಾದ ಸುದೀಪ್ ಅವರ ಜತೆಗೆ ಮಾಣಿಕ್ಯ, ಗಣೇಶ್ ಜತೆಗೆ ಪಟಾಕಿ ಮತ್ತಿತರ ಕನ್ನಡ ಚಲನಚಿತ್ರಗಳಲ್ಲಿ 32 ವರ್ಷದ ಈಕೆ ನಟಿಸಿದ್ದರು. ಜತೆಗೆ ವಿಕ್ರಮ್ ಪ್ರಭು ಜತೆಗೆ ತಮಿಳು ಚಿತ್ರ ವಾಘ್ ನಲ್ಲೂ ಕಾಣಿಸಿಕೊಂಡಿದ್ದರು.
ಈ ವರ್ಷದ ಆರಂಭದಿಂದ ಇದುವರೆಗೆ 10ಕ್ಕೂ ಹೆಚ್ಚು ವಿದೇಶಿ ಪ್ರವಾಸ ಕೈಗೊಂಡ ಹಿನ್ನೆಲೆಯಲ್ಲಿ ರಾನ್ಯಾ ವಿರುದ್ಧ ಡಿಆರ್ ಐ ಹದ್ದಿನ ಕಣ್ಣು ಇರಿಸಿತ್ತು. ಗಲ್ಫ್ ದೇಶಗಳಿಗೆ ಹಲವು ಬಾರಿ ಕಿರು ಪ್ರವಾಸಗಳನ್ನು ಕೈಗೊಂಡ ಹಿನ್ನೆಲೆಯಲ್ಲಿ ಅಧಿಕಾರಿಗಳಿಗೆ ಸಂಶಯ ಬಂದಿತ್ತು ಎಂದು ಕೆಐಎ ಅಧಿಕಾರಿಯೊಬ್ಬರು ಹೇಳಿದ್ದಾರೆ.
ದುಬೈನಿಂದ ಸೋಮವಾರ ಬೆಂಗಳೂರಿಗೆ ಹೊರಟಿದ್ದ ಎಮಿರೇಟ್ಸ್ ವಿಮಾನವನ್ನು ರಾನ್ಯಾ ಏರಿದ್ದರು. ಆಕೆ ವಿಮಾನ ನಿಲ್ದಾಣದಲ್ಲಿ ಬಂದಿಳಿದ ತಕ್ಷಣ ಡಿಆರ್ ಐ ತಂಡ ಆಕೆಯನ್ನು ಸುತ್ತುವರಿಯಿತು. ಬೆಲ್ಟ್ ನಲ್ಲಿ ಚಿನ್ನದ ಬಾರ್ ಗಳನ್ನು ಹುದುಗಿಸಿ ಇಟ್ಟಿರುವುದು ಕಂಡು ಬಂತು. ಆಕೆಯನ್ನು ವಶಕ್ಕೆ ಪಡೆಯುವ ವೇಳೆಯೂ ಆಕೆ ಯಾವುದೇ ಅನುಮಾನ ಬಾರದಂತೆ ಆತ್ಮವಿಶ್ವಾಸದಿಂದ ಇದ್ದರು ಎಂದು ಮೂಲಗಳು ವಿವರಿಸಿವೆ.
ನಾಲ್ಕು ಮಂದಿಯ ಡಿಆರ್ ಐ ತಂಡ ಕಳೆದ 15 ದಿನಗಳಲ್ಲಿ ನಾಲ್ಕು ಪ್ರವಾಸಗಳ ದೃಶ್ಯಾವಳಿಯನ್ನು ವೀಕ್ಷಿಸಿದಾಗ ಕೂಡಾ ಇದೇ ಬಗೆಯ ಡ್ರೆಸ್ ಮಾಡಿರುವುದು ಕಂಡುಬಂದಿದೆ. ಹಿಂದೆ ಕೂಡಾ ಚಿನ್ನಕಳ್ಳಸಾಗಾಣಿಕೆ ಮಾಡಲಾಗಿತ್ತೇ ಎಂಬ ಬಗ್ಗೆ ಪರಿಶೀಲನೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.