ಮೂರು ಕ್ಷೇತ್ರಗಳ ಉಪ ಚುನಾವಣೆ: ನಾಳೆ (ನ.23) ಮತ ಎಣಿಕೆ
ಸಾಂದರ್ಭಿಕ ಚಿತ್ರ (PTI)
ಬೆಂಗಳೂರು: ಚನ್ನಪಟ್ಟಣ, ಶಿಗ್ಗಾಂವಿ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರಗಳಿಗೆ ನ.13ರಂದು ನಡೆದ ಉಪ ಚುನಾವಣೆಯ ಮತಗಳ ಎಣಿಕೆ ಕಾರ್ಯವು ಶನಿವಾರ (ನ.23) ಬೆಳಗ್ಗೆ 8 ಗಂಟೆಯಿಂದ ಆರಂಭಗೊಳ್ಳಲಿದೆ. ಮಧ್ಯಾಹ್ನದ ವೇಳೆಗೆ ಫಲಿತಾಂಶ ಪ್ರಕಟಗೊಳ್ಳುವ ಸಾಧ್ಯತೆಯಿದೆ.
ಮತ ಎಣಿಕೆಗೆ ಅವಶ್ಯವಿರುವ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದೆ. ಇವಿಎಂ ಯಂತ್ರಗಳಲ್ಲಿ ಚಲಾವಣೆಯಾದ ಮತಗಳ ಎಣಿಕೆಗೆ ಮುನ್ನ ಅಂಚೆ ಮತ ಎಣಿಕೆ ಕಾರ್ಯ ನಡೆಯಲಿದೆ. ಅಂಚೆ ಮತ ಎಣಿಕೆಗೆ ಪ್ರತ್ಯೇಕ ಟೇಬಲ್ ವ್ಯವಸ್ಥೆ ಮಾಡಲಾಗಿದೆ.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಮತಗಳ ಎಣಿಕೆಯು ರಾಮನಗರ ಜಿಲ್ಲೆಯ ಸರಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯಲಿದೆ. ಒಟ್ಟು 15 ಟೇಬಲ್ನಲ್ಲಿ ಮತಗಳ ಎಣಿಕೆ ನಡೆಯಲಿದೆ. ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಮತಗಳ ಎಣಿಕೆಯು ಹಾವೇರಿ ಜಿಲ್ಲೆಯ ದೇವಗಿರಿಯಲ್ಲಿರುವ ಸರಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ 14 ಟೇಬಲ್ ಗಳಲ್ಲಿ ಮತಗಳ ಎಣಿಕೆ ನಡೆಯಲಿದೆ.
ಸಂಡೂರು ವಿಧಾನಸಭಾ ಕ್ಷೇತ್ರದ ಮತಗಳ ಎಣಿಕೆಯು ಬಳ್ಳಾರಿ ಜಿಲ್ಲೆಯ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ 14 ಟೇಬಲ್ ಗಳಲ್ಲಿ ಮತಗಳ ಎಣಿಕೆ ಕಾರ್ಯ ನಡೆಯಲಿದೆ. ಶಿಗ್ಗಾಂವಿ ಕ್ಷೇತ್ರದ ಮತ ಎಣಿಕೆ ಕಾರ್ಯಕ್ಕಾಗಿ ಒಬ್ಬ ಚುನಾವಣಾಧಿಕಾರಿ, ಇಬ್ಬರು ಸಹಾಯಕ ಚುನಾವಣಾಧಿಕಾರಿ, 19 ಸೂಕ್ಷ್ಮ ವೀಕ್ಷಕರು, 17 ಎಣಿಕೆ ಮೇಲ್ವಿಚಾರಕರು ಹಾಗೂ 18 ಎಣಿಕೆ ಸಹಾಯಕರನ್ನು ನಿಯೋಜಿಸಲಾಗಿದೆ.
ಸಂಡೂರು ಕ್ಷೇತ್ರದ ಮತ ಎಣಿಕೆ ಕಾರ್ಯಕ್ಕಾಗಿ ಒಬ್ಬ ಚುನಾವಣಾಧಿಕಾರಿ, ಒಬ್ಬ ಸಹಾಯಕ ಚುನಾವಣಾಧಿಕಾರಿ, 20 ಸೂಕ್ಷ್ಮ ವೀಕ್ಷಕರು, 19 ಎಣಿಕೆ ಮೇಲ್ವಿಚಾರಕರು ಹಾಗೂ 21 ಎಣಿಕೆಯ ಸಹಾಯಕರುಯನ್ನು ನಿಯೋಜಿಸಲಾಗಿದೆ. ಅದೇ ರೀತಿ, ಚನ್ನಪಟ್ಟಣ ಕ್ಷೇತ್ರದ ಮತ ಎಣಿಕೆ ಕಾರ್ಯಕ್ಕಾಗಿ ಒಬ್ಬ ಚುನಾವಣಾಧಿಕಾರಿ, ಒಬ್ಬ ಸಹಾಯಕ ಚುನಾವಣಾಧಿಕಾರಿ, ಒಬ್ಬ ಹೆಚ್ಚುವರಿ ಸಹಾಯಕ ಚುನಾವಣಾಧಿಕಾರಿ, 30 ಸೂಕ್ಷ್ಮ ವೀಕ್ಷಕರು, 30 ಎಣಿಕೆ ಮೇಲ್ವಿಚಾರಕರು ಹಾಗೂ 30 ಎಣಿಕೆಯ ಸಹಾಯಕರನ್ನು ನಿಯೋಜಿಸಲಾಗಿದೆ.
ಮೊಬೈಲ್ ಫೋನ್ ಮೇಲಿನ ನಿಬರ್ಂಧಗಳು: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ವೀಕ್ಷಕರನ್ನು ಹೊರತುಪಡಿಸಿ ಬೇರೆ ಯಾವುದೇ ವ್ಯಕ್ತಿಗಳು ಮತ ಎಣಿಕೆ ಸಭಾಂಗಣದ ಒಳಗೆ ಮೊಬೈಲ್ ಫೋನ್ ಕೊಂಡೊಯ್ಯುವಂತಿಲ್ಲ.
ವೀಕ್ಷಕರ ಜೊತೆಗೆ, ಚುನಾವಣಾಧಿಕಾರಿ ಅಥವಾ ಸಹಾಯಕ ಚುನಾವಣಾಧಿಕಾರಿ ಅಥವಾ ಎಣಿಕೆ ಮೇಲ್ವಿಚಾರಕರು, ಅವರ ಮೊಬೈಲ್ ಫೋನ್ ‘ಇಟಿಪಿಬಿ’ಗಳಿಗೆ ಲಿಂಕ್ ಮಾಡಲ್ಪಟ್ಟಿದೆ, ಅವರು ಇಟಿಪಿಬಿ ಗಳ ಪೂರ್ವ-ಎಣಿಕೆಯ ಉದ್ದೇಶಕ್ಕಾಗಿ, ಅಪ್ ಡೇಟ್ ಮಾಡಲು ಹಾಗೂ ಒನ್ ಟೈಮ್ ಪಾಸ್ವರ್ಡ್(ಒಟಿಪಿ) ಸ್ವೀಕರಿಸಲು ಮೊಬೈಲ್ ಫೋನ್ ಅನ್ನು ಒಯ್ಯಲು ಅಧಿಕಾರ ಹೊಂದಿದ್ದಾರೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯ ಪ್ರಕಟಣೆಯಲ್ಲಿ ತಿಳಿಸಿದೆ.