ವಾಣಿಜ್ಯ ಮತ್ತು ಕೈಗಾರಿಕೆ | ಪ್ರತ್ಯೇಕ ಎಂಎಸ್‍ಎಂಇ ನೀತಿ ಜಾರಿ : ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಕರ್ನಾಟಕದ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು, ಎಂ.ಎಸ್.ಎಂ.ಇ ಗಳ ಪ್ರಾಮುಖ್ಯತೆಯನ್ನು ಗುರುತಿಸಿ, ಆರ್ಥಿಕತೆಗೆ ವೇಗ ನೀಡಲು ಮತ್ತು ಪ್ರಾದೇಶಿಕ ಅಸಮತೋಲನವನ್ನು ನಿವಾರಿಸಿ ಎಂ.ಎಸ್.ಎಂ.ಇ ವಲಯಕ್ಕೆ ಅಗತ್ಯವಾದ ಬೆಂಬಲವನ್ನು ಒದಗಿಸುವ ಉದ್ದೇಶದಿಂದ ಪ್ರತ್ಯೇಕ ಎಂ.ಎಸ್.ಎಂ.ಇ ನೀತಿಯನ್ನು ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ನಲ್ಲಿ ಘೋಷಿಸಿದ್ದಾರೆ.
ಇ.ವಿ.ವಾಹನಗಳ ತಯಾರಿಕೆ ಹಾಗೂ ಬಳಕೆಗೆ ಉತ್ತೇಜನ ನೀಡಲು ಬೆಂಗಳೂರು ವಲಯದಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನೊಳಗೊಂಡ ಇ.ವಿ ಕ್ಲಸ್ಟರ್ ಅನ್ನು ನಿರ್ಮಿಸಲಾಗುವುದು. ಈ ಉದ್ದೇಶಕ್ಕಾಗಿ 25 ಕೋಟಿ ರೂ. ಅನುದಾನವನ್ನು ಒದಗಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ದೇವನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಫಾಕ್ಸ್ ಕಾನ್ ಸಂಸ್ಥೆಯಿಂದ ಮೊಬೈಲ್ ಫೋನ್ ಗಳ ಉತ್ಪಾದನಾ ಫಟಕವು 21,911 ಕೋಟಿ ರೂ. ಬಂಡವಾಳ ಹೂಡಿಕೆಯೊಂದಿಗೆ ಪ್ರಾರಂಭಗೊಂಡಿದೆ. ಇದರಿಂದ 50 ಸಾವಿರ ಉದ್ಯೋಗ ಸೃಜನೆಯನ್ನು ನಿರೀಕ್ಷಿಸಲಾಗಿದೆ. ಈ ಕಂಪನಿಗೆ ಇ.ಎಸ್.ಡಿ.ಎಂನ ನೀತಿಯಡಿ 6,970 ಕೋಟಿ ರೂ.ಗಳ ಪ್ರೋತ್ಸಾಹಕಗಳನ್ನು ನೀಡಲಾಗುವುದು ಎಂದು ಅವರು ಹೇಳಿದ್ದಾರೆ.
ಉದ್ಯೋಗಸ್ಥ ಮಹಿಳೆಯರಿಗೆ ಸುರಕ್ಷಿತ ಹಾಗೂ ಉತ್ತಮ ವಾತಾವರಣವನ್ನು ಕಲ್ಪಿಸಲು ಕೋಲಾರ ಜಿಲ್ಲೆಯ ನರಸಾಪುರದಲ್ಲಿ 173 ಕೋಟಿ ರೂ. ವೆಚ್ಚದಲ್ಲಿ 6 ಸಾವಿರ ಸಾಮಥ್ರ್ಯದ ಮಹಿಳಾ ವಸತಿ ನಿಲಯ ಹಾಗೂ ತುಮಕೂರು ಜಿಲ್ಲೆಯ ವಸಂತನರಸಾಪುರದ ಕೈಗಾರಿಕಾ ಪ್ರದೇಶದಲ್ಲಿ 20 ಕೋಟಿ ರೂ. ವೆಚ್ಚದಲ್ಲಿ ಮಹಿಳಾ ವಸತಿ ನಿಲಯಗಳ ನಿರ್ಮಾಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಉತ್ತರ ಕರ್ನಾಟಕ ಭಾಗದಲ್ಲಿ ಕೈಗಾರಿಕೆಗಳನ್ನು ಉತ್ತೇಜಿಸಲು ವಿಜಯಪುರದ ತಿಡಗುಂಡಿಯಲ್ಲಿ ಪ್ಲಗ್ ಅಂಡ್ ಪ್ಲೇ ಸೌಲಭ್ಯವಿರುವ ಫ್ಲಾಟ್ ಫ್ಯಾಕ್ಟರಿ ಸ್ಥಾಪನೆ. ಮಾಲಿನ್ಯ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಕೋಲಾರ ಜಿಲ್ಲೆಯ ಶಿವಾರಪಟ್ಟಣದ ಕೈಗಾರಿಕಾ ಪ್ರದೇಶದಲ್ಲಿ ಮಲ್ಟಿ ಸೆಕ್ಟರ್ ನೆಟ್ ಝಿರೋ ಸಸ್ಟೇನಬಿಲಿಟಿ ಇಂಡಸ್ಟ್ರೀಯಲ್ ಪಾರ್ಕ್ ಅನ್ನು ಪಿಪಿಪಿ ಮಾದರಿಯಲ್ಲಿ ಸ್ಥಾಪನೆ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.
