ಮಹಿಳಾ ಸ್ವಸಹಾಯ ಗುಂಪುಗಳ ಚಟುವಟಿಕೆಗೆ ‘ಅಕ್ಕ ಕೋ-ಆಪರೇಟಿವ್ ಸೊಸೈಟಿ’ ಸ್ಥಾಪನೆ : ಸಿದ್ದರಾಮಯ್ಯ

ಬೆಂಗಳೂರು : ಸ್ವಸಹಾಯ ಗುಂಪುಗಳ ಮಹಿಳೆಯರಿಗೆ ಜೀವನೋಪಾಯ ಚಟುವಟಿಕೆ ಕೈಗೊಳ್ಳಲು ತ್ವರಿತ ಸಾಲ ಒದಗಿಸಿ, ಆರ್ಥಿಕ ಅಗತ್ಯತೆಗಳ ಪೂರೈಕೆ ಮತ್ತು ಭದ್ರತೆ ಒದಗಿಸಿ, ಉಳಿತಾಯ ಮತ್ತು ಉದ್ಯಮಶೀಲತೆ ಹೆಚ್ಚಿಸುವ ಉದ್ದೇಶದಿಂದ ರಾಜ್ಯ ಮಟ್ಟದಲ್ಲಿ ‘ಅಕ್ಕ ಕೋ-ಆಪರೇಟಿವ್ ಸೊಸೈಟಿ’ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿ ಆಯವ್ಯಯ ಮಂಡಿಸಿದ ಅವರು, ‘ಗೃಹಲಕ್ಷ್ಮೀ’ ಯೋಜನೆಯ ಯಜಮಾನಿಯರನ್ನು ಸ್ವಸಹಾಯ ಗುಂಪುಗಳ ಸದಸ್ಯರುಗಳನ್ನಾಗಿಸಿ ರಾಜ್ಯಮಟ್ಟದ ‘ಅಕ್ಕ ಕೋ-ಆಪರೇಟಿವ್ ಸೊಸೈಟಿ’ ವ್ಯಾಪ್ತಿಗೆ ತರಲಾಗುವುದು. ರಾಷ್ಟ್ರೀಯ ಜೀವನೋಪಾಯ ಅಭಿಯಾನದಡಿ ಮಹಿಳಾ ಸ್ವ-ಸಹಾಯ ಸಂಘಗಳಿಂದ ಆಯ್ದ 50 ಸ್ಥಳಗಳಲ್ಲಿ ಶಿಶು ಪಾಲನೆಗಾಗಿ ‘ವಾತ್ಸಲ್ಯ ಕೇಂದ್ರ’ಗಳನ್ನು ಸ್ಥಾಪಿಸಲಾಗುವುದು. ತಜ್ಞ ಚಿಕಿತ್ಸೆ ಪಡೆಯಲು ಸರಕಾರಿ ಆಸ್ಪತ್ರೆಗಳಿಗೆ ಆಗಮಿಸುತ್ತಿರುವ ಬಡ ರೋಗಿಗಳು ಹಾಗೂ ಅವರ ಆರೈಕದಾರರಿಗಾಗಿ ವಿಶ್ರಾಂತಿ ಗೃಹಗಳನ್ನು ಸ್ಥಾಪಿಸಲಾಗುವುದು ಎಂದು ಹೇಳಿದರು.
ಇಂದಿರಾ ಕ್ಯಾಂಟೀನ್‍ಗಳ ನಿರ್ವಹಣೆಯನ್ನು ರಾಷ್ಟ್ರೀಯ ಜೀವನೋಪಾಯ ಅಭಿಯಾನದ ಸ್ವ-ಸಹಾಯ ಸಂಘಗಳ ಮಹಿಳೆಯರ ಮೂಲಕ ನಿರ್ವಹಿಸುವ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ 10 ನಗರ ಪ್ರದೇಶಗಳಲ್ಲಿ ಪ್ರಾರಂಭಿಸಲಾಗುವುದು. ಪಿ.ಎಮ್. ಸ್ವನಿಧಿ ಯೋಜನೆಯಡಿ ಸಾಲದ ಗರಿಷ್ಠ ಮಿತಿಯನ್ನು ತಲುಪಿರುವ ಬೀದಿಬದಿ ವ್ಯಾಪಾರಿಗಳು, ತಮ್ಮ ವ್ಯಾಪಾರ ವಹಿವಾಟನ್ನು ವಿಸ್ತರಿಸಲು ಒಂದು ಲಕ್ಷದವರೆಗಿನ ಸಾಲ ಪಡೆದಲ್ಲಿ ಶೇ.8ರಷ್ಟು ಬಡ್ಡಿ ಸಹಾಯಧನವನ್ನು ಸರಕಾರದಿಂದ ನೀಡಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದರು.
