ಬೆಂಗಳೂರಿನ ಧರ್ಮರಾಯ ಸ್ವಾಮಿ ಕರಗ ಉತ್ಸವಕ್ಕೆ ಸಿಎಂ ಚಾಲನೆ

ಬೆಂಗಳೂರು: ವಿಶ್ವವಿಖ್ಯಾತ ಐತಿಹಾಸಿಕ ಕರಗ ಶಕ್ತ್ಯ ಉತ್ಸವ ಹಾಗೂ ಧರ್ಮರಾಯ ಸ್ವಾಮಿ ಮಹಾರಥೋತ್ಸವ ಕ್ಷಣಗಣನೆ ಆರಂಭವಾಗಿದ್ದು, ಶನಿವಾರ ತಡರಾತ್ರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ.
ಇಲ್ಲಿನ ನಗರ್ತಪೇಟೆಯಲ್ಲಿರುವ ಧರ್ಮರಾಯಸ್ವಾಮಿ ದೇವಾಲಯದಲ್ಲಿ ನಡೆಯುವ ಐತಿಹಾಸಿಕ ಕರಗ ಶಕ್ತ್ಯ ಮಹೋತ್ಸವ ಚಾಲನೆ ದೊರೆಯಲಿದ್ದು, ಉತ್ಸವ ಹಿನ್ನೆಲೆಯಲ್ಲಿ ಶನಿವಾರ ಮುಂಜಾನೆಯಿಂದಲೇ ಧರ್ಮರಾಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ, ಅಭಿಷೇಕ, ಮಹಾಮಂಗಳಾರತಿ ಜರುಗಿತು. ಆನಂತರ, ಬೆಳಗ್ಗೆ 10.30ಕ್ಕೆ ಕರಗ ನಡೆಸಿಕೊಡುವ ಅರ್ಚಕ ಹಳದಿ ಸೀರೆಯುಟ್ಟು, ಬಳೆ ತೊಟ್ಟು ಕಬ್ಬನ್ ಉದ್ಯಾನದ ಕರಗದ ಕುಂಟೆಯಲ್ಲಿ ದ್ರೌಪದಿದೇವಿಗೆ ಗಂಗೆ ಪೂಜೆ ಸಲ್ಲಿಸಿದರು.
ಅಲ್ಲಿಂದ ಹಸಿಕರಗವನ್ನು ಮಂಟಪಕ್ಕೆ ಹೊತ್ತು ತಂದು ವಿಶೇಷ ಪೂಜೆ ನೆರವೇರಿಸಿ ದೇವಾಲಯಕ್ಕೆ ತೆರಳಿದರು.ಬಳಿಕ ವಿವಿಧ ಧಾರ್ಮಿಕ ಆಚರಣೆಗಳು ನಡೆಯಲಿದ್ದು, ರಾತ್ರಿ ಹೂವಿನ ಕರಗ ಶಕ್ತ್ಯ ಜರುಗಲಿದೆ. ಉತ್ಸವಕರ್ತರು ಮತ್ತು ವೀರಕುಮಾರರು ಅರ್ಚಕರೊಂದಿಗೆ ಸಾಗುವ ಮೆರವಣಿಗೆಯಲ್ಲಿ ಛತ್ರಿ, ಚಾಮರ, ಧ್ವಜದ ಜತೆಗೆ ನಾದಸ್ವರ ಮೊಳಗಲಿದೆ. ಅಲ್ಲಿಂದ ವಾಪಸ್ ಬರುವಾಗ ವೀರಕುಮಾರರು ಹೊಂಗೆ ಹೂವಿನ ಗೊಂಚಲು ಕಿತ್ತುತಂದು ದೇವಸ್ಥಾನದಲ್ಲಿ ಮಂಟಪ ನಿರ್ಮಿಸಲಿದ್ದಾರೆ. ಬಳಿಕ ಅರ್ಜುನ ಮತ್ತು ದ್ರೌಪದಿಯರ ವಿವಾಹ ಮಹೋತ್ಸವ ಕಾರ್ಯ ನೆರವೇರಿತು.
ಮಧ್ಯರಾತ್ರಿ 12:30ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ಸಚಿವರು, ಜನಪ್ರತಿನಿಧಿಗಳು ಹಾಗೂ ವಿವಿಧ ಕ್ಷೇತ್ರದ ಗಣ್ಯರು ಹಾಗೂ ಲಕ್ಷಾಂತರ ಮಂದಿ ಭಕ್ತರು ಇದಕ್ಕೆ ಸಾಕ್ಷಿಯಾಗಲಿದ್ದಾರೆ. ಈ ಬಾರಿಯ ಕರಗ ಉತ್ಸವದಲ್ಲಿ ದೇವಾಲಯದ ಅರ್ಚಕ ವಿ.ಜ್ಞಾನೇಂದ್ರ 15ನೆ ಬಾರಿಗೆ ಹೂವಿನ ಕರಗ ಹೊತ್ತು ಸಾಗಲಿದ್ದಾರೆ.
ದರ್ಗಾಕ್ಕೆ ತಲುಪಿದ ಮೆರವಣಿಗೆ:
ಮಧ್ಯರಾತ್ರಿ ದೇಗುಲದಿಂದ ಬಿಜಯ ಮಾಡಿಸಿ ಸಾಗುವ ಕರಗ ಉತ್ಸವ ಕುಂಬಾರಪೇಟೆ ರಸ್ತೆ ಮೂಲಕ ಸಾಗಿ ಅಕ್ಕಿಪೇಟೆಯ ಮುಖ್ಯರಸ್ತೆಯ ಹಝ್ರತ್ ತವಕ್ಕಲ್ ಶಾ ಮಸ್ತಾನ್ ಸೋಹವಾರ್ಡಿ ರಹಮತುಲ್ಲಾ ದರ್ಗಾಕ್ಕೆ ಭೇಟಿ ನೀಡಿ, ಅಲ್ಲಿಂದ ಬಳೇಪೇಟೆ ಹಳೇಗರಡಿ, ಅಣ್ಣಮ್ಮನ ದೇವಾಲಯಕ್ಕೆ ತೆರಳಲಿದೆ. ಬಳಿಕ ಕಿಲಾರಿ ರಸ್ತೆ, ಯಲಹಂಕ ಗೇಟ್, ಅವೆನ್ಯು ರಸ್ತೆ, ಕುಂಬಾರಪೇಟೆ, ಗೊಲ್ಲರಪೇಟೆ, ತಿಗಳರಪೇಟೆಗಳಲ್ಲಿರುವ ಕುಲಬಾಂಧವರ ಮನೆಗಳಲ್ಲಿ ಮತ್ತು ಭಕ್ತರಿಂದ ಪೂಜೆ ಮಾಡಿಸಿಕೊಂಡು ಮುಂಜಾನೆವರೆಗೂ ಮೆರವಣಿಗೆ ಸಾಗಲಿದೆ.