ಪರಿಶಿಷ್ಟರ ಕಲ್ಯಾಣಕ್ಕೆ ಎಸ್‍ಸಿಎಸ್‍ಪಿ-ಟಿಎಸ್‍ಪಿ ಯೋಜನೆಯಡಿ 42ಸಾವಿರ ಕೋಟಿ ರೂ. ಅನುದಾನ : ಸಿದ್ದರಾಮಯ್ಯ

ಬೆಂಗಳೂರು: ಪರಿಶಿಷ್ಟರ ಕಲ್ಯಾಣಕ್ಕಾಗಿ ಎಸ್‍ಸಿಎಸ್‍ಪಿ ಉಪಯೋಜನೆ 29,992ಕೋಟಿ ರೂ. ಹಾಗೂ ಬುಡಕಟ್ಟು ಉಪಯೋಜನೆಗೆ 12,026 ಕೋಟಿ ರೂ.ಸೇರಿದಂತೆ ಒಟ್ಟು 42,018 ಕೋಟಿ ರೂ. ಅನುದಾನವನ್ನು ಒದಗಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಶುಕ್ರವಾರ ವಿಧಾನಸಭೆಯಲ್ಲಿ ಪ್ರಸಕ್ತ ಸಾಲಿನ ಆಯವ್ಯಯ ಮಂಡಿಸಿದ ಅವರು, ಸಮಾಜ ಕಲ್ಯಾಣ ಇಲಾಖೆಯಡಿ ಬರುವ ನಿಗಮಗಳಿಗೆ 488 ಕೋಟಿ ರೂ. ಅನುದಾನವನ್ನು ಒದಗಿಸಲಾಗಿದೆ. ಪರಿಶಿಷ್ಟ ಜಾತಿ/ ಪಂಗಡ ಸಮುದಾಯದ ಮಹಿಳಾ ಸ್ವಸಹಾಯ ಸಂಘಗಳಿಗೆ ನೀಡುತ್ತಿರುವ ಸಹಾಯಧನದ ಮೊತ್ತವನ್ನು 2.50 ಲಕ್ಷ ರೂ. ಹೆಚ್ಚಿಸಲಾಗುವುದು ಎಂದರು.
ರಾಜ್ಯದಲ್ಲಿನ ಪರಿಶಿಷ್ಟ ಜಾತಿ ಕಾಲನಿಗಳಲ್ಲಿ 559 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಮಂಜೂರಾತಿ ನೀಡಲಾಗಿದ್ದು, 2025-26 ನೆ ಸಾಲಿನಲ್ಲಿ ಈ ಕಾಮಗಾರಿಗಳನ್ನು ಪೂರ್ಣಗೊಳಿಸಲು 222 ಕೋಟಿ ರೂ. ಒದಗಿಸಲಾಗುವುದು ಎಂದು ಅವರು ತಿಳಿಸಿದರು.
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಮಾಡಿರುವ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಮತ್ತು ಕೊಲಂಬಿಯಾ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗಕ್ಕೆ ಆಯ್ಕೆಯಾದ ಇಬ್ಬರು ವಿದ್ಯಾರ್ಥಿಗಳಿಗೆ ಡಾ. ಬಿ.ಆರ್.ಅಂಬೇಡ್ಕರ್ ಫೆಲೋಶಿಪ್ ಯೋಜನೆಯಡಿ ಒಂದು ಕೋಟಿರೂ. ಅನುದಾನ ಒದಗಿಸಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದರು.
ಬಂಜಾರ ಸಮುದಾಯದ ಧಾರ್ಮಿಕ ಸ್ಥಳವಾದ ದಾವಣಗೆರೆ ಜಿಲ್ಲೆಯ ಸಂತ ಸೇವಾಲಾಲ್ ಪುಣ್ಯಕ್ಷೇತ್ರ ಸೂರಗೊಂಡನಕೊಪ್ಪದಲ್ಲಿ ಒಂದು ವಸತಿ ಶಾಲೆಯನ್ನು ಕ್ರೈಸ್ ವತಿಯಿಂದ ಪ್ರಾರಂಭಿಸಲಾಗುವುದು. ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳು ಅದೇ ಕಾಲೇಜಿನ ವಸತಿ ನಿಲಯಗಳಲ್ಲಿ ಪ್ರವೇಶ ಪಡೆದಿದ್ದಲ್ಲಿ, ಅವರಿಗೆ ವಸತಿ ನಿಲಯದ ವೆಚ್ಚವಾಗಿ ಪ್ರತಿ ಮಾಹೆ 3,500 ರೂ.ಗಳನ್ನು ಪಾವತಿಸಲಾಗುವುದು ಎಂದು ಅವರು ತಿಳಿಸಿದರು.
ನ್ಯಾಯಾಂಗ :
* ನ್ಯಾಯಾಂಗ ದಾಖಲೆಗಳ ಅನುವಾದ ಮತ್ತಿತರ ಮಾಹಿತಿ ಪಡೆಯಲು 2 ಕೋಟಿ ರೂ. ವೆಚ್ಚದಲ್ಲಿ ಸ್ಮಾರ್ಟ್ ವ್ಯವಸ್ಥೆ
* ಹೈಕೋರ್ಟ್ ಮತ್ತು ಜಿಲ್ಲಾ ನ್ಯಾಯಾಲಯಗಳಲ್ಲಿನ ಗ್ರಂಥಾಲಯಗಳನ್ನು ಮೇಲ್ದರ್ಜೆಗೇರಿಸಲು ಮತ್ತು ಡಿಜಿಟಲ್ ಗ್ರಂಥಾಲಯಗಳನ್ನು ಪ್ರಾರಂಭಿಸಲು 2 ಕೋಟಿ ರೂ. ಹಂಚಿಕೆ
* ಅಡ್ವೊಕೇಟ್ ಜನರಲ್ ಕಚೇರಿ ಸಹಯೋಗದೊಂದಿಗೆ 50 ಲಕ್ಷ ರೂ. ವೆಚ್ಚದಲ್ಲಿ ಆನ್‍ಲೈನ್ ಗ್ರಂಥಾಲಯ ಸ್ಥಾಪನೆ
* ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಭೂಸ್ವಾಧೀನ ಕುರಿತಂತೆ ನ್ಯಾಯಾಲಯಗಳಲ್ಲಿ ದಾಖಲಿಸಿರುವ ಪ್ರಕರಣಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಲು ಬಾಗಲಕೋಟೆಯಲ್ಲಿ ವಿಶೇಷ ತ್ವರಿತಗತಿ ನ್ಯಾಯಾಲಯ ಸ್ಥಾಪನೆ
* ಕುಕನೂರು ಮತ್ತು ಕಾರಟಗಿ ತಾಲೂಕಿನಲ್ಲಿ ಜೆಎಂಎಫ್‍ಸಿ ನ್ಯಾಯಾಲಯ ಸ್ಥಾಪನೆಗೆ 9 ಕೋಟಿ ರೂ.