ಮಹಿಳಾ ಸಬಲೀಕರಣಕ್ಕಾಗಿ ಗ್ರಾಮ ಪಂಚಾಯತಿ ಸ್ವ-ಸಹಾಯ ಸಂಘಗಳ ಸಹಭಾಗಿತ್ವದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತಿ ಕಚೇರಿ ಆವರಣಗಳಲ್ಲಿ ‘ಅಕ್ಕ ಕೆಫೆ ಮತ್ತು ಕ್ಯಾಂಟೀನ್’ ಸ್ಥಾಪಿಸಲಾಗುವುದು. ಪ್ರತಿ ತಾಲ್ಲೂಕಿನಲ್ಲಿ ಒಂದು ‘ಸಮಗ್ರ ಕೃಷಿ ಕ್ಲಸ್ಟರ್’ ಅಭಿವೃದ್ಧಿಪಡಿಸಲಾಗುವುದು. ಶಾಲೆ, ಅಂಗನವಾಡಿ ಮತ್ತು ವಸತಿ ನಿಲಯಗಳಿಗೆ ಮೊಟ್ಟೆ ಮತ್ತು ತರಕಾರಿ ಪೂರೈಸಲು ಸ್ವ-ಸಹಾಯ ಸಂಘಗಳ ‘ಕಿರು ಉದ್ಯಮ’ಗಳನ್ನು ಪ್ರೋತ್ಸಾಹಿಸಲಾಗುವುದು. ಸ್ವ-ಸಹಾಯ ಸಂಘಗಳ ಮೂಲಕ ಪ್ರತಿ ಜಿಲ್ಲೆಯಲ್ಲಿ ಒಂದು ‘ಸಮುದಾಯ ಪ್ರವಾಸಿ ಯೋಜನೆ’ಯನ್ನು ಅನುಷ್ಠಾನ ಮಾಡಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.
ನಿರುದ್ಯೋಗಿಗಳಾಗಿರುವ ಪದವೀಧರರಿಗೆ ಹಾಗೂ ಡಿಪ್ಲೋಮ ಪಡೆದವರಿಗೆ ನಿರುದ್ಯೋಗ ಭತ್ಯೆಯನ್ನು ನೀಡಲು ನಮ್ಮ ಸರಕಾರವು ‘ಯುವನಿಧಿ’ ಯೋಜನೆಯನ್ನು ಅನುಷ್ಠಾನಗೊಳಿಸಿದೆ. ಈಗಾಗಲೇ ಸುಮಾರು 2.58 ಲಕ್ಷ ಯುವಕರು ಈ ಯೋಜನೆಯಡಿ ನೋಂದಾಯಿಸಿಕೊಂಡಿದ್ದು, 286 ಕೋಟಿ ರೂ. ನೇರ ನಗದು ವರ್ಗಾವಣೆ ಮಾಡಲಾಗಿದೆ. ನಿರುದ್ಯೋಗ ಭತ್ಯೆ ನೀಡುವುದರೊಂದಿಗೆ ಈ ಯುವಕರಿಗೆ ಇಂಡಸ್ಟ್ರಿ ಲಿಂಕೇಜ್ ಸೆಲ್ ಅಡಿಯಲ್ಲಿ ಭವಿಷ್ಯ ಕೌಶಲ್ಯ ತರಬೇತಿ ನೀಡಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದರು.
ನಮ್ಮ ಸರಕಾರದ ಹಿಂದಿನ ಆಡಳಿತಾವಧಿಯಲ್ಲಿ, ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆ(ಸಿಎಂಕೆಕೆವೈ)ಯನ್ನು ಪ್ರಾರಂಭಿಸಲಾಗಿತ್ತು. ಪ್ರಸ್ತುತ, ರಾಜ್ಯದ ಯುವಕರ ಉದ್ಯೋಗಾರ್ಹತೆ ಮತ್ತು ಉದ್ಯಮಶೀಲತೆಯನ್ನು ಇನ್ನಷ್ಟು ಉತ್ತೇಜಿಸಲು ಯೋಜನೆಯ ಮಾರ್ಗಸೂಚಿಗಳನ್ನು ಪರಿಷ್ಕರಿಸಿ ಸಿಎಂಕೆಕೆವೈ-2.0 ಅನ್ನು ಜಾರಿಗೊಳಿಸಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.