ಚೆನ್ನೈ-ಬೆಂಗಳೂರು ಇಂಡಸ್ಟ್ರಿಯಲ್ ಕಾರಿಡಾರ್ ಯೋಜನೆಯಡಿ ಅಭಿವೃದ್ಧಿಪಡಿಸುತ್ತಿರುವ ತುಮಕೂರು ಕೈಗಾರಿಕಾ ನೋಡ್‍ನಲ್ಲಿ ಜಪಾನೀಸ್ ಇಂಡಸ್ಟ್ರಿಯಲ್ ಪಾರ್ಕ್ ಸ್ಥಾಪನೆ. ಎಂ.ಎಸ್.ಎಂ.ಇ ವಲಯಕ್ಕೆ ಪ್ರೋತ್ಸಾಹ ನೀಡಲು ಎಂ.ಎಸ್.ಇ ಕ್ಲಸ್ಟರ್ ಅಭಿವೃದ್ಧಿ ಯೋಜನೆಯಡಿ ಸಾಮಾನ್ಯ ಸೌಲಭ್ಯ ಕೇಂದ್ರಗಳ ಸ್ಥಾಪನೆ. ಬಿದರಿ ಕಲಾಕೃತಿಗಳ ಹಾಗೂ ಶ್ರೀಗಂಧ ಕಲಾಕೃತಿಗಳ ಕಚ್ಚಾ ವಸ್ತುಗಳನ್ನು ರಿಯಾಯಿತಿ ದರದಲ್ಲಿ ನೀಡಲು ಒಂದು ಕೋಟಿ ರೂ. ಅನುದಾನ ಒದಗಿಸುವುದಾಗಿ ಅವರು ತಿಳಿಸಿದ್ದಾರೆ.
ಕೈಗಾರಿಕಾ ನೀತಿ 2020-25 ರ ಅಡಿಯಲ್ಲಿ ಅಂದಾಜು 3,758 ಎಂ.ಎಸ್.ಎಂ.ಇ ಘಟಕಗಳಿಗೆ ನೆರವು ನೀಡಲು 2025-26ನೇ ಸಾಲಿನಲ್ಲಿ 185 ಕೋಟಿ ರೂ.ಅನುದಾನ. ಖನಿಜಗಳ ಸಾಗಾಣಿಕೆಗೆ ಪರವಾನಗಿ ನೀಡಲು ಹಾಗೂ ಇತರೆ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಲು ಇಂಟಿಗ್ರೇಟೆಡ್ ಲೀಸ್ ಮ್ಯಾನೇಜ್‍ಮೆಂಟ್ ಸಿಸ್ಟಮ್(ಐಎಲ್‍ಎಂಎಸ್) 2.0ತಂತ್ರಾಂಶ ಅಭಿವೃದ್ಧಿಪಡಿಸಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
2024-25ನೇ ಸಾಲಿನಲ್ಲಿ 10 ಕಬ್ಬಿಣದ ಅದಿರಿನ ಖನಿಜ ಬ್ಲಾಕ್‍ಗಳನ್ನು ಹರಾಜು ಪ್ರಕ್ರಿಯೆಗೊಳಪಡಿಸಿ, ಹೆಚ್ಚಿನ ರಾಜಸ್ವ ಸಂಗ್ರಹಣೆಗೆ ಕ್ರಮವಹಿಸಲಾಗಿದೆ. ಇದರಿಂದಾಗಿ ಮುಂದಿನ ವರ್ಷಗಳಲ್ಲಿ ಒಟ್ಟಾರೆ 5,847 ಕೋಟಿ ರೂ. ರಾಜಸ್ವ ಸಂಗ್ರಹಿಸಲಾಗುವುದು. ಸಕ್ಕರೆ ಕಾರ್ಖಾನೆಗಳ ವ್ಯಾಪ್ತಿಯಲ್ಲಿನ ರಸ್ತೆಗಳ ಅಭಿವೃದ್ಧಿಗಾಗಿ 2025-26ನೇ ಸಾಲಿಗೆ 20 ಕೋಟಿ ರೂ. ಒದಗಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಇತರೆ ಘೋಷಣೆಗಳು: ಕಾರ್ಮಿಕರ ಕೊರತೆಯಿಂದಾಗುವ ಕಬ್ಬು ಕಟಾವಿನ ಸಮಸ್ಯೆಯನ್ನು ನಿವಾರಿಸಲು ಹೈಟೆಕ್ ಹಾರ್ವೆಸ್ಟರ್ ಯಂತ್ರೋಪಕರಣಗಳನ್ನು ಬಾಡಿಗೆ ಆಧಾರದ ಮೇಲೆ ರೈತರಿಗೆ ಒದಗಿಸಲು 140 ಕ್ಕಿಂತ ಹೆಚ್ಚು ಶುಗರ್ ಕೇನ್ ಹಾರ್ವೆಸ್ಟರ್ ಹಬ್ಗಳನ್ನು (ಕಬ್ಬು ಕಟಾವು ಯಂತ್ರ) ಸ್ಥಾಪಿಸಲು 70 ಕೋಟಿ ರೂ. ಸಹಾಯಧನ.
ನೇಕಾರರಿಗೆ ಆರ್ಥಿಕ ಸ್ವಾವಲಂಬನೆಯನ್ನು ಕಲ್ಪಿಸಿ, ಅವರ ಜೀವನ ಮಟ್ಟವನ್ನು ಉನ್ನತೀಕರಿಸಲು ಮತ್ತು ನೇಕಾರಿಕೆ ಉದ್ದಿಮೆಯನ್ನು ಉತ್ತೇಜಿಸಲು, ಈಗ ಚಾಲ್ತಿಯಲ್ಲಿರುವ ಅನೇಕ ಉಪಯೋಜನೆಗಳನ್ನು ಒಗ್ಗೂಡಿಸಿ ‘ನೇಕಾರರ ಪ್ಯಾಕೇಜ್-2.0’ ಜಾರಿ.
ನೇಕಾರರಿಗೆ ಒಂದರಿಂದ 10 ಎಚ್‍ಪಿ ವರೆಗಿನ ವಿದ್ಯುತ್ ಮಗ್ಗಗಳಿಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. 10 ಎಚ್‍ಪಿ ಯಿಂದ 20 ಎಚ್‍ಪಿ ವರೆಗಿನ ಮಗ್ಗಗಳಿಗೆ ವಿಧಿಸಲಾಗಿದ್ದ ವಿದ್ಯುತ್ ಮಿತಿಯನ್ನು ಸಡಿಲಿಸಿದೆ. ಒಟ್ಟಾರೆ 90,645 ನೇಕಾರರಿಗೆ ಉಚಿತ ವಿದ್ಯುತ್ ಹಾಗೂ ರಿಯಾಯಿತಿ ವಿದ್ಯುತ್ ಸವಲತ್ತನ್ನು ಒದಗಿಸಲು 100 ಕೋಟಿ ರೂ.ಅನುದಾನ.
ಜವಳಿ ಹಾಗೂ ಸಿದ್ಧ ಉಡುಪು ಕ್ಷೇತ್ರದಲ್ಲಿ ಹೆಚ್ಚಿನ ಬಂಡವಾಳ ಆಕರ್ಷಿಸಿ ಸುಮಾರು ಎರಡು ಲಕ್ಷ ಉದ್ಯೋಗ ಸೃಜಿಸುವ ಉದ್ದೇಶದಿಂದ ನೂತನ ‘ಜವಳಿ ನೀತಿ 2025-30’ ರೂಪಿಸಲಾಗುವುದು. ಕಾರ್ಕಳ, ರಾಣೆಬೆನ್ನೂರು, ರಾಯಚೂರು, ಕಡೂರು ಹಾಗೂ ಚಿಕ್ಕಮಗಳೂರಿನಲ್ಲಿ ಪಿ.ಪಿ.ಪಿ ಮಾದರಿಯಲ್ಲಿ ಹಾಗೂ ಕೇಂದ್ರ ಸರಕಾರದ ಸಹಯೋಗದೊಂದಿಗೆ ಕಲಬುರಗಿಯಲ್ಲಿ ಪಿ.ಎಂ. ಮಿತ್ರ ಜವಳಿ ಪಾರ್ಕ್ ಸ್ಥಾಪನೆ.