ಸಿಎಂಕೆಕೆವೈ-2.0 ಯೋಜನೆಯಡಿ ಸಾಂಪ್ರದಾಯಿಕ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳೊಂದಿಗೆ ರಾಜ್ಯದ ನರ್ಸಿಂಗ್ ವಿದ್ಯಾರ್ಥಿಗಳಿಗೆ ಜರ್ಮನ್, ಇಟಾಲಿಯನ್, ಸ್ಪ್ಯಾನಿಷ್ ಮತ್ತು ಇತರೆ ವಿದೇಶಿ ಭಾಷಾ ಕೌಶಲ್ಯ ತರಬೇತಿ ನೀಡಲಾಗುವುದು. ವಿದೇಶದಲ್ಲಿ ಉದ್ಯೋಗಾವಕಾಶ ಕಲ್ಪಿಸಲು ಅಂತಾರಾಷ್ಟ್ರೀಯ ವಲಸೆ ಕೇಂದ್ರದ ಮೂಲಕ ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಉದ್ಯೋಗ ಮೇಳವನ್ನು ಆಯೋಜಿಸಲಾಗುವುದು. ವಿದ್ಯಾರ್ಥಿಗಳು ಭವಿಷ್ಯದಲ್ಲಿ ಸೂಕ್ತ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಲು ಮಾರ್ಗದರ್ಶನವನ್ನು ಒದಗಿಸಲು ‘ನನ್ನ ವೃತ್ತಿ, ನನ್ನ ಆಯ್ಕೆ’ ಕಾರ್ಯಕ್ರಮದಡಿ ಸರಕಾರಿ ಶಾಲಾ/ಕಾಲೇಜುಗಳಲ್ಲಿನ 2.30 ಲಕ್ಷ ವಿದ್ಯಾರ್ಥಿಗಳಿಗೆ ವೃತ್ತಿಮಾರ್ಗದರ್ಶನ ನೀಡಲಾಗುವುದು ಎಂದು ಸಿದ್ದರಾಮಯ್ಯ ವಿವರಿಸಿದರು.
ವಿಶ್ವ ಕೌಶಲ್ಯ ಸ್ಪರ್ಧೆಯ ಪೂರ್ವಸಿದ್ಧತೆಗಾಗಿ ಆಯೋಜಿಸಲಾಗುವ ರಾಷ್ಟ್ರೀಯ ಮಟ್ಟದ ಇಂಡಿಯಾ ಸ್ಕಿಲ್ಸ್-2026 ಸ್ಪರ್ಧೆಯನ್ನು ಬೆಂಗಳೂರಿನಲ್ಲಿ ಆಯೋಜಿಸಲು ಉದ್ದೇಶಿಸಲಾಗಿದೆ. ಅಳಿವಿನಂಚಿನಲ್ಲಿರುವ ಪಾರಂಪರಿಕ ಮತ್ತು ಪ್ರಾದೇಶಿಕ ಕೌಶಲ್ಯಗಳನ್ನು ಮುಂದಿನ ಪೀಳಿಗೆಗೆ ತಲುಪಿಸಲು 2,000 ಅಭ್ಯರ್ಥಿಗಳಿಗೆ ಅಗತ್ಯವಿರುವ ಟೂಲ್ ಕಿಟ್‍ಗಳೊಂದಿಗೆ ಅಲ್ಪಾವಧಿ ತರಬೇತಿಯನ್ನು ನೀಡಲಾಗುವುದು. ಲಂಬಾಣಿ ಜನಾಂಗದ ಕಸೂತಿ ಕಲೆಯ ಬಗ್ಗೆ ತರಬೇತಿಯನ್ನು 1,000 ಅಭ್ಯರ್ಥಿಗಳಿಗೆ ದಾವಣಗೆರೆ ಮತ್ತು ಬೀದರ್ ಜಿಲ್ಲೆಗಳಲ್ಲಿನ ಕೌಶಲ್ಯ ತರಬೇತಿ ಕೇಂದ್ರಗಳಲ್ಲಿ ನೀಡಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದರು.
ಹಿಂದಿನ ಸಾಲಿನ ಆಯವ್ಯಯದಲ್ಲಿ ಘೋಷಿಸಲಾದ ಕಲಬುರಗಿ ಜಿ.ಟಿ.ಟಿ.ಸಿ ಬಹು ಕೌಶಲ್ಯ ಅಭಿವೃದ್ಧಿ ಕೇಂದ್ರಕ್ಕೆ 60 ಕೋಟಿ ರೂ. ಹಾಗೂ ಕೊಪ್ಪಳದ ತಳಕಲ್‍ನಲ್ಲಿರುವ ಕೇಂದ್ರಕ್ಕೆ 90 ಕೋಟಿ ರೂ. ಅನ್ನು ಕೆಕೆಆರ್‍ಡಿಬಿ ವತಿಯಿಂದ ಒದಗಿಸಲಾಗಿತ್ತು. ಈ ಎರಡು ಕೇಂದ್ರಗಳಿಗೆ ಉಳಿದ ಅನುದಾನವನ್ನು ಒದಗಿಸುವುದರೊಂದಿಗೆ ಮೈಸೂರಿನ ವರುಣಾದಲ್ಲಿನ ಜಿ.ಟಿ.ಟಿ.ಸಿ. ಬಹು ಕೌಶಲ್ಯ ಅಭಿವೃದ್ಧಿ ಕೇಂದ್ರಕ್ಕೆ ನಬಾರ್ಡ್ ಸಹಯೋಗದೊಂದಿಗೆ 60 ಕೋಟಿ ರೂ. ಅನುದಾನ ಒದಗಿಸಿ ಪ್ರಸಕ್ತ ವರ್ಷದಲ್ಲಿ ಸದರಿ ಕೇಂದ್ರಗಳನ್ನು ಕಾರ್ಯಾರಂಭ ಮಾಡಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.
ಮಧುಗಿರಿ ಮತ್ತು ಇಂಡಿಯಲ್ಲಿ ನಬಾರ್ಡ್ ಸಹಯೋಗದೊಂದಿಗೆ ಹಾಗೂ ಕಂಪ್ಲಿ, ರಾಯಚೂರು ಗ್ರಾಮೀಣ ಮತ್ತು ಸಿಂಧನೂರಿನಲ್ಲಿ ಕೆಕೆಆರ್‍ಡಿಬಿ ಮ್ಯಾಕ್ರೋ ಅನುದಾನದಡಿಯಲ್ಲಿ ನೂತನ ಜಿ.ಟಿ.ಟಿ.ಸಿ.ಗಳನ್ನು ಸ್ಥಾಪಿಸಲು ಕ್ರಮವಹಿಸಲಾಗುವುದು. ಅಲ್ಲದೆ, ಆಡಳಿತದಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಕೌಶಲ್ಯಾಭಿವೃದ್ಧಿ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗಾವಣೆಯನ್ನು ಆನ್‍ಲೈನ್ ಕೌನ್ಸೆಲಿಂಗ್ ಮೂಲಕ ನಿರ್ವಹಿಸಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದರು.
ಜಿಐಝೆಡ್ ಸಹಯೋಗದೊಂದಿಗೆ ಜಿಟಿಟಿಸಿ ಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಜರ್ಮನಿ ಹಾಗೂ ಇತರ ಯುರೋಪಿಯನ್ ದೇಶಗಳಲ್ಲಿ ಲಭ್ಯವಿರುವ ಉದ್ಯೋಗಾವಕಾಶಗಳ ಪೂರ್ಣ ಉಪಯೋಗ ಪಡೆಯಲು ವಿವಿಧ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. 20 ಸಾವಿರ ವಿದ್ಯಾರ್ಥಿಗಳಿಗೆ ಭಾಷಾ ತರಬೇತಿ ನೀಡಲು 20 ಕೋಟಿ ರೂ. ವೆಚ್ಚದಲ್ಲಿ 36 ಜರ್ಮನ್ ಭಾಷಾ ಪ್ರಯೋಗಾಲಯಗಳನ್ನು ನಿರ್ಮಿಸಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.
ಜರ್ಮನ್ ಛೇಂಬರ್ ಆಫ್ ಕಾಮರ್ಸ್ ಸಹಯೋಗದಲ್ಲಿ 5,000 ವಿದ್ಯಾರ್ಥಿಗಳಿಗೆ ಜಾಗತಿಕ ಉದ್ಯೋಗಾವಕಾಶವನ್ನು ಹೆಚ್ಚಿಸಲು ಡಿಪ್ಲೊಮ ಕೋರ್ಸ್ ಭಾಗವಾಗಿ ಒಂದು ವರ್ಷದ ತರಬೇತಿಯನ್ನು ಜರ್ಮನಿಯಲ್ಲಿ ಪಡೆಯಲು ಅವಕಾಶ ಕಲ್ಪಿಸಲಾಗುವುದು. ಜಿಟಿಟಿಸಿ, ಜರ್ಮನ್ ವಿಶ್ವವಿದ್ಯಾಲಯಗಳು ಮತ್ತು ಉದ್ಯಮಗಳ ಸಹಯೋಗದೊಂದಿಗೆ ಜರ್ಮನಿಯ ಡ್ಯುಯಲ್ ಎಜುಕೇಷನ್ ಮಾದರಿಯಲ್ಲಿ ಬಿ.ಇ ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದರು.